ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದ ಸುಪ್ರೀಂ; ಬಯಲಾಗಲಿದೆ ದೇಣಿಗೆ ವಿವರ, ನಗದೀಕರಿಸದ ಹಣ ದೇಣಿಗೆದಾರರಿಗೆ ಮರುಪಾವತಿ

ಚುನಾವಣಾ ಬಾಂಡ್‌ ಯೋಜನೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್‌ಬಿಐ) ಬಾಂಡ್‌ಗಳನ್ನು ಖರೀದಿಸಿ ಅನಾಮಧೇಯವಾಗಿ ರಾಜಕೀಯ ಪಕ್ಷಕ್ಕೆ ಹಣ ಕಳುಹಿಸಲು ದಾನಿಗಳಿಗೆ ಅನುವು ಮಾಡಿಕೊಡುತ್ತಿತ್ತು .
ಚುನಾವಣಾ ಬಾಂಡ್ ಗಳು ಮತ್ತು ಸುಪ್ರೀಂ ಕೋರ್ಟ್
ಚುನಾವಣಾ ಬಾಂಡ್ ಗಳು ಮತ್ತು ಸುಪ್ರೀಂ ಕೋರ್ಟ್
Published on

ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆಗಳನ್ನು ನೀಡಲು ಅನುಮತಿಸುವ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್‌ ಗುರುವಾರ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ. (ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ).

ಯೋಜನೆ ಜಾರಿಗೆ ತರಲೆಂದು ಆದಾಯ ತೆರಿಗೆ ಕಾಯಿದೆ ಮತ್ತು ಜನ ಪ್ರತಿನಿಧಿ ಕಾಯಿದೆಗೆ ಮಾಡಿದ ತಿದ್ದುಪಡಿಗಳನ್ನು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್‌ ಗವಾಯಿಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ಸದಸ್ಯರ ಸಾಂವಿಧಾನಿಕ ಪೀಠ ಸರ್ವಾನುಮತದಿಂದ ರದ್ದುಗೊಳಿಸಿತು.

ಚುನಾವಣಾ ಬಾಂಡ್ ಯೋಜನೆಯು ತನ್ನ ಅನಾಮಧೇಯ ಸ್ವರೂಪದಿಂದಾಗಿ ಮಾಹಿತಿ ಹಕ್ಕಿನ ಉಲ್ಲಂಘನೆಯಾಗಿದ್ದು ಸಂವಿಧಾನದ 19 (1) (ಎ) ವಿಧಿಯಡಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139 ಮತ್ತು ಹಣಕಾಸು ಕಾಯಿದೆಯ 2017ರ ಸೆಕ್ಷನ್ 13 (ಬಿ) ಗೆ ತಿದ್ದುಪಡಿ ಮಾಡಿ ಸೆಕ್ಷನ್ 29 (1) (ಸಿ) ಗೆ ಅವಕಾಶ ನೀಡುವ ಚುನಾವಣಾ ಬಾಂಡ್ ಯೋಜನೆ ಸಂವಿಧಾನದ 19 (1) (ಎ) ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಚುನಾವಣಾ ಬಾಂಡ್‌ಗಳನ್ನು ವಿತರಿಸುವ ಬ್ಯಾಂಕ್ ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಮತ್ತು ಸ್ವೀಕರಿಸಲಾದ ಎಲ್ಲಾ ವಿವರಗಳನ್ನು ಮಾರ್ಚ್ 6 ರೊಳಗೆ ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

15 ದಿನಗಳ ಸಿಂಧುತ್ವದ ಅವಧಿಯೊಳಗೆ ಇರುವ ಆದರೆ ರಾಜಕೀಯ ಪಕ್ಷಗಳು ಇನ್ನೂ ನಗದೀಕರಿಸದೆ ಇರುವ ಬಾಂಡ್‌ಗಳನ್ನು ಅವುಗಳನ್ನು ಖರೀದಿಸಿದ್ದವರಿಗೆ ರಾಜಕೀಯ ಪಕ್ಷಗಳು ಹಿಂತಿರುಗಿಸಬೇಕು.  ಬಾಂಡ್‌ ಹಿಂಪಡೆದ ಬಳಿಕ ಬಾಂಡ್‌ ವಿತರಿಸಿದ್ದ ಬ್ಯಾಂಕ್‌ ಖರೀದಿದಾರರ ಖಾತೆಗೆ ಹಣ ಹಿಂತಿರುಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಬರೆದ ಎರಡು ತೀರ್ಪುಗಳು ಸಹಮತದಿಂದ ಕೂಡಿದ್ದವು.

ಈ ಯೋಜನೆಯು ಅಧಿಕಾರದಲ್ಲಿರುವ ಪಕ್ಷಕ್ಕೆ ಲಾಭ ಪಡೆಯಲು ಸಹಾಯ ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

"ಆರ್ಥಿಕ ಅಸಮಾನತೆಯು ರಾಜಕೀಯ ತೊಡಗುವಿಕೆಯಲ್ಲಿನ ಅಸಮ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ. ಮಾಹಿತಿಯ ಲಭ್ಯತೆಯು ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರಲು ಕಾರಣವಾಗುತ್ತದೆ. ಅಲ್ಲದೆ, ಕೊಟ್ಟುಕೊಳ್ಳುವ ಪರಸ್ಪರ ವಿನಿಮಯದ ವ್ಯವಸ್ಥೆಗೆ ಇಂಬು ನೀಡಿ ಯಾವುದೇ ವ್ಯಕ್ತಿ ಅಥವಾ ಭಾಗೀದಾರರಿಗೆ ಅಧಿಕಾರದಲ್ಲಿರುವ ಪಕ್ಷದಿಂದ ಸಹಾಯಕ್ಕೆ ಕಾರಣವಾಗಲೂಬಹುದು," ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಚುನಾವಣಾ ಬಾಂಡ್ ಯೋಜನೆಯು ರಾಜಕೀಯದಲ್ಲಿ ಕಪ್ಪುಹಣ ನಿಗ್ರಹಿಸಲು ಸಹಾಯ ಮಾಡುತ್ತದೆ ಎಂದು ಹೇಳುವ ಮೂಲಕ ಅದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ದಾನಿಗಳ ಗೌಪ್ಯತೆ ಮುಖ್ಯವಾಗಿದ್ದರೂ, ಸಂಪೂರ್ಣ ವಿನಾಯಿತಿ ನೀಡುವ ಮೂಲಕ ರಾಜಕೀಯ ನಿಧಿಗೆ ಸಂಬಂಧಿಸಿದಂತೆ ಪಾರದರ್ಶಕತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ
ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ

ಈ ಯೋಜನೆಯಡಿ ಸೆಪ್ಟೆಂಬರ್ 30, 2023ರವರೆಗೆ ಮಾರಾಟವಾದ ಚುನಾವಣಾ ಬಾಂಡ್‌ಗಳ ಮಾಹಿತಿ ನೀಡುವಂತೆ ತೀರ್ಪು ಕಾಯ್ದಿರಿಸುವ ವೇಳೆ ಸುಪ್ರೀಂ ಕೋರ್ಟ್ ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸೂಚಿಸಿತ್ತು.

ಚುನಾವಣಾ ಬಾಂಡ್ ಯೋಜನೆಯು ದಾನಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್‌ಬಿಐ) ಬಾಂಡ್‌ಗಳನ್ನು ಖರೀದಿಸಿ ಅನಾಮಧೇಯವಾಗಿ ರಾಜಕೀಯ ಪಕ್ಷಕ್ಕೆ ಹಣ ಕಳುಹಿಸಲು ಅನುವು ಮಾಡಿಕೊಡುತ್ತಿತ್ತು.

ಚುನಾವಣಾ ಬಾಂಡ್‌ ಎಂಬುದು ಭರವಸೆಯ ಪತ್ರದ ರೂಪದಲ್ಲಿದ್ದು, ಅದನ್ನು ಯಾವುದೇ ವ್ಯಕ್ತಿ, ಕಂಪೆನಿ, ಸಂಸ್ಥೆ ಅಥವಾ ಸಂಘಟನೆಯ ವ್ಯಕ್ತಿಗಳು ಖರೀದಿಸಬಹುದಾಗಿದೆ. ಆ ವ್ಯಕ್ತಿ ಅಥವಾ ಸಂಸ್ಥೆಯು ಭಾರತೀಯತೆಯನ್ನು ಹೊಂದಿರಬೇಕಷ್ಟೆ. ಚುನಾವಣಾ ಬಾಂಡ್‌ ವಿಭಿನ್ನ ಬಗೆಯಲ್ಲಿದ್ದು, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ನಿರ್ದಿಷ್ಟ ಉದ್ದೇಶಕ್ಕಾಗಿ ಅವುಗಳನ್ನು ನೀಡಲು ಯೋಜಿಸಲಾಗಿತ್ತು.

Kannada Bar & Bench
kannada.barandbench.com