ಜೈಲಿಗೆ ಜಾಮೀನು ಆದೇಶ ವಿದ್ಯುನ್ಮಾನ ರೂಪದಲ್ಲಿ ರವಾನಿಸುವ ವ್ಯವಸ್ಥೆಗೆ ಸುಪ್ರೀಂ ಕೋರ್ಟ್‌ ಚಿಂತನೆ

ಆಗ್ರಾ ಕೇಂದ್ರ ಕಾರಾಗೃಹದಲ್ಲಿದ್ದ 13 ಅಪರಾಧಿಗಳಿಗೆ ಈಚೆಗೆ ಸುಪ್ರೀಂ ಕೋರ್ಟ್‌ ಜುಲೈ 8ರಂದು ತ್ವರಿತ ಮಧ್ಯಂತರ ಜಾಮೀನು ನೀಡಿತ್ತು. ಆದರೆ, ಪ್ರಮಾಣೀಕೃತ ಆದೇಶದ ಪ್ರತಿ ನೀಡಿಲ್ಲ ಎಂದು ಜೈಲಿನ ಅಧಿಕಾರಿಗಳು ಅಪರಾಧಿಗಳನ್ನು ಬಿಡುಗಡೆ ಮಾಡಿರಲಿಲ್ಲ.
CJI NV Ramana, Justices L Nagweswara and AS Bopanna
CJI NV Ramana, Justices L Nagweswara and AS Bopanna

ಜೈಲಿನ ಅಧಿಕಾರಿಗಳಿಗೆ ವಿದ್ಯುನ್ಮಾನ ರೂಪದಲ್ಲಿ ಜಾಮೀನು ಆದೇಶಗಳನ್ನು ರವಾನಿಸುವ ಸಂಬಂಧ ವಿಧಾನ ರೂಪಿಸುವ ಕೆಲಸವನ್ನು ಕೈಗೆತ್ತುಕೊಳ್ಳಲಾಗಿದೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಾಲಯ ಜಾಮೀನು ನೀಡಿದ ಬಳಿಕವೂ ಅಪರಾಧಿಗಳನ್ನು ಜೈಲು ಅಧಿಕಾರಿಗಳು ಬಿಡುಗಡೆ ಮಾಡಲು ವಿಳಂಬ ಮಾಡಿದ್ದರ ಸಂಬಂಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌ ಮತ್ತು ಎ ಎಸ್‌ ಬೋಪಣ್ಣ ಅವರಿದ್ದ ಪೀಠವು ಮೇಲಿನಂತೆ ಹೇಳಿದೆ.

“ಅಂಚೆಯ ಮೂಲಕ ನಮ್ಮ ಆದೇಶ ರವಾನಿಸುವುದನ್ನು ಕೈದಿಗಳು ಕಾಯುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ನಾವು ಆದೇಶಿಸಿದ್ದೇವೆ. ಆದರೆ, ಪ್ರಮಾಣೀಕೃತ ಆದೇಶದ ಪ್ರತಿಗಳು ಸಿಕ್ಕಿಲ್ಲ ಎಂದು ಜೈಲಿನ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ. ಇದು ಸರಿಯಾದ ಕ್ರಮವಲ್ಲ” ಎಂದು ಸಿಜೆಐ ರಮಣ ಹೇಳಿದ್ದಾರೆ.

“ಜಾಮೀನು ಆದೇಶಗಳನ್ನು ಕೇಳಿ ಪಡೆದುಕೊಳ್ಳುವ ವ್ಯವಸ್ಥೆ ರೂಪಿಸುವ ಚಿಂತನೆಯನ್ನು ನಾವು ನಡೆಸುತ್ತಿದ್ದೇವೆ. ಹೀಗೆ ಮಾಡುವುದರಿಂದ ಅಂಥ ಆದೇಶಗಳನ್ನು ವಿದ್ಯುನ್ಮಾನ ರೂಪದಲ್ಲಿ ಜೈಲು ಅಧಿಕಾರಿಗಳಿಗೆ ಕಳುಹಿಸಬಹುದು. ಈ ಸಂಬಂಧ ಯೋಜನೆ ರೂಪಿಸಿ, ಅದನ್ನು ನಮಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೆಕ್ರೆಟರಿ ಜನರಲ್‌ಗೆ ಆದೇಶಿಸುತ್ತೇವೆ” ಎಂದು ನ್ಯಾಯಾಲಯ ಹೇಳಿದೆ.

Also Read
ಜಾಮೀನು ನೀಡಿದ್ದರೂ ಜೈಲಿನಿಂದ ಬಿಡುಗಡೆಗೆ ವಿಳಂಬ: ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಸುಪ್ರೀಂಕೋರ್ಟ್‌

“ಸುರಕ್ಷಿತ ವಿಧಾನದ ಮೂಲಕ ನ್ಯಾಯಾಲಯದ ಆದೇಶಗಳನ್ನು ರವಾನಿಸುವುದು ಈ ಆದೇಶದ ಉದ್ದೇಶವಾಗಿದೆ. ಇದು ಭದ್ರತೆಯ ಬಗ್ಗೆ ಎಚ್ಚರಿಕೆ ವಹಿಸಲಿದೆ” ಎಂದು ನ್ಯಾ. ರಾವ್‌ ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ಉದ್ದೇಶವು ಬಹಳ ಪ್ರಗತಿಪರವಾಗಿದೆ ಎಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಹೇಳಿದರು.

ಆದೇಶಗಳನ್ನು ರವಾನಿಸಲು ಸುರಕ್ಷಿತ ವ್ಯವಸ್ಥೆ ಅಗತ್ಯವಾಗಿದ್ದು, ರಾಜ್ಯಗಳಲ್ಲಿನ ಜೈಲುಗಳಲ್ಲಿ ಸರಿಯಾದ ಇಂಟರ್ನೆಟ್ ಸೌಲಭ್ಯವಿದೆಯೇ ಎಂದು ಉತ್ತರಿಸಲು ನ್ಯಾಯಾಲಯವು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

Related Stories

No stories found.
Kannada Bar & Bench
kannada.barandbench.com