[ಲಖಿಂಪುರ್ ಖೇರಿ ಪ್ರಕರಣ] ಮಂದಗತಿ ತನಿಖೆಯ ಬಗ್ಗೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ತಪರಾಕಿ

ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಅವರು ಸಾಕ್ಷಿಗಳ ಹೇಳಿಕೆ ದಾಖಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ಅಕ್ಟೋಬರ್ 26ಕ್ಕೆ ಮುಂದೂಡಿದೆ.
[ಲಖಿಂಪುರ್ ಖೇರಿ ಪ್ರಕರಣ] ಮಂದಗತಿ ತನಿಖೆಯ ಬಗ್ಗೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ತಪರಾಕಿ
Chief Justice of India NV Ramana (centre) and Justices Surya Kant (L) and Hima Kohli (R)

ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ ಲಖಿಂಪುರ್‌ ಖೇರಿ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಇಂದು ಮತ್ತೊಮ್ಮೆ ಉತ್ತರಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಪ್ರಕರಣದ ಮಂದಗತಿಯ ತನಿಖೆಯ ಬಗ್ಗೆ ತೀವ್ರವಾಗಿ ಆಕ್ಷೇಪಿಸಿದ ನ್ಯಾಯಾಲಯವು ʼನೀವು ಕುಂಟುತ್ತಿದ್ದೀರಿ ಎನಿಸುತ್ತಿದೆ. ದಯವಿಟ್ಟು ಈ ಭಾವನೆಯನ್ನು ಹೋಗಲಾಡಿಸಿʼ ಎಂದಿತು. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠವು ಪ್ರಕರಣದ ವಿಚಾರಣೆ ನಡೆಸಿತು.

ಮುಚ್ಚಿದ ಲಕೋಟೆಯಲ್ಲಿ ಘಟನೆ ಕುರಿತು ವರದಿ ಸಲ್ಲಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಪರ ಹಾಜರಾದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಸಿಜೆಐ ರಮಣ "ಇಲ್ಲ, ಅದರ ಅಗತ್ಯವಿಲ್ಲ. ನಾವು ಈಗಷ್ಟೇ ಅದನ್ನು ಸ್ವೀಕರಿಸಿದೆವು... ನಾವು (ಪ್ರಕರಣಕ್ಕೆ ಸಂಬಂಧಿಸಿದಂತೆ) ಏನಾದರೂ ದಾಖಲೆ ಸಲ್ಲಿಕೆಯಾಗಬಹುದು ಎಂದು ನಿನ್ನೆ ರಾತ್ರಿ 1 ಗಂಟೆಯವರೆಗೆ ಕಾಯುತ್ತಿದ್ದೆವು. ಆದರೆ ಏನೂ ಸಲ್ಲಿಕೆಯಾಗಲಿಲ್ಲ." ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು "ನಾವು ಮುಚ್ಚಿದ ಲಕೋಟೆ ಬಗ್ಗೆ ಏನನ್ನೂ ಹೇಳಿರಲಿಲ್ಲವಲ್ಲ" ಎಂದು ಆಕ್ಷೇಪಿಸಿದರು.

Also Read
ಲಖಿಂಪುರ್ ಖೇರಿ ಹಿಂಸಾಚಾರ: ಸುಪ್ರೀಂಕೋರ್ಟ್‌ ಸ್ವಯಂಪ್ರೇರಿತ ವಿಚಾರಣೆ ಇಂದು

ಬಳಿಕ ಸಾಳ್ವೆ ಅವರು ಆರೋಪಿಗಳ ಸ್ಥಿತಿಗತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಇದುವರೆಗೆ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಎರಡು ಅಪರಾಧಗಳು ನಡೆದಿವೆ. ಒಂದು ಅಪರಾಧ ರೈತರಿಗೆ ಸಂಬಂಧಿಸಿದ್ದು ಮತ್ತೊಂದು ವ್ಯಕ್ತಿಯ ಗುಂಪುಹತ್ಯೆ ಕುರಿತಾದದ್ದು. ನಲವತ್ತನಾಲ್ಕು ಸಾಕ್ಷಿಗಳ ಪೈಕಿ ನಾಲ್ವರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಹತ್ತು ಆರೋಪಿಗಳಲ್ಲಿ ನಾಲ್ವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ತಿಳಿಸಿದರು.

ಆಗ ನ್ಯಾಯಾಲಯ ಇತರ ಆರು ಮಂದಿ ಬಗ್ಗೆ ಏನು ಹೇಳುತ್ತೀರಿ? ನೀವು ಅವರನ್ನು ಕಸ್ಟಡಿಗೆ ಪಡೆಯಬೇಕೆಂದು ಕೋರಲಿಲ್ಲವಾದ ಕಾರಣ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಪ್ರಕರಣದ ಸ್ಥಿತಿಗತಿ ಏನು?” ಎಂದು ಪ್ರಶ್ನಿಸಿತು. ಆಗ ಸಾಳ್ವೆ ನ್ಯಾಯಾಲಯಗಳಿಗೆ ರಜೆ ಇದ್ದುದನ್ನು ಪ್ರಸ್ತಾಪಿಸಿದರು. ಅದಕ್ಕೆ ನ್ಯಾ. ಕೊಹ್ಲಿ ಅವರು ಸಂಶಯದಿಂದ "ದಸರೆ ರಜೆ ಕಾರಣಕ್ಕೆ ಕ್ರಿಮಿನಲ್‌ ನ್ಯಾಯಾಲಯಗಳನ್ನು ಮುಚ್ಚಲಾಗಿತ್ತೆ?” ಎಂದು ಪ್ರಶ್ನಿಸಿದರು. ಸಾಳ್ವೆ ಅವರು ಸಾಕ್ಷಿಗಳ ಹೇಳಿಕೆ ದಾಖಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ಅಕ್ಟೋಬರ್ 26ಕ್ಕೆ ಮುಂದೂಡಿತು.

ಹಿಂಸಾಚಾರದ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಇಬ್ಬರು ವಕೀಲರು ಸಿಜೆಐ ಎನ್‌ ವಿ ರಮಣ ಅವರಿಗೆ ಪತ್ರ ಬರೆದು ಸಿಬಿಐ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಕೋರಿದ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸುವಂತೆ ಮತ್ತು ಘಟನೆಯಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ತಮ್ಮ ಪತ್ರದಲ್ಲಿ, ವಕೀಲರಾದ ಶಿವಕುಮಾರ ತ್ರಿಪಾಠಿ ಮತ್ತು ಸಿ ಎಸ್ ಪಾಂಡ ತಿಳಿಸಿದ್ದರು.

Related Stories

No stories found.