
ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷಿ ಅಧಿನಿಯಮ್ ಎಂಬ ಮೂರು ಅಪರಾಧಿಕ ಕಾನೂನು ಸಂಹಿತೆಗಳನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಆದ್ಯತೆ ನೀಡುವಂತೆ ಸುಪ್ರೀಂ ಕೋರ್ಟ್ ಮದ್ರಾಸ್ ಹೈಕೋರ್ಟ್‌ಗೆ ತಾಕೀತು ಮಾಡಿದೆ.
ಹೈಕೋರ್ಟ್‌ನಲ್ಲಿ ಇದೀಗ ಬಾಕಿ ಇರುವ ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ತಮಿಳುನಾಡು ಹಾಗೂ ಪುದುಚೆರಿ ವಕೀಲರ ಸಂಘಗಳ ಒಕ್ಕೂಟ ಸಲ್ಲಿಸಿದ ಮನವಿಯನ್ನು ಪರಿಗಣಿಸಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ಜೊಯಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಂಚೋಲಿ ಅವರಿದ್ದ ನ್ಯಾಯಪೀಠ ಶುಕ್ರವಾರ ಈ ನಿರ್ದೇಶನ ನೀಡಿತು.
ಕಾನೂನುಗಳನ್ನು ಪ್ರಶ್ನಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ 2024ರ ಸೆಪ್ಟೆಂಬರ್‌ನಲ್ಲಿಯೇ ನೋಟಿಸ್ ನೀಡಲಾಗಿದ್ದರೂ ಜುಲೈ 2025ರಲ್ಲಷ್ಟೇ ಅವುಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಇದೆಲ್ಲದರ ನಡುವೆಯೂ ವಿಚಾರಣಾ ದಿನಾಂಕ ಪ್ರಕಟಿಸಿಲ್ಲ ಎಂದು ದೂರಲಾಗಿತ್ತು.
ಈ ಹಿಂದೆ, ಹೈಕೋರ್ಟ್‌ನ ಮುಂದಿರುವ ಅರ್ಜಿಗಳಲ್ಲಿ ನೋಟಿಸ್ ಅನ್ನು ಸೆಪ್ಟೆಂಬರ್ 2024 ರಂದು ನೀಡಲಾಗಿದೆ ಮತ್ತು ನಂತರ ಅವುಗಳನ್ನು ಜುಲೈ 2025 ರಲ್ಲಿ ಪಟ್ಟಿ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ಕಾನೂನು ಸಂಹಿತೆಗಳನ್ನು ಉಚ್ಚರಿಸಲು ಸಾಧ್ಯವಾಗದಿರುವುದು ತೊಂದರೆ ಉಂಟು ಮಾಡಿದೆ ಎಂದು ವಕೀಲರು ಹೇಳಿದರು. ಇದೇ ರೀತಿಯ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದರಿಂದ ಅರ್ಜಿದಾರರು ಪ್ರಕರಣವನ್ನು ಹೈಕೋರ್ಟ್‌ನಿಂದ ವರ್ಗಾಯಿಸಬೇಕೆಂದು ಒತ್ತಾಯಿಸಿದರು. ಆದರೆ ಮೊದಲು ಹೈಕೋರ್ಟ್ ಅಭಿಪ್ರಾಯ ನೀಡುವುದು ಮುಖ್ಯ ಎಂದು ಸುಪ್ರೀಂ ಕೋರ್ಟ್ ನುಡಿಯಿತು.
ಕುತೂಹಲದ ಸಂಗತಿ ಎಂದರೆ ಕಾನೂನುಗಳನ್ನು ಜಾರಿಗೆ ತರುವ ಹಿಂದಿನ ಉದ್ದೇಶ ಒಳ್ಳೆಯದಾಗಿದ್ದರೂ, ಮೂರು ಹೊಸ ಅಪರಾಧಿಕ ಕಾನೂನು ಸಂಹಿತೆಗಳ ಹೆಸರುಗಳು ಗೊಂದಲಗಳಿಗೆ ಕಾರಣವಾಗಿದೆ ಎಂದು ಹೈಕೋರ್ಟ್ ಕಳೆದ ವರ್ಷ ಟೀಕಿಸಿತ್ತು.
ಮೂರು ಕ್ರಿಮಿನಲ್ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ತಿಳಿಸಿತ್ತು.
ಅರ್ಜಿದಾರರಲ್ಲಿ ಒಬ್ಬರಾದ ಡಿಎಂಕೆ ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್ ಎಸ್ ಭಾರತಿ ಅವರು, ಈ ಕಾನೂನುಗಳು ವಿರೋಧಿಗಳ ಧ್ವನಿ ದಮನಿಸಲು, ನ್ಯಾಯಸಮ್ಮತ ವಿಚಾರಣೆಯ ಹಕ್ಕನ್ನು ಹಾಳುಮಾಡಲು ಹಾಗೂ ಪೊಲೀಸರಿಗೆ ಹೆಚ್ಚುವರಿ ಅಧಿಕಾರ ನೀಡಿ ಅವರಿಗೆ ಕಾನೂನುಗಳಿಂದ ರಕ್ಷಣೆ ನೀಡಲು ರೂಪಿಸಲಾಗಿದೆ ಎಂದು ವಾದಿಸಿದ್ದರು.
ಮೂರು ಹೊಸ ಅಪರಾಧಿಕ ಕಾನೂನು ಸಂಹಿತೆಗಳಿಗೆ ನೀಡಲಾದ ಸಂಸ್ಕೃತ/ಹಿಂದಿ ಹೆಸರುಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ಕಾನೂನು ಸಂಹಿತೆಗಳಿಗೆ ತಡೆ ನೀಡಲು ನಿರಾಕರಿಸಿತ್ತು.