ಪತಂಜಲಿ ವಿರುದ್ಧ ಔಷಧ ಮತ್ತು ಸೌಂದರ್ಯವರ್ಧಕ ನಿಯಮ ಜಾರಿಗೊಳಿಸದ ಕೇಂದ್ರಕ್ಕೆ ಸುಪ್ರೀಂ ತರಾಟೆ

ಪತಂಜಲಿ ವಿರುದ್ಧ ಔಷಧ ಮತ್ತು ಸೌಂದರ್ಯವರ್ಧಕ ನಿಯಮ ಜಾರಿಗೊಳಿಸದ ಕೇಂದ್ರಕ್ಕೆ ಸುಪ್ರೀಂ ತರಾಟೆ

ಇದೇ ವೆಳೆ, ನ್ಯಾಯಾಲಯವು ಕ್ಷಮೆ ಯಾಚನೆ ಜಾಹೀರಾತು ಸೂಕ್ಷ್ಮದರ್ಶಕದಲ್ಲಿ ನೋಡುವಂತಿರಬಾರದು ಎಂದು ಪತಂಜಲಿಗೆ ಬುದ್ಧಿವಾದ ಹೇಳಿತು.

ದಾರಿ ತಪ್ಪಿಸುವ ಮತ್ತು ಆಧುನಿಕ ವೈದ್ಯ ಪದ್ಧತಿ ವಿರೋಧಿಸಿ ಜಾಹೀರಾತು ನೀಡಿದ್ದ ಪತಂಜಲಿ ಆಯುರ್ವೇದ ಸಂಸ್ಥೆ ವಿರುದ್ಧ 1945ರ ಔಷಧ ಮತ್ತು ಸೌಂದರ್ಯವರ್ಧಕ ನಿಯಮಾವಳಿ ಜಾರಿಗೊಳಿಸದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

ಹಾದಿತಪ್ಪಿಸುವ ಜಾಹೀರಾತಿನ ವಿರುದ್ಧ 1945ರ ಔಷಧ ಮತ್ತು ಸೌಂದರ್ಯವರ್ಧಕ ನಿಯಮಾವಳಿಯ 170 ನೇ ನಿಯಮ ಅನ್ವಯಿಸದಂತೆ ರಾಜ್ಯಗಳಿಗೆ ಸೂಚನೆ ನೀಡಿ 2023ರಲ್ಲಿ ಕೇಂದ್ರ ಸರ್ಕಾರ ಬರೆದ ಪತ್ರವನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ ಅವರಿದ್ದ ಪೀಠ ಇಂದು ಪ್ರಶ್ನಿಸಿತು.

"ಅಂತಹ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ರಾಜ್ಯ ಸಚಿವರು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು. ಆದರೆ ಈಗ ನೀವು (ಕೇಂದ್ರ ಸರ್ಕಾರ) ನಿಯಮ 170 ಅನ್ನು ಜಾರಿಗೆ ತರುವುದಿಲ್ಲ ಎಂದು ಹೇಳುತ್ತಿದ್ದೀರಾ?"ಎಂದು ನ್ಯಾಯಾಲಯ ಕೇಳಿತು.

"ಕಾಯಿದೆಯೊಂದು ಚಲಾವಣೆಯಿದ್ದಾಗಲೂ ಅದರ ಜಾರಿ ತಡೆಹಿಡಿಯಬಹುದೇ?... ಹಾಗಾದರೆ ಇದು ಕಾನೂನಿನ ತಾರತಮ್ಯ ಚಲಾವಣೆಯಲ್ಲವೇ? ಕಾನೂನಿನ ಉಲ್ಲಂಘನೆಯಾದಂತೆ ಅಲ್ಲವೇ?" ಎಂದು ನ್ಯಾಯಮೂರ್ತಿ ಅಮಾನುಲ್ಲಾ ಪ್ರಶ್ನಿಸಿದರು.

"ಬಹುಶಃ ಅಧಿಕಾರಿಗಳು ಆದಾಯದೆಡೆಗೆ ಗಮನಹರಿಸುವಲ್ಲಿ ಮಾತ್ರವೇ ನಿರತರಾಗಿದ್ದರೆಂದು ತೋರುತ್ತದೆ" ಎಂದು ನ್ಯಾಯಮೂರ್ತಿ ಕೊಹ್ಲಿ ಕುಟುಕಿದರು.

2023ರ ಈ ಪತ್ರ ಮತ್ತು ನಿಯಮ 170ನ್ನು ಹಿಂಪಡೆಯಲು ಹೊರಟದ್ದನ್ನು ಸರ್ಕಾರ ವಿವರಿಸಬೇಕು ಎಂದು ಸೂಚಿಸಿದ ನ್ಯಾಯಾಲಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮನ್ಸ್‌ ನೀಡಿತು.   

ಇದೇ ವೇಳೆ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯಿದೆ ಜೊತೆಗೆ ಮಾಂತ್ರಿಕ ಪರಿಹಾರ (ಆಕ್ಷೇಪಾರ್ಹ ಜಾಹೀರಾತು) ಕಾಯಿದೆ ಜಾರಿಯಾಗುತ್ತಿರುವ ರೀತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಲು ನ್ಯಾಯಾಲಯ ನಿರ್ಧರಿಸಿದೆ.

“ನಾವು ನಿರ್ದಿಷ್ಟ ಕಕ್ಷಿದಾರರನ್ನು ಗುರಿಮಾಡಲು ಹೊರಟಿಲ್ಲ. ಬದಲಿಗೆ ಗ್ರಾಹಕರು/ಸಾರ್ವಜನಿಕರನ್ನು ಹೇಗೆ ದಾರಿ ತಪ್ಪಿಸಲಾಗುತ್ತಿದೆ ಎಂಬುದರ ಕುರಿತು ಹೆಚ್ಚಿನ ಕಾಳಜಿ ಹೊಂದಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು  ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಸೇರಿಸಲು ನ್ಯಾಯಾಲಯ ನಿರ್ಧರಿಸಿದೆ.

ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಪತಂಜಲಿ ಮತ್ತು ಅದರ ಸಂಸ್ಥಾಪಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಅವಹೇಳನಕಾರಿ ಅಭಿಯಾನ ನಡೆಸುತ್ತಿರುವುದನ್ನು ಪ್ರಶ್ನಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿದೆ.

Patanjali Apology
Patanjali Apology

ʼಕ್ಷಮೆ ಯಾಚನೆ ಜಾಹೀರಾತು ಸೂಕ್ಷ್ಮದರ್ಶಕದಲ್ಲಿ ನೋಡುವಂತಿರಬಾರದುʼ

ವಿಚಾರಣೆ ವೇಳೆ 67 ಪತ್ರಿಕೆಗಳಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿರುವುದನ್ನು ಪತಂಜಲಿ ಹೇಳಿಕೊಂಡಾಗ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಹಿಮಾ ಕೊಹ್ಲಿ ಅವರು "ಇದು ನೀವು ಈ ಹಿಂದೆ ನೀಡಿದ ಜಾಹಿರಾತಿನಷ್ಟೇ ದೊಡ್ಡದಾಗಿ ಇದೆಯೇ?" ಎಂದು ಪ್ರಶ್ನಿಸಿದರು.

ಕ್ಷಮೆಯಾಚನೆ ಜಾಹೀರಾತನ್ನು ನೀಡಿ ಎಂದು ತಾನು ಹೇಳಿದ್ದು ಅದನ್ನು ಸೂಕ್ಷ್ಮದರ್ಶಕ ಯಂತ್ರ ಬಳಸಿ ನೋಡುವಂತಿರಬೇಕು ಎಂಬರ್ಥದಲ್ಲಿ ಅಲ್ಲ ಎಂದು ನ್ಯಾಯಾಲಯ ಕುಟುಕಿತು.

ಅಂತಹ ಜಾಹೀರಾತು ಕೇವಲ ಪತ್ರಿಕೆಗಳಲ್ಲಿ ಇರದೆ ಅದು ಓದುವಂತೆಯೂ ಇರಬೇಕು ಎಂದ ನ್ಯಾಯಾಲಯ ಕ್ಷಮಾಯಾಚನೆ ಜಾಹೀರಾತಿನ ಗಾತ್ರ ಪರಿಶೀಲಿಸುವುದಕ್ಕಾಗಿ, ಮುದ್ರಿತ ಕ್ಷಮೆಯಾಚನೆಯ ಪ್ರತಿಗಳನ್ನು ಪತಂಜಲಿ ಸಲ್ಲಿಸಬೇಕು ಎಂದು ಆದೇಶಿಸಿತು.

ಇದೇ ವೇಳೆ ಐಎಂಎ ವಿರುದ್ಧ ₹1,000 ಕೋಟಿ ದಂಡ ವಿಧಿಸುವಂತೆ ಕೋರಿ ಮಧ್ಯಪ್ರವೇಶ ಅರ್ಜಿ ಸಲ್ಲಿಕೆಯಾಗಿರುವುದನ್ನು ಗಮನಿಸಿದ ನ್ಯಾಯಾಲಯ ಪತಂಜಲಿ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರನ್ನುದ್ದೇಶಿಸಿ “ಈ ಅರ್ಜಿ ನಮ್ಮ ಪರವಾದ ನಕಲಿ ಮವಿಯಂತೆ ತೋರುತ್ತಿದೆ” ಎಂದಿತು. ಆಗ ಅರ್ಜಿಗೂ ತನಗೂ ಸಂಬಂಧ ಇಲ್ಲವೆಂದು ರೋಹಟ್ಗಿ ತಿಳಿಸಿದರು.

ಈ ವೇಳೆ ಅರ್ಜಿದಾರರಿಗೆ ದಂಡ ವಿಧಿಸುವುದು ಸೂಕ್ತ ಎಂದ ನ್ಯಾಯಾಲಯ ಅನಗತ್ಯ ವೈದ್ಯಕೀಯ ಔಷಧಗಳನ್ನು ನೀಡುವ ಕುರಿತಂತೆ ಐಎಂಎ ವಿರುದ್ಧ ಕೆಲ ಆರೋಪಗಳನ್ನು ಪರಿಶೀಲಿಸುವುದಾಗಿಯೂ ತಿಳಿಸಿತು.

Related Stories

No stories found.
Kannada Bar & Bench
kannada.barandbench.com