ತಿಹಾರ್ ಜೈಲಿನಲ್ಲಿ ಯುನಿಟೆಕ್ ಪ್ರವರ್ತಕರ ಭೂಗತ ಕಚೇರಿ: ಮುಂಬೈ ಜೈಲಿಗೆ ಆರೋಪಿಗಳ ಸ್ಥಳಾಂತರಕ್ಕೆ ʼಸುಪ್ರೀಂʼ ಆದೇಶ
Tihar Jail and Supreme Court

ತಿಹಾರ್ ಜೈಲಿನಲ್ಲಿ ಯುನಿಟೆಕ್ ಪ್ರವರ್ತಕರ ಭೂಗತ ಕಚೇರಿ: ಮುಂಬೈ ಜೈಲಿಗೆ ಆರೋಪಿಗಳ ಸ್ಥಳಾಂತರಕ್ಕೆ ʼಸುಪ್ರೀಂʼ ಆದೇಶ

ಆರೋಪಿಗಳೊಂದಿಗೆ ಜೈಲು ಅಧಿಕಾರಿಗಳು ಸಹಕರಿಸುವುದು ನಾಚಿಕೆಗೇಡಿನ ಸಂಗತಿ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠ ಹೇಳಿತು.

ಗೃಹ ಖರೀದಿದಾರರನ್ನು ವಂಚಿಸಿದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದ ಯುನಿಟೆಕ್ ಪ್ರವರ್ತಕರಾದ ಸಂಜಯ್ ಚಂದ್ರ ಮತ್ತು ಅಜಯ್ ಚಂದ್ರ ಅವರಿಗೆ ಸಹಕಾರ ನೀಡಿದ್ದಕ್ಕಾಗಿ ತಿಹಾರ್‌ ಜೈಲು ಅಧೀಕ್ಷಕರ ಮೇಲೆ ಸುಪ್ರೀಂಕೋರ್ಟ್‌ ಹರಿಹಾಯ್ದಿದೆ.

ಈ ಇಬ್ಬರೂ ತಿಹಾರ್‌ ಜೈಲಿನಲ್ಲೇ ಭೂಗತ ಕಚೇರಿ ತೆರೆದಿರುವುದು ಮತ್ತು ಅಲ್ಲಿಂದಲೇ ವಹಿವಾಟುಗಳನ್ನು ನಡೆಸುತ್ತಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇ ಡಿ) ನ್ಯಾಯಾಲಯಕ್ಕೆ ತಿಳಿಸಿತು. ಆಗ ʼಆರೋಪಿಗಳೊಂದಿಗೆ ಜೈಲು ಅಧಿಕಾರಿಗಳು ಸಹಕರಿಸುವುದು ನಾಚಿಕೆಗೇಡಿನ ಸಂಗತಿʼ ಎಂದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠ ಇಬ್ಬರನ್ನೂ ತಿಹಾರ್‌ ಜೈಲಿನಿಂದ ಮುಂಬೈನ ಎರಡು ಬೇರೆ ಬೇರೆ ಜೈಲುಗಳಿಗೆ ಕಳಿಸುವಂತೆ ಸೂಚಿಸಿತು. ಇಬ್ಬರು ಸಹೋದರರಲ್ಲಿ ಒಬ್ಬರನ್ನು ತಲೋಜಾ ಜೈಲಿನಲ್ಲಿ ಮತ್ತೊಬ್ಬರನ್ನು ಆರ್ಥರ್ ರೋಡ್‌ ಜೈಲಿನಲ್ಲಿ ಇರಿಸುವಂತೆ ನ್ಯಾಯಾಲಯ ಸೂಚಿಸಿತು.

Also Read
ಸದ್ಯಕ್ಕೆ ಮುಫ್ತಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಒತ್ತಾಯಿಸುವುದಿಲ್ಲ: ಜಾರಿ ನಿರ್ದೇಶನಾಲಯ

ಚಂದ್ರ ಅವರನ್ನು ದೆಹಲಿ ಪೊಲೀಸ್‌ ಆರ್ಥಿಕ ಅಪರಾಧ ದಳ 2017 ರ ಮಾರ್ಚ್‌ನಲ್ಲಿ ಬಂಧಿಸಿತ್ತು. ದೆಹಲಿಯ ಪಟಿಯಾಲ ಹೌಸ್‌ ನ್ಯಾಯಾಲಯದ ಆದೇಶದ ಬಳಿಕ ಜುಲೈ 2015ರಲ್ಲಿ ಚಂದ್ರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಗುರುಗ್ರಾಮದ ಅಂಥಿಯಾ ಯೋಜನೆಗೆ ಸಂಬಂಧಿಸಿದಂತೆ ಮನೆ ಖರೀದಿದಾರರು ನೀಡಿದ್ದ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿತ್ತು.

ತರುವಾಯ, ಅಂಥಿಯಾ ಯೋಜನೆಗೆ ಸಂಬಂಧಿಸಿದಂತೆ ಇಂತಹ ಅನೇಕ ದೂರುಗಳು ಯುನಿಟೆಕ್ ವಿರುದ್ಧ ಕೇಳಿಬಂದಿದ್ದವು. ಕಂಪನಿಗೆ ಹಣ ಪಾವತಿಸಿದರೂ ನಿಗದಿತ ಗಡುವಿನೊಳಗೆ ಫ್ಲ್ಯಾಟ್‌ಗಳನ್ನು ಹಸ್ತಾಂತರಿಸದ ಕಾರಣ ಮನೆ ಖರೀದಿದಾರರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಹಾಗೆ ಖರೀದಿದಾರರಿಂದ ಪಡೆದ ಹಣವನ್ನು ನುಂಗಿ ಹಾಕಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದರು.

Related Stories

No stories found.
Kannada Bar & Bench
kannada.barandbench.com