[ಲೈವ್‌ ಅಪ್‌ಡೇಟ್‌] ಕೃಷಿ ಕಾಯಿದೆಗಳಿಗೆ ತಡೆ, ನಾಲ್ವರ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್‌

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ವಿವಾದಿತ ಕಾಯಿದೆಗಳ ಜಾರಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರ ನೇತೃತ್ವದ ಪೀಠವು ಇಂದು ಮಧ್ಯಂತರ ಆದೇಶ ಹೊರಡಿಸಲಿದೆ.
[ಲೈವ್‌ ಅಪ್‌ಡೇಟ್‌] ಕೃಷಿ ಕಾಯಿದೆಗಳಿಗೆ ತಡೆ, ನಾಲ್ವರ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್‌

ಕೃಷಿ ಕಾಯಿದೆಗಳ ಕುರಿತ ಆಕ್ಷೇಪಣೆ ಪರಿಶೀಲಿಸಲು, ಸಂಧಾನ ನಡೆಸಲು ಸುಪ್ರೀಂ ಕೋರ್ಟ್‌ ರಚಿಸಿರುವ ಸಮಿತಿ ಹೀಗಿದೆ: 1. ಭೂಪಿಂದರ್ ಸಿಂಗ್ ಮಾನ್, ಬಿಕೆಯು ಅಧ್ಯಕ್ಷರು 2. ಡಾ. ಪ್ರಮೋದ್ ಕುಮಾರ್ ಜೋಷಿ, ಅಂತಾರಾಷ್ಟ್ರೀಯ ನೀತಿ ನಿರೂಪಣಾ ತಜ್ಞರು 3. ಅಶೋಕ್‌ ಗುಲಾಟಿ, ಕೃಷಿ ಅರ್ಥಶಾಸ್ತ್ರಜ್ಞರು 4. ಅನಿಲ್ ಧನವಂತ್, ಶಿವಕೇರಿ ಸಂಘಟನೆ ಮಹಾರಾಷ್ಟ್ರ.

ಮೂರು ಕೃಷಿ ಕಾಯಿದೆಗಳ ಜಾರಿಯನ್ನು ತಡೆ ಹಿಡಿದ ಸುಪ್ರೀಂ ಕೋರ್ಟ್‌.

ಎಜಿ: ಪ್ರತಿಭಟನೆಯಲ್ಲಿ ಖಲಿಸ್ಥಾನಿ ನುಸುಳುಕೋರತೆ ಇದೆ ಎನ್ನುವ ಮಾಹಿತಿ ಇದೆ. ಕೇರಳ, ಕರ್ನಾಟಕದಲ್ಲಿ ಕಾಯಿದೆಗಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಸಿಜೆಐ: ಅಟಾರ್ನಿಯವರೇ, ಅರ್ಜಿಯ ಆರನೇ ಪುಟದಲ್ಲಿ ನಿಷೇಧಿತ ಸಂಘಟನೆಯೊಂದು ಪ್ರತಿಭಟನೆಗೆ ಹಣ ನೀಡುತ್ತಿದೆ ಎಂದಿದೆ. ನೀವು ಇದನ್ನು ಖಚಿತ ಪಡಿಸುತ್ತೀರಾ, ತಿರಸ್ಕರಿಸುತ್ತೀರಾ?

ಹಿರಿಯ ವಕೀಲ ಪಿ ಎಸ್‌ ನರಸಿಂಹನ್‌: ಸಿಖ್ಸ್‌ ಫಾರ್ ಜಸ್ಟೀಸ್‌ ಸಂಘಟನೆಯು ಪ್ರತಿಭಟನೆ ಬೆಂಬಲಿಸಲು ದೇಣಿಗೆ ಸಂಗ್ರಹಿಸುತ್ತಿದೆ.

ಸಿಜೆಐ: ಈ ಕುರಿತ ಅರ್ಜಿ ಎಲ್ಲಿದೆ?

ನರಸಿಂಹನ್‌: ಇಲ್ಲಿದೆ.

ಸಿಜೆಐ: ಅದನ್ನು ತೆಗೆದುಕೊಳ್ಳಿ.

ಸಾಳ್ವೆ: ಆದೇಶವನ್ನು ನೀಡುವಾಗ ಇದು ಯಾರದೋ ಗೆಲುವಲ್ಲ ಎನ್ನುವುದನ್ನು ವಿಷದಪಡಿಸಬೇಕು. ಕಾಯಿದೆಯಲ್ಲಿರುವ ಕೆಲ ದೋಷಗಳನ್ನು ನಿವಾರಿಸಲಾಗುವುದು ಎಂದು ಹೇಳಬೇಕು.

ಸಿಜೆಐ: ಇದು ನ್ಯಾಯವಂತಿಕೆಯ ಗೆಲುವು ಮಾತ್ರ.

ಸಾಳ್ವೆ: ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರು ಗಣರಾಜ್ಯೋತ್ಸವವು ಯಾವುದೇ ಕಳಂಕವಿಲ್ಲದೆ ಅಚರಿಸಲ್ಪಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ದಾಖಲಿಸಬೇಕಾದ ಸಂಗತಿ ಎಂದರೆ, “ಸಿಖ್ಸ್ ಫಾರ್ ಜಸ್ಟೀಸ್” ಸಂಘಟನೆ ಸಹ ಅ ಸಂದರ್ಭದಲ್ಲಿರಲಿದೆ. ಅವರು ಖಲಿಸ್ತಾನ್ ಚಳವಳಿಗೆ ದೇಣಿಗೆ ನೀಡುವವರು.

ಹಿರಿಯ ವಕೀಲ ಹರೀಶ್‌ ಸಾಳ್ವೆ: ಸಮಿತಿಯು ವಸ್ತುಸ್ಥಿತಿಯ ವರದಿಯನ್ನು ನ್ಯಾಯಾಲಯದ ಮುಂದಿರಿಸಲು ಸಹಕಾರಿಯಾಗಲಿದೆ. ಕಾಯಿದೆಗಳನ್ನು ತಡೆ ಹಿಡಿಯುವುದನ್ನು ಯಾರೂ ರಾಜಕೀಯ ಗೆಲುವು ಎಂದು ಭಾವಿಸಬಾರದು. ಅದು ಶಾಸನದ ಬಗೆಗೆ ವ್ಯಕ್ತಪಡಿಸಲಾದ ಆಕ್ಷೇಪಗಳ ಗಂಭೀರವಾಗಿ ಪರಿಶೀಲನಾ ಕ್ರಮ ಎಂದು ಭಾವಿಸಬೇಕು.

ಈ ವೇಳೆ, ಭಾರತೀಯ ವರ್ತಕರ ಒಕ್ಕೂಟದ ಪರ ವಕೀಲರು ಸಹ ಪೀಠದ ಮುಂದೆ ಪ್ರತಿನಿಧಿಸುತ್ತಾರೆ. ನಾವು ಆರು ಕೋಟಿ ವರ್ತಕರ ಪರವಾಗಿ ಪ್ರತಿನಿಧಿಸುತ್ತಿದ್ದು, ನಮ್ಮನ್ನೂ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಕೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ನೀವು ಸಮಿತಿಯಲ್ಲಿರಲಾಗದು. ಆದರೆ, ಸಮಿತಿಯ ಮುಂದೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದ ಪೀಠ.

ಸಿಜೆಐ: ನಾವು ಕಾಯಿದೆಗಳನ್ನು ಅಮಾನತ್ತಿನಲ್ಲಿಡಲು ಆಲೋಚಿಸುತ್ತಿದ್ದೇವೆ. ಆದರೆ, ಅನಿರ್ದಿಷ್ಟವಾಗಿ ಅಲ್ಲ. ನೀವು ಸಮಿತಿಯ ಮುಂದೆ ನಿಮ್ಮ ಹೇಳಿಕೆಯನ್ನು ನೀಡಿ. ಶರ್ಮಾ ಅವರಂತೆ ಋಣಾತ್ಮಕ ಪ್ರತಿಕ್ರಿಯೆಯನ್ನು ನಾವು ಬಯಸುವುದಿಲ್ಲ.

ಸಿಜೆಐ: ವಿಚಾರಣೆ ವೇಳೆ ಎಜಿ ಹೇಳಿದ್ದರು ದಕ್ಷಿಣ ಭಾರತದಲ್ಲಿ ಕಾಯಿದೆಗಳ ಬಗ್ಗೆ ಪ್ರತಿಭಟನೆ ಇಲ್ಲ ಎಂದು? ‌

ವಿಲ್ಸನ್‌: ವಿಜಯವಾಡ ಹತ್ತಿ ಉರಿಯುತ್ತಿದೆ. ಎಲ್ಲೆಡೆ ರ‍್ಯಾಲಿಗಳು ನಡೆಯುತ್ತಿವೆ. ಎಜಿ ಅವರ ಹೇಳಿಕೆ ಸರಿಯಾಗಿಲ್ಲ. ನಿಮಗೆ ಬೇಕಾದರೆ ನಾನು ಚಿತ್ರಗಳನ್ನು ತೋರಿಸುತ್ತೇನೆ.

ವಕೀಲ ವಿಲ್ಸನ್‌: ನಾವು ನಿಮ್ಮೊಂದಿಗಿದ್ದೇವೆ ಮೈ ಲಾರ್ಡ್‌. ನಾನು ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿರುವ ತಿರುಚ್ಚಿ ಶಿವ ಅವರನ್ನು ಪ್ರತಿನಿಧಿಸುತ್ತಿದ್ದೇನೆ. ಸಂಸದರನ್ನು ಆಲಿಸದೆಯೇ ಈ ಕಾಯಿದೆಗಳಿಗೆ ತರಾತುರಿಯಲ್ಲಿ ಒಪ್ಪಿಗೆ ನೀಡಲಾಗಿದೆ.

ಎಜಿ: ನಿಮಗೆ ಸಮಿತಿಯಿಂದ ಸಮಸ್ಯೆ ಪರಿಹಾರ ಸಾಧ್ಯ ಎನಿಸುತ್ತದೆಯಾದರೆ…

ಪೀಠ: ಈ ಪ್ರಕರಣದ ನ್ಯಾಯಿಕ ಪ್ರಕ್ರಿಯೆಯಲ್ಲಿ ಸಮಿತಿಯೂ ಸಹ ಒಂದು ಭಾಗ

ಸಿಜೆಐ ಅವರು ಅಡ್ವೊಕೇಟ್‌ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರಿಗೆ ಹೇಳಿದ್ದು: ಶರ್ಮಾ ಅವರಿಗೆ ಕೆಲ ರೈತರು ಪ್ರಧಾನಿಯವರು ತಮ್ಮನ್ನು ಉದ್ದೇಶಿಸಿ ಮಾತನಾಡಬೇಕು ಎಂದಿದ್ದಾರೆ.

ಶರ್ಮಾ: ರೈತರ ಮತ್ತೊಂದು ದೂರೆಂದರೆ, ಪ್ರಧಾನಿಯವರು ಅವರನ್ನು ಉದ್ದೇಶಿಸಿ ಮಾತನಾಡುತ್ತಿಲ್ಲ ಎನ್ನುವುದು.

ಸಿಜೆಐ: ನಾವು ಪ್ರಧಾನಿಯವರನ್ನು ಏನೂ ಕೇಳಲಾಗದು. ಅವರು ಪ್ರಕರಣದಲ್ಲಿ ಪಕ್ಷಕಾರರಲ್ಲ.

ಸಿಜೆಐ: ಕೇಂದ್ರಕ್ಕೆ ಕಾಯಿದೆ ಜಾರಿಯ ಬಗ್ಗೆ ಆಸಕ್ತಿ ಇದೆ. ನೀವು ಹಿಂಪಡೆಯಲು ಕೇಳುತ್ತಿದ್ದೀರಿ. ಈಗ ಈ ಬಗ್ಗೆ ತಿಳಿದಿರುವವರು ಹೇಳಬೇಕು ವಾಸ್ತವದ ಪರಿಸ್ಥಿತಿ ಏನಿದೆ ಎಂದು.

ಸಿಜೆಐ ಬೊಬ್ಡೆ: ವಕೀಲರಾದ ದವೆಯವರು ರೈತರು ಟ್ರಾಕ್ಟರ್‌ ರ‍್ಯಾಲಿಯನ್ನು ಆಯೋಜಿಸುತ್ತಿಲ್ಲ ಎಂದಿದ್ದಾರೆ. ತಮ್ಮ ಕಕ್ಷಿದಾರರು (ರೈತರು) ಸಮಿತಿಯ ಮುಂದೆ ಹಾಜರಾಗಲಿದ್ದಾರೆ ಎಂದಿದ್ದಾರೆ.

ಸಿಜೆಐ: ವಾಸ್ತವ ಪರಿಸ್ಥಿತಿಯನ್ನು ಅರಿಯಲು ನಾವು ಸಮಿತಿಯೊಂದನ್ನು ರಚಿಸುತ್ತೇವೆ.

ಶರ್ಮಾ: ನಾನು ಇದಾಗಲೇ, ನ್ಯಾ. ಜೆ ಎಸ್‌ ಖೆಹರ್‌, ನ್ಯಾ. ಸಿಂಘ್ವಿ, ನ್ಯಾ.ಅಗರ್‌ವಾಲ್ ಮುಂತಾದವರ ಹೆಸರನ್ನು ಸೂಚಿಸಿದ್ದೇನೆ.

ಶರ್ಮಾ: ನೀವು (ಸಿಜೆಐ ಬೊಬ್ಡೆ) ಸಜೀವ ದೇವರಿದ್ದಂತೆ!

ಸಿಜೆಐ: ಪ್ರತಿಯೊಬ್ಬ ರೈತರಲ್ಲಿಯೂ ಕಾಯಿದೆಗಳೆಡೆಗೆ ವಿಭಿನ್ನ ಅಭಿಪ್ರಾಯಗಳಿವೆ ಎನ್ನುವುದನ್ನು ಬಲ್ಲೆವು. ನಮಗೆ ರೈತ ಸಂಘಟನೆಗಳ ಅಭಿಪ್ರಾಯ ಬೇಕು. ಇದಕ್ಕಾಗಿ ನಾವೊಂದು ಸಮಿತಿಯನ್ನು ರಚಿಸುತ್ತೇವೆ.

ಸಿಜೆಐ: ನಮ್ಮ ಮುಂದಿರುವ ಒಂದು ಆಯ್ಕೆ ಎಂದರೆ ಕಾಯಿದೆಗಳನ್ನು ಅಮಾನತ್ತಿನಲ್ಲಿಡುವುದು. ಅದರೆ, ಅದನ್ನು ಹಾಗೆಯೇ ಮಾಡಲಾಗದು. ನಾವು ಒಂದು ಸಮಿತಿಯನ್ನು ರಚಿಸುತ್ತೇವೆ, ಅದು ನಮಗೆ ವರದಿಯನ್ನು ನೀಡಲಿ.

ಶರ್ಮಾ: ರೈತರು ಇದೆಲ್ಲವನ್ನೂ ಪ್ರತಿಭಟಿಸಲಾರರು. ಅವರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಸಿಜೆಐ ಬೊಬ್ಡೆ: ನಾವಿಲ್ಲಿ ಜೀವನ್ಮರಣದ ಬಗ್ಗೆ ಮಾತನಾಡುತ್ತಿಲ್ಲ. ಕಾಯಿದೆಗಳ ಸಿಂಧುತ್ವದ ಬಗ್ಗೆ ಮಾತನಾಡುತ್ತಿದ್ದೇವೆ.

ಶರ್ಮಾ: ಕಾಯಿದೆಯಡಿ ನಾನು ಕಾಂಟ್ರಾಕ್ಟ್‌ ಗೆ ಒಳಪಟ್ಟರೆ, ಅವರು ನನ್ನ ಭೂಮಿಯನ್ನೂ ಮಾರಬಹುದು. ನಮ್ಮ ಕೃಷಿ ಉತ್ಪನ್ನಗಳು ಲೋಪದಿಂದ ಕೂಡಿವೆ ಎಂದು ಭೂಮಿ ಮಾರಬಹುದು.

ವಕೀಲ ಎಂ ಎಲ್‌ ಶರ್ಮಾ: ಬಿಜೆಪಿ ಸಂಘಟನೆಗಳು ಕೃಷಿ ಕಾಯಿದೆಗಳನ್ನು ಬೆಂಬಲಿಸುವುದಾಗಿ ಹೇಳುತ್ತಿವೆ. ನಾವು ಅವನ್ನು ಹಿಂಪಡೆಯಬೇಕು ಎಂದು ಕೇಳುತ್ತಿದ್ದೇವೆ. ಪ್ರಧಾನಿಯವರು ಕಾಯಿದೆಗಳನ್ನು ಹಿಂಪಡೆಯುವುದಾಗಿ ಹೇಳಬೇಕು.

ವಕೀಲ ಎಂ ಎಲ್‌ ಶರ್ಮಾ: ರೈತರಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲಾಗಿಲ್ಲ.

ಸಿಜೆಐ: ನೀವು ರೈತರಲ್ಲವಲ್ಲ.

ಶರ್ಮಾ: ರೈತರು ನನಗೆ ಕರೆ ಮಾಡಿದ್ದು, ಯಾವುದೇ ಸಮಿತಿಯ ಮುಂದೆ ಹಾಜರಾಗುವುದಿಲ್ಲ ಎಂದಿದ್ದಾರೆ.

ಪ್ರಕರಣದ ವಿಚಾರಣೆ ಆರಂಭಿಸಿದ ಸಿಜೆಐ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ, ವಿ ರಾಮಸುಬ್ರಮಣಿಯನ್‌ ಅವರನ್ನೊಳಗೊಂಡ ಪೀಠ.

ಹೊಸ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್‌ನ ಸಮಿತಿಯ ಮುಂದೆ ಹಾಜರಾಗಲು ರೈತ ಸಂಘಟನೆಗಳು ನಕಾರ ವ್ಯಕ್ತಪಡಿಸಿರುವ ಬಗ್ಗೆ ಹಿರಿಯ ವಕೀಲ ದುಷ್ಯಂತ್ ದವೆ ಅವರಿಂದ 'ಬಾರ್‌ ಅಂಡ್‌ ಬೆಂಚ್'ಗೆ ಮಾಹಿತಿ.

ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿನ ರೈತರ ಪ್ರತಿಭಟನೆ ಕುರಿತ ಪ್ರಕರಣದ ಸಂಬಂಧ ಶೀಘ್ರದಲ್ಲಿಯೇ ಮಧ್ಯಂತರ ಆದೇಶ ನೀಡಲಿರುವ ಸಿಜೆಐ ಎಸ್‌ ಎ ಬೊಬ್ಡೆ ನೇತೃತ್ವದ ಪೀಠ. ನಿನ್ನೆಯ ವಿಚಾರಣೆ ವೇಳೆ ಕಾಯಿದೆಗಳನ್ನು ತಡೆಹಿಡಿಯುವ ಬಗ್ಗೆ ಒಲವು ವ್ಯಕ್ತಪಡಿಸಿದ್ದ ಪೀಠ.

Related Stories

No stories found.
Kannada Bar & Bench
kannada.barandbench.com