ತಮಿಳುನಾಡು ರಾಜ್ಯ ಮಾರಾಟ ನಿಗಮ ನಿಯಮಿತ (TASMAC-ತಸ್ಮಾಕ್) ನಡೆಸುತ್ತಿರುವ ಬಾರ್‌ಗಳು ಮದ್ಯ ಮಾರಾಟ ನಿಯಂತ್ರಿಸುವ ರಾಜ್ಯ ಸರ್ಕಾರದ ಸಾರ್ವಭೌಮ ಕಾರ್ಯಕ್ಕೆ ಒಳಪಡುತ್ತವೆಯೇ ಎಂಬುದನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ [ತಸ್ಮಾಕ್ ಮತ್ತು ಪ್ರಧಾನ ಜಿಎಸ್‌ಟಿ ಆಯುಕ್ತರ ನಡುವಣ ಪ್ರಕರಣ].
ಮದ್ಯ ಮಾರಾಟ ಮಾಡುವ ತಸ್ಮಾಕ್ ಮಳಿಗೆಗಳಿಗೆ ಒಳಪಟ್ಟ ಇಂತಹ ಬಾರ್‌ಗಳು ಸೇವಾ ತೆರಿಗೆ ಕಾನೂನಿನಡಿ ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಗೆ ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಅನುಮತಿಸಿತು.
ನ್ಯಾಯಾಧಿಕರಣವೊಂದರ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಜುಲೈ 2012 ರಿಂದ ಮಾರ್ಚ್ 2013 ರ ಅವಧಿಗೆ ₹40 ಕೋಟಿ ಸೇವಾ ತೆರಿಗೆ ಪಾವತಿಸುವಂತೆ ತಸ್ಮಾಕ್‌ಗೆ ಸೂಚಿಸಿತ್ತು.
ನಕಲಿ ಮತ್ತು ಕಳಪೆ ಮದ್ಯ ಮಾರಾಟ ಮತ್ತು ಸೇವನೆ ತಪ್ಪಿಸುವ ನಿಟ್ಟಿನಲ್ಲಿ ತಸ್ಮಾಕ್ ಮಳಿಗೆಗಳನ್ನು ತೆರೆದಿರುವುದು ಸರ್ಕಾರದ ನೀತಿ ನಿರೂಪಣಾ ಅಂಶವಾಗಿದ್ದು ಅದು ತನ್ನ ಸಾರ್ವಭೌಮ ಕಾರ್ಯಗಳಲ್ಲೊಂದನ್ನು ನಿರ್ವಹಿಸಲು ತಸ್ಮಾಕ್ ಬಾರ್‌ಗಳನ್ನು ನಡೆಸುತ್ತಿದೆ. ಅಲ್ಲದೆ ಸುಂಕ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (CESTAT) ನೀಡಿದ್ದ ಜ್ಞಾಪನಾ ಪತ್ರವು, ಗುತ್ತಿಗೆದಾರರಿಗೆ ಪಾವತಿಸುವ ಕಮಿಷನ್‌ಗೆ ಕೇವಲ ಶೇ 1ರಷ್ಟು ಸೇವಾ ತೆರಿಗೆ ಪಡೆಯುವಂತೆ ಹೇಳುತ್ತದೆ. ಆದರೆ ಹೈಕೋರ್ಟ್ ಈ ಅಂಶವನ್ನು ನಿರ್ಲಕ್ಷಿಸಿದ್ದು ತಸ್ಮಾಕ್ ಮತ್ತು ಸರ್ಕಾರದ ಆರ್ಥಿಕತೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಸೇವಾ ತೆರಿಗೆ ರೂಪದಲ್ಲಿ ₹ 40 ಕೋಟಿ ಪಾವತಿಸುವಂತೆ ನಿರ್ದೇಶಿಸಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ ತಿಳಿಸಲಾಗಿದೆ.