
ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಡಿಜಿಟಲ್ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಶೋಧನಾ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ [ಕುಲಪತಿ, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .
ಕೇರಳ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವೆ ನೇಮಕಾತಿ ವಿಚಾರವಾಗಿ ನಡೆಯುತ್ತಿರುವ ಬಿಕ್ಕಟ್ಟನ್ನು ಪರಿಹರಿಸುವ ಯತ್ನವಾಗಿ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಈ ಕ್ರಮಕ್ಕೆ ಮುಂದಾಯಿತು.
ಎರಡೂ ಕಡೆಯ ಕಕ್ಷಿದಾರರು ತಲಾ 4 ಹೆಸರುಗಳನ್ನು ಪ್ರಸ್ತಾಪಿಸಬೇಕು. ನಂತರ ಪೂರ್ಣಾವಧಿ ವಿಸಿ ನೇಮಕಾತಿ ನಿರ್ಧರಿಸಲು ಶೋಧ ಸಮಿತಿ ರಚಿಸುವುದಾಗಿ ನ್ಯಾಯಪೀಠ ಸೂಚಿಸಿತು. ಅಲ್ಲದೆ ಅಡೆತಡೆ ಇಲ್ಲದೆ ನಿಯಮಿತವಾಗಿ ನೇಮಕಾತಿ ಪ್ರಕ್ರಿಯೆ ನಡೆಯಬೇಕು ಎಂತಲೂ ನ್ಯಾಯಾಲಯ ಹೇಳಿದೆ.
ತಾತ್ಕಾಲಿಕ ಉಪಕುಲಪತಿಗಳನ್ನು ಶಿಫಾರಸು ಮಾಡುವ ರಾಜ್ಯ ಸರ್ಕಾರದ ಅಧಿಕಾರವನ್ನು ಎತ್ತಿಹಿಡಿದ ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ (ಎಕೆಟಿಯು) ಕುಲಾಧಿಪತಿಯೂ ಆದ ಕೇರಳ ರಾಜ್ಯಪಾಲರು ಸಲ್ಲಿಸಿದ್ದ ಅರ್ಜಿಯನ್ನು ಪೀಠ ಆಲಿಸಿತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಕೆ ಶಿವಪ್ರಸಾದ್ ಅವರನ್ನು ವಿವಿಯ ತಾತ್ಕಾಲಿಕ ಉಪಕುಲಪತಿಯಾಗಿ ನೇಮಕ ಮಾಡಿ ರಾಜ್ಯಪಾಲರು ಇತ್ತೀಚೆಗೆ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸರ್ಕಾರ ಹೊಸ ಅರ್ಜಿಯೊಂದನ್ನೂ ಸಲ್ಲಿಸಿದೆ.
ಕೇರಳ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಜೈದೀಪ್ ಗುಪ್ತಾ , ನೇಮಕಾತಿ ವೇಳೆ ರಾಜ್ಯ ಸರ್ಕಾರಕ್ಕೆ ಪಾತ್ರ ಇಲ್ಲವಾದರೆ ಒಕ್ಕೂಟ ರಚನೆಗೆ ಧಕ್ಕೆಯಾಗತ್ತದೆ ಎಂದರು. ಆಗ ನ್ಯಾಯಾಲಯದ ಯತ್ನ ಬಿಕ್ಕಟ್ಟನ್ನು ಕೊನೆಗೊಳಿಸುವುದಾಗಿದೆ ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಹೇಳಿದರು.
"ನಾವು ಈಗ ಶೋಧನಾ ಸಮಿತಿಯನ್ನು ರಚಿಸುತ್ತೇವೆ. ಅದು ಕಾನೂನಿನಿಂದ ಸ್ಥಾಪಿತವಾದ ಕಾರ್ಯವಿಧಾನವನ್ನು ಅನುಸರಿಸುತ್ತದೆ. ಗುಪ್ತಾ ಅವರೇ, ತಾತ್ಕಾಲಿಕ ನೇಮಕಾತಿಗೆ ಸಂಬಂಧಿಸಿದಂತೆ ಕೆದಕಬೇಡಿ ಎಂಬುದು ನಮ್ಮ ವಿನಂತಿ. ಇದಕ್ಕೆ ಅಂತ್ಯ ಹಾಡೋಣ" ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರು ತಮ್ಮ ಕಡೆಯಿಂದ ಹೆಸರುಗಳ ಪಟ್ಟಿಯನ್ನು ನೀಡಿದ ನಂತರ ನಾಳೆ ಸುಪ್ರೀಂ ಕೋರ್ಟ್ ಪ್ರಕರಣ ಆಲಿಸುವ ಸಾಧ್ಯತೆ ಇದೆ. ರಾಜ್ಯಪಾಲರ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ವಾದ ಮಂಡಿಸಿದರು.