ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಹರಿಯಾಣ ಸರ್ಕಾರದ ಕಾನೂನಿಗೆ ತಡೆ ನೀಡಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶದ ವಿರುದ್ಧ ಹರಿಯಾಣ ಸರ್ಕಾರವು ಶುಕ್ರವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಈ ಬಗ್ಗೆ ಸುಪ್ರೀಂ ಕೋರ್ಟ್‌ನ ಸಿಜೆಐ ಎನ್ ವಿ ರಮಣ ಅವರ ಪೀಠದ ಮುಂದೆ ಉಲ್ಲೇಖಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು 'ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ, 2020' ಖಾಸಗಿ ವಲಯದಲ್ಲಿ ಹರಿಯಾಣ ರಾಜ್ಯದ ಸ್ಥಳೀಯ ವ್ಯಕ್ತಿಗಳಿಗೆ ಶೇ.75 ಮೀಸಲಾತಿ ಕಲ್ಪಿಸುತ್ತದೆ. ಇದಕ್ಕೆ ನೀಡಲಾಗಿರುವ ತಡೆಯಾಜ್ಞೆಯನ್ನು ಪ್ರಶ್ನಿಸುತ್ತಿರುವುದಾಗಿ ಉಲ್ಲೇಖಿಸಿದರು.
"ಈ ಕುರಿತ (ಹೈಕೋರ್ಟ್) ಆದೇಶ ಇನ್ನೂ ಹೊರಬಿದ್ದಿಲ್ಲ. ಆದೇಶದ ಅಧಿಕೃತ ಸಲ್ಲಿಕೆಗೆ ಒಳಪಟ್ಟಂತೆ ದಯವಿಟ್ಟು ಸೋಮವಾರ ಇದನ್ನು ಪಟ್ಟಿ ಮಾಡಿ," ಎಂದು ಎಸ್‌ಜಿ ಮೆಹ್ತಾ ಅವರು ಸಿಜೆಐ ಅವರನ್ನು ಕೋರಿದರು. ಇದಕ್ಕೆ ಒಪ್ಪಿದ ಸಿಜೆಐ ಪ್ರಕರಣವನ್ನು ಸೋಮವಾರ ಪಟ್ಟಿಮಾಡಲು ಸೂಚಿಸಿದರು.
ಹಿನ್ನೆಲೆ
'ದ ಟ್ರಿಬ್ಯೂನ್'ನ ವರದಿಯಂತೆ ಖಾಸಗಿ ವಲಯದಲ್ಲಿನ ರೂ. 30,000ಕ್ಕೂ ಕಡಿಮೆ ವೇತನದ ಉದ್ಯೋಗಗಳಲ್ಲಿ ಸ್ಥಳೀಯ ಯುವ ಸಮುದಾಯಕ್ಕೆ ಶೇ. 75 ಮೀಸಲಾತಿ ಕಲ್ಪಿಸುವ ಹರಿಯಾಣ ಸರ್ಕಾರದ ಕಾನೂನು ಜನವರಿ 15, 2022ರಿಂದ ಜಾರಿಯಾಗಲಿದೆ. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅನೇಕ ಅರ್ಜಿಗಳನ್ನು ಗುರುವಾರ ನ್ಯಾ. ಅಜಯ್ ತಿವಾರಿ ಮತ್ತು ನ್ಯಾ. ಪಂಕಜ್ ಜೈನ್ ಅವರ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠವು ವಿಚಾರಣೆಗೆ ಪರಿಗಣಿಸಿತು.
ಪ್ರಸಕ್ತ ಕಾನೂನಿನಿಂದ ಅಲ್ಪಕಾಲೀನ ಕೆಲಸಗಳು ಹಾಗೂ ಅನೇಕ ಪ್ರಾಥಮಿಕ ಸೇವೆಗಳನ್ನು ಹೊರಗಿಡಲಾಗಿದೆ. ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಕಾನೂನ್ನು ಜಾರಿಗೆ ತರುವುದು ಸರ್ಕಾರದಲ್ಲಿ ಭಾಗಿಯಾಗಿರುವ ಜನನಾಯಕ್ ಜನತಾ ಪಕ್ಷದ ಚುನಾವಣಾಪೂರ್ವ ಆಶ್ವಾಸನೆಯಾಗಿತ್ತು. ಪಕ್ಷದ ನಾಯಕರಾದ, ಪ್ರಸಕ್ತ ಉಪಮುಖ್ಯಮಂತ್ರಿಯಾಗಿರುವ ದುಷ್ಯಂತ್ ಚೌಟಾಲಾ ಅವರು ಇದರ ತೀವ್ರ ಪ್ರತಿಪಾದಕರಾಗಿದ್ದರು.
ಕಾನೂನಿ ಬಗ್ಗೆ ಖಾಸಗಿ ವಲಯದಿಂದ ತೀವ್ರ ಪ್ರತಿರೋಧ ಎದುರಾಗಿದೆ. ಫರೀದಾಬಾದ್ ಕೈಗಾರಿಕಾ ಒಕ್ಕೂಟ, ಐಎಂಟಿ ಕೈಗಾರಿಕಾ ಒಕ್ಕೂಟ ಮತ್ತು ಗುಡ್‌ಗಾಂವ್ ಕೈಗಾರಿಕಾ ಒಕ್ಕೂಟಗಳು ಸರ್ಕಾರದ ಈ ಕಾನೂನನನ್ನು ಬಲವಾಗಿ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿವೆ. ಈ ಕಾನೂನು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದ್ದು, ಅರ್ಹತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಗುಡ್‌ಗಾಂವ್ ಒಕ್ಕೂಟವು ಅರ್ಜಿಯಲ್ಲಿ ಹೇಳಿದೆ.