ಹಿಂದಿನ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ದಸರಾ ರಜೆಯ ಬಳಿಕ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಪ್ರಕರಣದ ಕುರಿತು ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರ ಮುಂದೆ ಇಂದು ಉಲ್ಲೇಖಿಸಲಾಯಿತು. “ಹೌದು, ಆ ಅರ್ಜಿಗಳನ್ನು ದಸರಾ ರಜೆಯ ಬಳಿಕ ವಿಚಾರಣೆಗೆ ಪಟ್ಟಿ ಮಾಡಲಾಗುವುದು” ಎಂದು ಸಿಜೆಐ ಹೇಳಿದರು.
ಅಕ್ಟೋಬರ್ 3ರಿಂದ ನ್ಯಾಯಾಲಯಕ್ಕೆ ದಸರಾ ರಜೆ ಆರಂಭವಾಗಲಿದ್ದು, ಅಕ್ಟೋಬರ್ 10ಕ್ಕೆ ಪುನಾರಂಭವಾಗಲಿದೆ. ಕೇಂದ್ರ ಸರ್ಕಾರವು 2019ರ ಆಗಸ್ಟ್‌ನಲ್ಲಿ ಸಂವಿಧಾನದ 370ನೇ ವಿಧಿ ರದ್ದುಪಡಿಸಿರುವ ನಿರ್ಧಾರ ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ 20ಕ್ಕೂ ಅರ್ಜಿಗಳು ಸಲ್ಲಿಕೆಯಾಗಿವೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಹಿಂಪಡೆದ ಬಳಿಕ ಲಡಾಖ್ ಹಾಗೂ ಜಮ್ಮು ಮತ್ತು ಕಾಶ್ಮೀರ ಎಂದು ರಾಜ್ಯವನ್ನು ಇಬ್ಬಾಗ ಮಾಡಿ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಕೇಂದ್ರ ಸರ್ಕಾರ ರೂಪಿಸಿದೆ.
ಈ ಹಿಂದೆ, ಪ್ರೇಮ್‌ನಾಥ್ ಕೌಲ್ ವರ್ಸಸ್ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹಾಗೂ ಸಂಪತ್ ಪ್ರಕಾಶ್ ವರ್ಸಸ್ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಎರಡು ಪ್ರಕರಣಗಳಲ್ಲಿ ಎರಡು ಪ್ರತ್ಯೇಕ ಪಂಚಸದಸ್ಯ ಪೀಠಗಳು ನೀಡಿರುವ ತೀರ್ಪು ವ್ಯತಿರಿಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ 370ನೇ ವಿಧಿಗೆ ಸಂಬಂಧಿಸಿದ ಪ್ರಕರಣವನ್ನು ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೆಲವು ಪಕ್ಷಕಾರರು ಕೋರಿದ್ದರು. ಆದರೆ, 2020ರ ಮಾರ್ಚ್‌ನಲ್ಲಿ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಅರ್ಜಿದಾರರ ಈ ಕೋರಿಕೆಯನ್ನು ತಿರಸ್ಕರಿಸಿತ್ತು ಹಾಗೂ ಸದರಿ ಪ್ರಕರಣವನ್ನು ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಹೇಳಿತ್ತು.