ಈಶ ಪ್ರತಿಷ್ಠಾನ ವಿರುದ್ಧದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ: ಪ್ರಕರಣ ತನಗೆ ವರ್ಗಾಯಿಸಿಕೊಂಡ ಸುಪ್ರೀಂ

ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದೆದುರು ಹಿರಿಯ ವಕೀಲ ಮುಕುಲ್ ರೋಹಟ್ಗಿ ಪ್ರಕರಣ ಪ್ರಸ್ತಾಪಿಸಿದ ನಂತರ ತಡೆಯಾಜ್ಞೆ ನೀಡಲಾಯಿತು.
Sadhguru, Supreme Court
Sadhguru, Supreme Court
Published on

ಅಧ್ಯಾತ್ಮ ಗುರು ಜಗ್ಗಿ ವಾಸುದೇವ್ ಅವರ ಈಶ ಪ್ರತಿಷ್ಠಾನ ವಿರುದ್ಧ ಪೊಲೀಸ್‌ ಕ್ರಮ ಕೈಗೊಳ್ಳವುದಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ತಡೆ ನೀಡಿದೆ. ಅಲ್ಲದೆ, ಪ್ರತಿಷ್ಠಾನಕ್ಕೆ ಸಂಬಂಧಿಸಿದ ಪ್ರಕರಣವನ್ನು ಮದ್ರಾಸ್‌ ಹೈಕೋರ್ಟ್‌ನಿಂದ ಸರ್ವೋಚ್ಚ ನ್ಯಾಯಾಲಯ ತನಗೆ ವರ್ಗಾಯಿಸಿಕೊಂಡಿದೆ.

ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಿವರ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಈಚೆಗೆ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಪ್ರತಿಷ್ಠಾನ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ವಾಸಿಸುವಂತೆ ತಮ್ಮ ಇಬ್ಬರು ಹೆಣ್ಣುಮಕ್ಕಳ ತಲೆ ಕೆಡಿಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಕಳೆದ ವಾರ ಈ ಆದೇಶ ನೀಡಿತ್ತು.

ಸ್ವಇಚ್ಛೆಯಿಂದ ಪ್ರತಿಷ್ಠಾನದಲ್ಲಿದ್ದೇವೆ ಅಲ್ಲಿರಲು ನಮ್ಮನ್ನು ಯಾರೂ ಒತ್ತಾಯಿಸಿಲ್ಲ ಎಂದು ಮೊದಲು ಹೈಕೋರ್ಟ್‌ಗೆ ಆ ಮಹಿಳೆಯರು ತಿಳಿಸಿದ್ದರಾದರೂ ಬಳಿಕ ಅವರನ್ನು ಕೋಣೆಗೆ ಕರೆಸಿ ಗೌಪ್ಯವಾಗಿ ಮಾತಕತೆ ನಡೆಸಿದ ಉಚ್ಚ ನ್ಯಾಯಾಲಯಕ್ಕೆ ಅನುಮಾನಗಳು ಮೂಡಿದ್ದವು. ಆದ್ದರಿಂದ ಅದು ಈ ಆದೇಶ ನೀಡಿತ್ತು.    

ಆದರೆ ಸಿಜೆಐ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ಪೀಠ ಇಂದು ಆ ಇಬ್ಬರು ಹೆಣ್ಣುಮಕ್ಕಳೊಂದಿಗೆ ಸಂವಾದ ನಡೆಸಿದಾಗ ಅವರು ತಾವು ಸ್ವಇಚ್ಛೆಯಿಂದ ಆಶ್ರಮದಲ್ಲಿದ್ದು ತಮ್ಮನ್ನು ಯಾರೂ ಬಂಧಿಸಿಟ್ಟಿಲ್ಲ ಎಂದರು. ಆದ್ದರಿಂದ ನ್ಯಾಯಾಲಯ ಪ್ರಕರಣವನ್ನು ಮದ್ರಾಸ್‌ ಹೈಕೋರ್ಟ್‌ನಿಂದ ತನಗೆ ವರ್ಗಾಯಿಸಿಕೊಂಡಿತು.

ಮೂಲ ಅರ್ಜಿದಾರರು ವರ್ಚುವಲ್‌ ವೇದಿಕೆ ಅಥವಾ ಅವರ ವಕೀಲರ ಮುಖೇನ ಹಾಜರಾಗಬೇಕು. ಪೊಲೀಸರು ಸ್ಥಿತಿಗತಿ ವರದಿ ಸಲ್ಲಿಸಬೇಕು ಹಾಗೂ ಹೈಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಪೊಲೀಸರು ಇನ್ನು ಮುಂದೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಕೂಡ ಸುಪ್ರೀಂ ಕೋರ್ಟ್‌ ಸೂಚಿಸಿತು.  

ಪೀಠದೆದುರು ಹಿರಿಯ ವಕೀಲ ಮುಕುಲ್ ರೋಹಟ್ಗಿ ಪ್ರಕರಣ ಪ್ರಸ್ತಾಪಿಸಿದರು. ಈಶ ಪ್ರತಿಷ್ಠಾನದ ವಾದವನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೂಡ ಬೆಂಬಲಿಸಿದರು.

Kannada Bar & Bench
kannada.barandbench.com