ಆರಾಧನಾ ಸ್ಥಳಗಳ ಕಾಯಿದೆಯಲ್ಲಿ ಪೂಜಾ ಸ್ಥಳದ ಧಾರ್ಮಿಕ ಸ್ವರೂಪ ಖಚಿತ ಪಡಿಸಿಕೊಳ್ಳುವುದನ್ನು ನಿರ್ಬಂಧಿಸಿಲ್ಲ: ಸುಪ್ರೀಂ

ಜ್ಞಾನವಾಪಿ-ಕಾಶಿ ವಿಶ್ವನಾಥ ವಿವಾದದ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವ ಕುರಿತು ಹಿಂದೂ ಮತ್ತು ಮುಸ್ಲಿಮ್‌ ಸಮುದಾಯಗಳೆರಡೂ ಹಕ್ಕು ಸಾಧಿಸುತ್ತಿರುವುದಕ್ಕೆ ಸಂಬಂಧಿಸಿದ ಸಿವಿಲ್‌ ದಾವೆಯನ್ನು ಜಿಲ್ಲಾ ನ್ಯಾಯಾಧೀಶರು ನಿರ್ಧರಿಸಬೇಕು ಎಂದು ಸುಪ್ರೀಂ
ಆರಾಧನಾ ಸ್ಥಳಗಳ ಕಾಯಿದೆಯಲ್ಲಿ ಪೂಜಾ ಸ್ಥಳದ ಧಾರ್ಮಿಕ ಸ್ವರೂಪ ಖಚಿತ ಪಡಿಸಿಕೊಳ್ಳುವುದನ್ನು ನಿರ್ಬಂಧಿಸಿಲ್ಲ: ಸುಪ್ರೀಂ

ಆರಾಧನಾ ಸ್ಥಳಗಳ ಕಾಯಿದೆಯಲ್ಲಿ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಖಚಿತ ಪಡಿಸಿಕೊಳ್ಳುವುದನ್ನು ನಿರ್ಬಂಧಿಸಿಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಮೌಖಿಕವಾಗಿ ಹೇಳಿದ್ದು, ದೇಶದಲ್ಲಿನ ಧಾರ್ಮಿಕ ರಚನೆಗಳ ಸ್ವರೂಪ ಮತ್ತು ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಮಹತ್ವದ ಅಭಿಪ್ರಾಯ ಎಂದು ಪರಿಗಣಿಸಲ್ಪಟ್ಟಿದೆ.

ಜ್ಞಾನವಾಪಿ-ಕಾಶಿ ವಿಶ್ವನಾಥ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಅವರು “1991ರ ಕಾಯಿದೆ ಸೆಕ್ಷನ್‌ 3ರ ಅಡಿ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಖಚಿತ ಪಡಿಸಿಕೊಳ್ಳುವುದನ್ನು ನಿರ್ಬಂಧಿಸಿಲ್ಲ. ಒಂದು ಪಾರ್ಸಿ ದೇವಾಲಯವಿದ್ದು, ಅಲ್ಲಿ ಮೂಲೆಯಲ್ಲಿ ಒಂದು ಶಿಲುಬೆ ಇದೆ ಎಂದು ಭಾವಿಸೋಣ. ಆಗ ಆ ಶಿಲುಬೆಯ ಇರುವಿಕೆಯು ಆ ಸ್ಥಳವನ್ನು ಅಗ್ಯಾರಿ (ಪಾರ್ಸಿಗಳ ದೇವಾಲಯ) ಆಗಿಸುತ್ತದೆಯೋ ಅಥವಾ ಅಗ್ಯಾರಿ ಕ್ರಿಶ್ಚಿಯನ್‌ ಆಗಿಸುತ್ತದೆಯೋ? ಈ ಬಗೆಯ ಹೈಬ್ರಿಡ್‌ ಸ್ವರೂಪ ಹೊಸತೇನಲ್ಲ” ಎಂದರು.

ಆಗ ಮುಸ್ಲಿಮ್‌ ಪಕ್ಷಕಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹುಜೇಫಾ ಅಹ್ಮದಿ ಅವರು “1947ರ ಆಗಸ್ಟ್‌ 15ರವರೆಗೆ ಜ್ಞಾನವಾಪಿ ಮಸೀದಿಯ ಧಾರ್ಮಿಕ ಸ್ವರೂಪವು ವಿವಾದಾತೀತವಾಗಿದೆ” ಎಂದರು.

ಇದನ್ನು ತೀವ್ರವಾಗಿ ಪ್ರತಿಭಟಿಸಿದ ಹಿಂದೂ ಪಕ್ಷಕಾರರ ವಕೀಲರು “ಇದು ನಿಜಕ್ಕೂ ವಿವಾದತ್ಮಾಕವಾಗಿದೆ” ಎಂದರು.

ಇದಕ್ಕೆ ಅಹ್ಮದಿ ಅವರು “ನೀವು ಹಾಗೆ ಭಾವಿಸಬಹುದು. ಇದಕ್ಕೆ ಅನುಮತಿಸಿದರೆ 1991ರ ಕಾಯಿದೆಯು ಉಪಯೋಗಕ್ಕೆ ಬಾರದ ಕಾಗದವಾಗುತ್ತದೆ. ಇಂಥ ವಿವಾದಗಳನ್ನು ನಿರ್ಬಂಧಿಸುವುದು ಆ ಕಾಯಿದೆಯ ಉದ್ದೇಶವಾಗಿದೆ” ಎಂದರು.

ರಾಮಜನ್ಮ ಭೂಮಿ ಆಂದೋಲನದ ಸಂದರ್ಭದಲ್ಲಿ ಆರಾಧನಾ ಸ್ಥಳಗಳ ಕಾಯಿದೆ 1991ಯನ್ನು ಜಾರಿಗೆ ತರಲಾಗಿದೆ. 1947ರ ಆಗಸ್ಟ್‌ 15ರಲ್ಲಿ ಆರಾಧನಾ ಸ್ಥಳಗಳು ಯಾವ ರೀತಿಯಿದ್ದವೋ ಅದೇ ಯಥಾಸ್ಥಿತಿಯನ್ನು ರಕ್ಷಿಸುವ ಉದ್ದೇಶವನ್ನು ಕಾಯಿದೆ ಹೊಂದಿದೆ.

Also Read
ಜ್ಞಾನವಾಪಿ ಮಸೀದಿ ಸಮೀಕ್ಷೆ: ನ್ಯಾಯಾಲಯ ನೇಮಿಸಿರುವ ಆಯುಕ್ತರ ಸಮೀಕ್ಷಾ ವರದಿಯಲ್ಲಿ ಏನಿದೆ?

ಜಿಲ್ಲಾ ನ್ಯಾಯಾಧೀಶರು ಸಿವಿಲ್‌ ದಾವೆ ನಿರ್ಧರಿಸಲಿ: ಸುಪ್ರೀಂ ಕೋರ್ಟ್‌

ಜ್ಞಾನವಾಪಿ-ಕಾಶಿ ವಿಶ್ವನಾಥ ವಿವಾದದ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವ ಕುರಿತು ಹಿಂದೂ ಮತ್ತು ಮುಸ್ಲಿಮ್‌ ಸಮುದಾಯಗಳೆರಡೂ ಹಕ್ಕು ಸಾಧಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಿವಿಲ್‌ ದಾವೆಯು ನಿರ್ವಹಣೆಯನ್ನು ಜಿಲ್ಲಾ ನ್ಯಾಯಾಧೀಶರು ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ವಾರಾಣಸಿಯ ಸಿವಿಲ್‌ ನ್ಯಾಯಾಧೀಶರ ಮುಂದಿರುವ ಈ ಪ್ರಕರಣವು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅದನ್ನು ವರ್ಗಾವಣೆ ಮಾಡಲಾಗಿದ್ದು, ಉತ್ತರ ಪ್ರದೇಶದ ಹಿರಿಯ ಮತ್ತು ಅನುಭವಿ ನ್ಯಾಯಾಂಗ ಅಧಿಕಾರಿಗಳು ಅದನ್ನು ನಿರ್ಧರಿಸಬೇಕು. ಹೀಗಾಗಿ, ವಾರಾಣಸಿಯ ಸಿವಿಲ್‌ ನ್ಯಾಯಾಧೀಶರಿಂದ (ಹಿರಿಯರ ವಿಭಾಗ) ಪ್ರಕರಣವನ್ನು ವಾರಾಣಸಿ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಲಾಗಿದೆ. ಫಿರ್ಯಾದುದಾರರು ಹೂಡಿರುವ ದಾವೆಯನ್ನು ಜಿಲ್ಲಾ ನ್ಯಾಯಾಧೀಶರು ಆದ್ಯತೆಯ ಮೇಲೆ ನಿರ್ಧರಿಸಬೇಕು” ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಪಿ ಎಸ್‌ ನರಸಿಂಹ ಅವರನ್ನು ಒಳಗೊಂಡ ಪೀಠ ಆದೇಶಿಸಿದೆ.

Kannada Bar & Bench
kannada.barandbench.com