ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣಗೆ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಭವಾನಿ ರೇವಣ್ಣ ಆರೋಪಿಯಾಗಿದ್ದಾರೆ.
Bhavani Revanna and Supreme Court
Bhavani Revanna and Supreme Court
Published on

ಮಾಜಿ ಸಂಸದ ಹಾಗೂ ಪುತ್ರ ಪ್ರಜ್ವಲ್‌ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಭವಾನಿ ರೇವಣ್ಣಗೆ ಕರ್ನಾಟಕ ಹೈಕೋರ್ಟ್‌ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಎತ್ತಿ ಹಿಡಿದಿದೆ.

ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಉಜ್ಜಲ್‌ ಭುಯಾನ್‌ ಅವರ ವಿಭಾಗೀಯ ಪೀಠ ತಿರಸ್ಕರಿಸಿದೆ.

ಕಳೆದ ಜುಲೈನಲ್ಲಿ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರದ ಮೇಲ್ಮನವಿಗೆ ಸಂಬಂಧಿಸಿದಂತೆ ಭವಾನಿಗೆ ನೋಟಿಸ್‌ ಜಾರಿ ಮಾಡಿತ್ತು. ಅಲ್ಲದೇ, ಪ್ರಕರಣವನ್ನು ರಾಜಕೀಯಗೊಳಿಸದಂತೆ ನ್ಯಾಯಾಲಯವು ಪಕ್ಷಕಾರರಿಗೆ ಈ ಹಿಂದೆ ಸೂಚಿಸಿತ್ತು.

2024ರ ಜೂನ್‌ 18ರ ಆದೇಶದಲ್ಲಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರು “ಈ ತೀರ್ಪಿನ ಮೂಲಕ ನಾನು ತಪ್ಪನ್ನೂ ಎಸಗಿರಬಹುದು. ಆದರೆ, ಒಮ್ಮತದ ತೀರ್ಪು ನೀಡಿದ್ದೇನೆ. ಅರ್ಜಿಯು ಊರ್ಜಿತವಾಗಿದ್ದು, ಭವಾನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ” ಎಂದು ಆದೇಶಿಸಿದ್ದರು.

“ಪೊಲೀಸರು ಆರೋಪಿಯನ್ನು ಕಸ್ಟಡಿಗೆ ಕೇಳಿದರೆ, ಕಣ್ಣು ಮುಚ್ಚಿಕೊಂಡು ನ್ಯಾಯಾಲಯವು ನೀಡಬೇಕು ಎಂದು ಪ್ರಾಸಿಕ್ಯೂಷನ್‌ ವಾದಿಸಿದೆ. ಇದು ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿದೆ. ಬ್ಯಾಂಕಾಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲೂ ಮಹಿಳೆಯನ್ನು ಬಂಧಿಸುವಂತಿಲ್ಲ ಎಂದು ಹೇಳಲಾಗಿದೆ” ಎಂದಿದ್ದರು.

“ಎಸ್‌ಐಟಿ ವಿಚಾರಣೆಗೆ ಭವಾನಿ ಸಹಕರಿಸಿಲ್ಲ ಎಂದು ಪ್ರಾಸಿಕ್ಯೂಷನ್‌ ವಾದಿಸಿತ್ತು. ಮೂರು ದಿನಗಳಲ್ಲಿ ಒಟ್ಟು 85 ಪ್ರಶ್ನೆಗಳನ್ನು ಕೇಳಲಾಗಿದ್ದು, ಎಲ್ಲದಕ್ಕೂ ಆಕೆ ಉತ್ತರಿಸಿದ್ದಾರೆ. ತಾವು ಬಯಸಿದಂತೆ ಆರೋಪಿ ಉತ್ತರಿಸಬೇಕು ಎಂದು ಪೊಲೀಸರು ನಿರೀಕ್ಷಿಸಲಾಗದು. ಸಂತ್ರಸ್ತೆಗೆ ಆಹಾರ ನೀಡಿಲ್ಲ ಮತ್ತು ಉಡುಪು ಬದಲಿಸಲು ಭವಾನಿ ಅವಕಾಶ ನೀಡಿಲ್ಲ ಎಂದು ಪ್ರಾಸಿಕ್ಯೂಷನ್‌ ವಾದಿಸಿತ್ತು. ಸಂತ್ರಸ್ತೆಯ ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆ ಓದಿದಾಗ ಬಟ್ಟೆ ಮತ್ತು ಊಟವನ್ನು ಭವಾನಿ ಕಳುಹಿಸಿದ್ದರು ಎಂದು ಹೇಳಿದ್ದಾರೆ. ಹೀಗಾಗಿ, ಸಂತ್ರಸ್ತೆಯನ್ನು ಒತ್ತೆಯಲ್ಲಿ ಇಡಲಾಗಿತ್ತು ಎನ್ನಲಾಗದು” ಎಂದು ಆದೇಶದಲ್ಲಿ ವಿವರಿಸಿದ್ದರು.

Also Read
ಭವಾನಿಗೆ ನಿರೀಕ್ಷಣಾ ಜಾಮೀನು ಮಂಜೂರು: ಮಾಧ್ಯಮ ವಿಚಾರಣೆಗೆ ನ್ಯಾ. ದೀಕ್ಷಿತ್‌ ಅಸಮಾಧಾನ; ಸಂಯಮ ಪ್ರದರ್ಶಿಸಲು ಮನವಿ

“ಮಹಿಳೆಯನ್ನು ಅನಗತ್ಯವಾಗಿ ಬಂಧಿಸುವ ವಿಚಾರವನ್ನೂ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ. ಮಹಿಳೆಯರನ್ನು ಕಸ್ಟಡಿಗೆ ನೀಡುವುದರ ವಿರುದ್ಧ ನಾನಿದ್ದೇನೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಕುಟುಂಬದ ಆಧಾರ. ಆಕೆಯನ್ನು ಪೊಲೀಸರು ಬಂಧಿಸಿದರೆ ಇಡೀ ಕುಟುಂಬ ವ್ಯವಸ್ಥೆಗೆ ಹಾನಿಯಾಗುತ್ತದೆ. ಬಂಧನ ವಾರೆಂಟ್‌ ಜಾರಿ ಮಾಡಿದ ಮೇಲೆ ಜಾಮೀನು ಕೇಳುವ ಹಾಗೆ ಇಲ್ಲ ಎಂಬುದಕ್ಕೂ ಆದೇಶದಲ್ಲಿ ಉತ್ತರಿಸಿದ್ದೇನೆ. ಜಾಮೀನು ನೀಡುವಂತಿಲ್ಲ ಎಂಬುದು ಸ್ಥಾಪಿತ ನಿಯಮವಲ್ಲ. ಅದು ಸಂದರ್ಭ ಮತ್ತು ಪ್ರಕರಣದ ವಾಸ್ತವಿಕ ಅಂಶಗಳನ್ನು ಆಧರಿಸಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ” ಎಂದು ವಿವರಿಸಿದ್ದರು.

“ಎಸ್‌ಐಟಿ ಅಧಿಕಾರಿಗಳು ಸೂಚಿಸಿದಾಗ ಭವಾನಿ ವಿಚಾರಣೆಗೆ ಹಾಜರಾಗಿದ್ದಾರೆ. ಮತ್ತೆ ಕರೆದಾಗಲೂ ವಿಚಾರಣೆಗೆ ಹಾಜರಾಗಲಾಗುವುದು ಎಂದು ಹೇಳಿದ್ದಾರೆ. ಹೀಗಾಗಿ, ನಿರೀಕ್ಷಣಾ ಜಾಮೀನನ್ನು ಕಾಯಂಗೊಳಿಸಲಾಗಿದೆ. ಅಗತ್ಯ ಬಿದ್ದರೆ ಆರೋಪಿ ಭವಾನಿ ಅವರನ್ನು ಕೆ ಆರ್‌ ನಗರಕ್ಕೆ ವಿಚಾರಣೆಗೆ ಕರೆದೊಯ್ಯಲು ಎಸ್‌ಐಟಿಗೆ ಅನುಮತಿಸಲಾಗಿದೆ” ಎಂದು ತಿಳಿಸಿದ್ದರು. 

Kannada Bar & Bench
kannada.barandbench.com