ಇ ಡಿ ಪ್ರಕರಣದಲ್ಲಿ ಹೇಮಂತ್ ಸೊರೇನ್‌ಗೆ ಜಾಮೀನು: ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಹೈಕೋರ್ಟ್ ನೀಡಿರುವ ಆದೇಶ ಸಾಕಷ್ಟು ತರ್ಕಬದ್ಧವಾಗಿದ್ದು ತಾನು ಮಾಡುವ ಯಾವುದೇ ಅವಲೋಕನ ವಾಸ್ತವವಾಗಿ ಜಾರಿ ನಿರ್ದೇಶನಾಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
Hemant soren and ED
Hemant soren and ED
Published on

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ ಮುಖ್ಯಮಂತ್ರಿ ಹಾಗೂ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ಅವರಿಗೆ ಅಲ್ಲಿನ ಹೈಕೋರ್ಟ್‌ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಎತ್ತಿಹಿಡಿದಿದೆ [ಜಾರಿ ನಿರ್ದೇಶನಾಲಯ ಮತ್ತು ಹೇಮಂತ್‌ ಸೊರೇನ್‌ ನಡುವಣ ಪ್ರಕರಣ].

ಹೈಕೋರ್ಟ್ ನೀಡಿದ ಆದೇಶ ಸಾಕಷ್ಟು ತರ್ಕಬದ್ಧವಾಗಿದ್ದು ತನ್ನ ಯಾವುದೇ ಅವಲೋಕನ  ವಾಸ್ತವವಾಗಿ ಜಾರಿ ನಿರ್ದೇಶನಾಲಯದ (ಇ ಡಿ) ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಹೇಳಿದೆ.

Also Read
ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ಗೆ ಜಾಮೀನು

ನಮ್ಮ ಯಾವುದೇ ಅವಲೋಕನ ನಿಮ್ಮ ಮೇಲೆ ಪರಿಣಾಮ ಬೀರಬಹುದು. ಹೈಕೋರ್ಟ್‌ ನ್ಯಾಯಮೂರ್ತಿಗಳು ಸಮಂಜಸವಾದ ತರ್ಕಬದ್ಧ ಆದೇಶ ನೀಡಿದ್ದಾರೆ ಎಂದು  ನ್ಯಾಯಮೂರ್ತಿ ಗವಾಯಿ ವಿವರಿಸಿದ್ದಾರೆ.

ಹಗರಣದಲ್ಲಿ ಅವರ ಪಾತ್ರ ಇರುವುದ ವಿವರವಾದ ಹೇಳಿಕೆಗಳು ಸೂಚಿಸುತ್ತವೆ ಎಂದು ಇ ಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ ವಿ ರಾಜು ವಾದಿಸಿದರು. ಇದಕ್ಕೆ ನ್ಯಾಯಾಲಯವು “ಭಾನು ಪ್ರತಾಪ್‌ ಅವರು ನೀಡಿರುವ ಪ್ರತಿಕೂಲ ಹೇಳಿಕೆ ಸೊರೇನ್‌ ಅವರ ಯಾವುದೇ ಪಾತ್ರ ಇಲ್ಲ ಎನ್ನುತ್ತದೆ" ಎಂದಿತು.   ಹಾಗಾಗಿ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿತು.

ಮೇಲ್ಮನವಿ ವಜಾಗೊಳಿಸಿರುವುದು ವಿಚಾರಣೆ ಮೇಲೆ ಪ್ರಭಾವ ಬೀರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಜಾರ್ಖಂಡ್ ಹೈಕೋರ್ಟ್ ಆದೇಶದ ವಿರುದ್ಧ ಇ ಡಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ಭೂ ಹಗರಣದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೊರೇನ್‌ ಅವರನ್ನು ಬಂಧಿಸಿತ್ತು. ಇದರಿಂದಾಗಿ ಜನವರಿ 31 ರಂದು ಸೊರೇನ್‌ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೈಕೋರ್ಟ್‌ ಜಾಮೀನು ನೀಡಿದ ಬಳಿಕ ಅವರು ಜೂನ್‌ 28ರಂದು ಬಿಡುಗಡೆಗೊಂಡಿದ್ದರು. ಜುಲೈ 4ರಂದು ಮತ್ತೆ ಮುಖ್ಯಮಂತ್ರಿ ಗಾದಿಯೇರಿದ್ದರು.

Kannada Bar & Bench
kannada.barandbench.com