Supreme Court, Assam
Supreme Court, Assam

ಪೌರತ್ವ ಕಾಯಿದೆ ಸೆಕ್ಷನ್ 6ಎ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್

ತೀರ್ಪಿನಂತೆ, ಮಾರ್ಚ್ 25, 1971ರ ನಂತರ ಅಸ್ಸಾಂಗೆ ಪ್ರವೇಶಿಸಿದ ವಲಸಿಗರು ಸೆಕ್ಷನ್ 6ಎ ಅಡಿಯಲ್ಲಿ ರಕ್ಷಣೆಗೆ ಅರ್ಹರಾಗಿರುವುದಿಲ್ಲ ಪರಿಣಾಮ ಅವರನ್ನು ಅಕ್ರಮ ವಲಸಿಗರು ಎಂದು ಘೋಷಿಸಲಾಗುತ್ತದೆ.
Published on

ಅಸ್ಸಾಂ ಒಪ್ಪಂದದ ವ್ಯಾಪ್ತಿಗೆ ಬರುವ ವಲಸಿಗರಿಗೆ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ 1955ರ ಪೌರತ್ವ ಕಾಯಿದೆ ಸೆಕ್ಷನ್ 6ಎ ಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ. [ಪೌರತ್ವ ಕಾಯಿದೆ ಸೆಕ್ಷನ್ 6ಎಗೆ ಸಂಬಂಧಿಸಿದ ಪ್ರಕರಣ]

ಸೆಕ್ಷನ್ 6ಎ ಪ್ರಕಾರ, ಜನವರಿ 1, 1966 ಮತ್ತು ಮಾರ್ಚ್ 25, 1971ರ ನಡುವೆ ಭಾರತ ಪ್ರವೇಶಿಸಿ ಅಸ್ಸಾಂನಲ್ಲಿ ವಾಸಿಸುತ್ತಿರುವ ಜನರು ತಮ್ಮನ್ನು ಭಾರತದ ನಾಗರಿಕರು ಎಂದು ನೋಂದಾಯಿಸಿಕೊಳ್ಳಲು ಅವಕಾಶ ಇದೆ.

Also Read
ಸಿಎಎ ನಿಯಮಾವಳಿ ಅಧಿಸೂಚನೆ ಹೊರಡಿಸುವುದಾಗಿ ಘೋಷಿಸಿದ ಕೇಂದ್ರ; ಪೌರತ್ವ ತಿದ್ದುಪಡಿ ಕಾಯಿದೆ ಇಂದಿನಿಂದ ಜಾರಿಗೆ

ಉಪ ಸೆಕ್ಷನ್‌ಗಳಾದ 6 ಮತ್ತು 7ರ ನಿಬಂಧನೆಗೊಳಪಟ್ಟು 1966 ರ ಜನವರಿ 1ಕ್ಕೂ ಮುನ್ನ ನಿರ್ದಿಷ್ಟಪಡಿಸಿದ ಪ್ರದೇಶದಿಂದ ಅಸ್ಸಾಂಗೆ ಬಂದ ಭಾರತೀಯ ಮೂಲದ ಎಲ್ಲಾ ವ್ಯಕ್ತಿಗಳು (1967ರಲ್ಲಿ ಜನರಲ್‌ ಹೌಸ್‌ಗೆ ನಡೆದ ಸಾರ್ವತ್ರಿಕ ಚುನಾವಣೆಗಾಗಿ ಬಳಸಲಾದ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಸೇರಿದಂತೆ) ಮತ್ತು ಜನವರಿ 1, 1966ಕ್ಕೆ ಅನ್ವಯಿಸುವಂತೆ ಅಸ್ಸಾಂ  ಪ್ರವೇಶಿಸಿ ಅಸ್ಸಾಂನಲ್ಲಿ ಸಾಮಾನ್ಯವಾಗಿ ವಾಸಿಸುತ್ತಿರುವವರನ್ನು ಭಾರತದ ಪ್ರಜೆಗಳೆಂದು ಪರಿಗಣಿಸಲಾಗಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್,  ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ,  ಎಂ ಎಂ ಸುಂದರೇಶ್‌ ,  ಜೆಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ 4:1 ಬಹುಮತದೊಡನೆ ಸೆಕ್ಷನ್‌ 6ಎ ಯ ಸಿಂಧುತ್ವ ಎತ್ತಿಹಿಡಿದಿದೆ.  ನ್ಯಾಯಮೂರ್ತಿ ಪರ್ದಿವಾಲಾ ಅವರು ಪ್ರಕರಣದಲ್ಲಿ ಭಿನ್ನ ತೀರ್ಪು ನೀಡಿದರು.

ನ್ಯಾಯಮೂರ್ತಿ ಕಾಂತ್ ಅವರು ಬರೆದ ಬಹುಮತದ ತೀರ್ಪಿಗೆ ಸಮ್ಮತಿಸುವ ತಮ್ಮ ಪ್ರತ್ಯೇಕ ತೀರ್ಪನ್ನುಓದಿದ ಸಿಜೆಐ ಚಂದ್ರಚೂಡ್‌ "ಕೇಂದ್ರ ಸರ್ಕಾರ ಕಾಯಿದೆಯನ್ನು ಇತರ ಪ್ರದೇಶಗಳಿಗೆ ಅನ್ವಯಿಸಬಹುದಿತ್ತು, ಆದರೆ ಇದರ ಪ್ರಮಾಣ ಅಸ್ಸಾಂಗೆ ವಿಶಿಷ್ಟವಾದ ಹಿನ್ನೆಲೆಯಲ್ಲಿ ಹಾಗೆ ಮಾಡಿಲ್ಲ" ಎಂದರು.

ವ್ಯಕ್ತಿಗಳು ತಮ್ಮದೇ ಆದ ವಿಶಿಷ್ಟ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದುವ ಹಕ್ಕು ಮತ್ತು ಅದನ್ನು ಸಂರಕ್ಷಿಸುವ ಹಕ್ಕನ್ನು ರಕ್ಷಿಸು ಸಂವಿಧಾನದ 29 (1)ನೇ ವಿಧಿಯನ್ನು ಸೆಕ್ಷನ್‌ ಉಲ್ಲಂಘಿಸುತ್ತದೆ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ "...ರಾಜ್ಯದಲ್ಲಿ ವಿಭಿನ್ನ ಜನಾಂಗೀಯ ಗುಂಪುಗಳ ಉಪಸ್ಥಿತಿ ಇದ್ದಮಾತ್ರಕ್ಕೆ ಅನುಚ್ಛೇದ 29(1) ರ ಉಲ್ಲಂಘನೆ ಆಗುತ್ತದೆ ಎಂದರ್ಥವಲ್ಲ... ಒಂದು ಜನಾಂಗವು ಮತ್ತೊಂದು ಜನಾಂಗದ ಉಪಸ್ಥಿತಿಯಿಂದಾಗಿ ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಜಿದಾರರು ಸಾಬೀತುಪಡಿಸಬೇಕು" ಎಂದಿತು.

ಬಹುಮತದ ತೀರ್ಪನ್ನು ಓದಿದ ನ್ಯಾಯಮೂರ್ತಿ ಕಾಂತ್, ಒಬ್ಬರಿಗೆ ತಮ್ಮ ನೆರೆಹೊರೆಯವರನ್ನು ಆಯ್ಕೆ ಮಾಡಲು  ಅನುಮತಿಸಲಾಗದು/ ಹಾಗೆ ಮಾಡುವುದು ಭ್ರಾತೃತ್ವದ ತತ್ವಕ್ಕೆ ವಿರುದ್ಧವಾಗುತ್ತದೆ. ಬದುಕಿ ಮತ್ತು ಬದಕಲು ಬಿಡಿ ಎಂಬುದು ತತ್ವ ಎಂದು ಪ್ರತಿಕ್ರಿಯಿಸಿದರು. 

"ಸೆಕ್ಷನ್‌ 6ಎ ಸ್ಪಷ್ಟ ಅನಿಯಂತ್ರಿತತೆಯಿಂದ ಬಳಲುತ್ತಿದೆ ಎಂಬ ಸಲ್ಲಿಕೆಯನ್ನು ಸಹ ನಾವು ತಿರಸ್ಕರಿಸಿದ್ದೇವೆ... 1966ಕ್ಕಿಂತ ಮೊದಲು ಮತ್ತು 1966ರಿಂದ 1971ರ ನಡುವೆ ಬಂದ ವಲಸಿಗರಿಗೆ ಸಂಬಂಧಿಸಿದಂತೆ ವಿಶದೀಕರಿಸಲಾದ ಸ್ಪಷ್ಟ ಷರತ್ತುಗಳಿವೆ" ಎಂದು ನ್ಯಾಯಾಲಯ ತಿಳಿಸಿತು.

Also Read
“ಎನ್‌ಆರ್‌ಸಿ ಕರಡಿನಲ್ಲಿ ಗಂಭೀರ ದೋಷ” ಅರ್ಹರು ಹೊರಗೆ, ಅನರ್ಹರು ಒಳಗೆ: ಸುಪ್ರೀಂ ಕದತಟ್ಟಿದ ಎನ್‌ಆರ್‌ಸಿ ಸಂಚಾಲಕ

ಸಂಗ್ರಹವಾಗಿ ಪೀಠ ಈ ರೀತಿ ತಿಳಿಸಿತು:

  • ಜನವರಿ 1, 1966 ರ ಮೊದಲು ಅಸ್ಸಾಂಗೆ ಬಂದ ವಲಸಿಗರನ್ನು ಭಾರತೀಯ ಪ್ರಜೆಗಳೆಂದು ಪರಿಗಣಿಸಲಾಗುತ್ತದೆ.

  • ಜನವರಿ 1, 1966 ಮತ್ತು ಮಾರ್ಚ್ 25, 1971 ರ ನಡುವೆ ಅಸ್ಸಾಂ ಪ್ರವೇಶಿಸಿದ ವಲಸಿಗರು ಸೆಕ್ಷನ್ 6ಎ ಅಡಿಯಲ್ಲಿ ಸೂಚಿಸಲಾದ ಅರ್ಹತಾ ಷರತ್ತುಗಳಿಗೆ ಒಳಪಟ್ಟು ಪೌರತ್ವ  ಪಡೆಯಬಹುದು.

  • ಮಾರ್ಚ್ 25, 1971 ರ ನಂತರ ಅಸ್ಸಾಂಗೆ ಪ್ರವೇಶಿಸಿದ ವಲಸಿಗರು ಸೆಕ್ಷನ್ 6ಎ ಅಡಿಯಲ್ಲಿ ರಕ್ಷಣೆಗೆ ಅರ್ಹರಾಗಿರುವುದಿಲ್ಲ ಪರಿಣಾಮ ಅವರನ್ನು ಅಕ್ರಮ ವಲಸಿಗರು ಎಂದು ಘೋಷಿಸಲಾಗುತ್ತದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಅಸ್ಸಾಂ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಪಟ್ಟಿಯ ಮೇಲೆ ಭಾರಿ ಪ್ರಭಾವ ಬೀರಲಿದೆ.

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ನಂತರ ಪೂರ್ವ ಬಂಗಾಳದ ಜನರ ಮೇಲೆ ನಡೆದ ದೌರ್ಜನ್ಯಗಳಿಗೆ ಪರಿಹಾರ ನೀಡುವುದಕ್ಕಾಗಿ ಈ ನಿಯಮಾವಳಿಯನ್ನು ಭಾಗಶಃ ಜಾರಿಗೆ ತರಲಾಗಿದೆ ಎಂಬ ವಿಚಾರವನ್ನು ಈ ಹಿಂದೆ  ನ್ಯಾಯಾಲಯ ಗಮನಿಸಿತ್ತು. ಆದ್ದರಿಂದ, ಇದನ್ನು ಸಾಮಾನ್ಯವಾಗಿ ಅಕ್ರಮ ವಲಸಿಗರಿಗೆ ಸಂಬಂಧಿಸಿದಂತೆ ನೀಡಲಾಗುವ ಕ್ಷಮಾದಾನ ಯೋಜನೆಗೆ ಹೋಲಿಸಲಾಗುವುದಿಲ್ಲ ಎಂದು ನ್ಯಾಯಪೀಠ ಮೌಖಿಕವಾಗಿ ತಿಳಿಸಿತ್ತು. ಈ ಸೆಕ್ಷನ್ ಜಾರಿಗೆ ಬಂದ ನಂತರ ಉದ್ಭವಿಸಿದ ರಾಜಕೀಯ ಬೆಳವಣಿಗೆಗಳಿಂದ ಅದರ ಸಿಂಧುತ್ವವನ್ನು ನಿರ್ಧರಿಸಲಾಗುವುದಿಲ್ಲ ಎಂದು ಸಿಜೆಐ ಹೇಳಿದರು.

ಇಂತಹ ವಲಸೆಗಳು ರಹಸ್ಯವಾಗಿ ನಡೆಯುವುದರಿಂದ ಭಾರತಕ್ಕೆ ವಿದೇಶಿಯರ ಅಕ್ರಮ ವಲಸೆಯ ಪ್ರಮಾಣದ ಬಗ್ಗೆ ನಿಖರವಾದ ಮಾಹಿತಿ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ನ್ಯಾಯಾಲಯಕ್ಕೆ ತಿಳಿಸಿತ್ತು.

2017 ಮತ್ತು 2022ರ ನಡುವೆ 14,346 ವಿದೇಶಿ ಪ್ರಜೆಗಳನ್ನು ದೇಶದಿಂದ ಗಡೀಪಾರು ಮಾಡಲಾಗಿದ್ದು ಜನವರಿ 1966 ಮತ್ತು ಮಾರ್ಚ್ 1971ರ ನಡುವೆ ಅಸ್ಸಾಂ ಪ್ರವೇಶಿಸಿದ 17,861 ವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಸಚಿವಾಲಯದ ಅಫಿಡವಿಟ್‌ ತಿಳಿಸಿತ್ತು.

Kannada Bar & Bench
kannada.barandbench.com