ಆದೇಶ ಉಲ್ಲಂಘನೆ, ನ್ಯಾಯಾಧೀಶರಿಗೆ ಬೆದರಿಕೆ: ವಕೀಲ ಮತ್ತು ಮಾಜಿ ಯೋಧನ ಶಿಕ್ಷೆ ಎತ್ತಿಹಿಡಿದ ಸುಪ್ರೀಂ

ಆದರೂ, ಅವರ ವಯಸ್ಸು ಮತ್ತು ದೈಹಿಕ ಸ್ಥಿತಿಯನ್ನು ಪರಿಗಣಿಸಿ 2006ರಲ್ಲಿ ದೆಹಲಿ ಹೈಕೋರ್ಟ್ ವಿಧಿಸಿದ್ದ ಮೂರು ತಿಂಗಳ ಸಿವಿಲ್ ಜೈಲು ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿತು.
ವಕೀಲರು
ವಕೀಲರು
Published on

ಪದೇ ಪದೇ ನ್ಯಾಯಾಲಯದ ಆದೇಶ ಉಲ್ಲಂಘಿಸಿ ನ್ಯಾಯಾಧೀಶರ ವಿರುದ್ಧ ಅಪಪ್ರಚಾರ ಮಾಡಿ ನ್ಯಾಯಾಂಗ ನಿಂದನೆಗೆ ಕಾರಣನಾಗಿದ್ದ ವಕೀಲ ಮತ್ತು ಮಾಜಿ ಯೋಧನಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಈಚೆಗೆ ಎತ್ತಿಹಿಡಿದಿದೆ [ಗುಲ್ಶನ್ ಬಾಜ್ವಾ ಮತ್ತು ದೆಹಲಿ ಹೈಕೋರ್ಟ್ ರಿಜಿಸ್ಟ್ರಾರ್ ಇನ್ನಿತರರ ನಡುವಣ ಪ್ರಕರಣ].

"ಹೈಕೋರ್ಟ್ ಮುಂದೆ ಮತ್ತು ಈ ನ್ಯಾಯಾಲಯದ ಎದುರು ಮೇಲ್ಮನವಿದಾರ ವರ್ತಿಸಿದ ರೀತಿ ಕಾನೂನು ವ್ಯವಸ್ಥೆಯನ್ನು ದುರ್ಬಲಗೊಳಿಸಿ ನ್ಯಾಯಾಡಳಿತದ ಹಾದಿಯಲ್ಲಿ ಹಸ್ತಕ್ಷೇಪ ಮಾಡುತ್ತದೆ. ಮೇಲ್ಮನವಿದಾರನ ನಡವಳಿಕೆಯಲ್ಲಿ ಒಂದು ವಿಧವನ್ನು ಹೈಕೋರ್ಟ್ ಗಮನಿಸಿದೆ. ತನ್ನನ್ನು ಒಪ್ಪದ ನ್ಯಾಯಪೀಠದೊಂದಿಗೆ ಕೆಟ್ಟದಾಗಿ ವರ್ತಿಸುವ ಅಭ್ಯಾಸವನ್ನು ಆತ ರೂಢಿಸಿಕೊಂಡಿದ್ದಾನೆ. ಈ ದುರ್ವರ್ತನೆಯು ಅನುಮಾನಗಳನ್ನು ವ್ಯಕ್ತಪಡಿಸುವ ಮತ್ತು ಪ್ರಕರಣಗಳನ್ನು ಆಲಿಸುವ ನ್ಯಾಯಾಧೀಶರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗುತ್ತದೆ" ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿ ಎಸ್‌ ನರಸಿಂಹ ಅವರಿದ್ದ ಪೀಠ ಬೇಸರ ವ್ಯಕ್ತಪಡಿಸಿದೆ.

ಆದರೂ, ಅವರ ವಯಸ್ಸು ಮತ್ತು ದೈಹಿಕ ಸ್ಥಿತಿಯನ್ನು ಪರಿಗಣಿಸಿ 2006ರಲ್ಲಿ ದೆಹಲಿ ಹೈಕೋರ್ಟ್ ವಿಧಿಸಿದ್ದ ಮೂರು ತಿಂಗಳ ಸಿವಿಲ್ ಜೈಲು ಶಿಕ್ಷೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ.

ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಪಿಎಸ್ ನರಸಿಂಹ
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಪಿಎಸ್ ನರಸಿಂಹ

2006ರ ಅಕ್ಟೋಬರ್‌ನಲ್ಲಿ ಹೈಕೋರ್ಟ್ ವಕೀಲರನ್ನು ದೋಷಿ ಎಂದು ಘೋಷಿಸಿತ್ತು. ಮಹಿಳಾ ವಕೀಲರಿಗೆ ಬೆದರಿಕೆ ಹಾಕಿದ, ನಿಯಮಿತ ಪ್ರಕರಣಗಳಲ್ಲಿ ಹಾಜರಾಗಲು ವಿಫಲವಾದ, ನ್ಯಾಯಾಧೀಶರ ವಿರುದ್ಧ ಆಧಾರರಹಿತ ಆರೋಪ ಮಾಡಿದ ಹಾಗೂ ಕಕ್ಷಿದಾರರಿಗೆ ತಿಳಿಯದಂತೆ ಹೊಸ ಪೀಠ ರಚನೆ ಕೋರಿ ವರ್ಗಾವಣೆ ಅರ್ಜಿಗಳನ್ನು ಸಲ್ಲಿಸಿದ ಆರೋಪ ಅವರ ಮೇಲಿತ್ತು.

ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ವಿಚಾರಣೆಗೆ ಹಾಜರಾಗಲು ವಿಫಲವಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಲಾಗಿತ್ತು. ಜಾಮೀನು ಬಾಂಡ್‌ ಆಧಾರದಲ್ಲಿ ಅವರನ್ನು ಕೊನೆಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರಹಿತ ವಾರೆಂಟ್‌ಗೆ ಸಂಬಂಧಿಸಿದಂತೆ ಉತ್ತರಾಖಂಡ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.

ದೆಹಲಿ ಹೈಕೋರ್ಟ್ ಅಂತಿಮವಾಗಿ ಕ್ರಿಮಿನಲ್ ನ್ಯಾಯಾಂಗ ನಿಂದನೆಗಾಗಿ ಅವರನ್ನು ದೋಷಿ ಎಂದು ಘೋಷಿಸಿ ಮೂರು ತಿಂಗಳ ಸಿವಿಲ್ ಜೈಲು ಶಿಕ್ಷೆ ವಿಧಿಸಿತ್ತು.

ಮೇಲ್ಮನವಿಗೆ ಸಂಬಂಧಿಸಿದಂತೆ ವಾದಗಳನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯ ವಕೀಲರ ಕೃತ್ಯಗಳ ದೀರ್ಘಕಾಲೀನ ಸ್ವರೂಪವನ್ನು ಗಮನಿಸಿದೆ. ಹೈಕೋರ್ಟ್‌ ತೀರ್ಪು ತರ್ಕಬದ್ಧವಾಗಿದೆ ಎಂದು ತಿಳಿಸಿತು. ಶಿಕ್ಷೆಯ ಆದೇಶ ಬದಿಗೆ ಸರಿಸಲು ನಿರಾಕರಿಸಿ ಮೇಲ್ಮನವಿಯನ್ನು ವಜಾಗೊಳಿಸಿತು. ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಖುದ್ದು ಹಾಜರಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Gulshan Bajwa vs Delhi High Court Registrar and anr.pdf
Preview
Kannada Bar & Bench
kannada.barandbench.com