ಉದ್ಯೋಗಿಗಳ ಪಿಂಚಣಿ ತಿದ್ದುಪಡಿ ಯೋಜನೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌; ಯೋಜನೆ ಸೇರ್ಪಡೆ ಕಾಲಮಿತಿ ವಿಸ್ತರಣೆ

ಸ್ಪಷ್ಟತೆಯ ಕೊರತೆಯ ಹಿನ್ನೆಲೆಯಲ್ಲಿ ಆಯ್ಕೆ ಬಳಸದ ಸೇವೆಯಲ್ಲಿರುವ ಉದ್ಯೋಗಿಗಳಿಗೆ ಅದನ್ನು ಬಳಕೆ ಮಾಡಲು ಹೆಚ್ಚುವರಿಯಾಗಿ ನಾಲ್ಕು ತಿಂಗಳು ಕಾಲಾವಕಾಶ ನೀಡಲಾಗುವುದು ಎಂದು ಪೀಠ ಹೇಳಿದೆ.
ಉದ್ಯೋಗಿಗಳ ಪಿಂಚಣಿ ತಿದ್ದುಪಡಿ ಯೋಜನೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌; ಯೋಜನೆ ಸೇರ್ಪಡೆ ಕಾಲಮಿತಿ ವಿಸ್ತರಣೆ

ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ 2014 ಅನ್ನು ವಜಾ ಮಾಡಿದ್ದ ಕೇರಳ ಹೈಕೋರ್ಟ್‌ ಆದೇಶವನ್ನು ಶುಕ್ರವಾರ ಬದಿಗೆ ಸರಿಸಿರುವ ಸುಪ್ರೀಂ ಕೋರ್ಟ್‌ ಯೋಜನೆಯ ಸಿಂಧುತ್ವವನ್ನು ಎತ್ತಿ ಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌, ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಮತ್ತು ಸುಧಾಂಶು ಧುಲಿಯಾ ಅವರ ನೇತೃತ್ವದ ಪೀಠವು ಯೋಜನೆಯ ಕೆಲವು ನಿಬಂಧನೆಗಳನ್ನು ಕೈಬಿಟ್ಟು ಉದ್ಯೋಗಿಗಳ ಪಿಂಚಣಿ ಯೋಜನೆಯ ಲಾಭ ಪಡೆಯಲು ಸೇವೆಯಲ್ಲಿರುವ ಉದ್ಯೋಗಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳು ಯಾವುದೇ ಮಿತಿಯಿಲ್ಲದೇ ಪಿಂಚಣಿ ವಂತಿಗೆ ನೀಡಬಹುದಾಗಿದೆ.

ಸ್ಪಷ್ಟತೆಯ ಕೊರತೆಯ ಹಿನ್ನೆಲೆಯಲ್ಲಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳದ ಸೇವೆಯಲ್ಲಿರುವ ಉದ್ಯೋಗಿಗಳಿಗೆ ಅದನ್ನು ಬಳಕೆ ಮಾಡಲು ಹೆಚ್ಚುವರಿಯಾಗಿ ನಾಲ್ಕು ತಿಂಗಳು ಕಾಲಾವಕಾಶ ನೀಡಲಾಗುವುದು ಎಂದು ಪೀಠ ಹೇಳಿದೆ.

2014ರ ಸೆಪ್ಟೆಂಬರ್‌ 1ರ ತಿದ್ದುಪಡಿಗೂ ಮುನ್ನ ನಿವೃತ್ತಿ ಹೊಂದಿದ ಉದ್ಯೋಗಿಗಳು, ತಿದ್ದುಪಡಿ ಇಪಿಎಸ್‌ ಯೋಜನೆಯ ಪ್ಯಾರಾ 11(3)ರ ಅಡಿ ಯೋಜನೆಯ ಆಯ್ಕೆಯನ್ನು ಬಳಸು ಅರ್ಹರಾಗಿರುವುದಿಲ್ಲ ಎಂದು ಹೇಳಲಾಗಿದೆ. ವಿನಾಯಿತಿ ಮತ್ತು ವಿನಾಯಿತಿ ಇಲ್ಲದ ಕಂಪೆನಿಗಳನ್ನು ಸಮಾನವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಆದಾಗ್ಯೂ, ಮುಖ್ಯವಾಗಿ, ತಿದ್ದುಪಡಿಯಾದ ಯೋಜನೆಯನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಲಯವು ನೈಜ ಸಂಬಳದ ಬದಲಿಗೆ ಪಿಂಚಣಿ ಲೆಕ್ಕಾಚಾರಕ್ಕಾಗಿ ₹ 15,000 ಮಿತಿಯನ್ನು ಮಾನ್ಯ ಮಾಡಿದೆ.

Related Stories

No stories found.
Kannada Bar & Bench
kannada.barandbench.com