ಬಿಜೆಪಿ ಕಾರ್ಯಕರ್ತನ ಹತ್ಯೆ: ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಆರೋಪ ನಿಗದಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ತಮ್ಮ ವಿರುದ್ಧ ಆರೋಪ ನಿಗದಿಗೊಳಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಕುಲಕರ್ಣಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಏಪ್ರಿಲ್ 8ರಂದು ವಜಾಗೊಳಿಸಿತ್ತು.
ಬಿಜೆಪಿ ಕಾರ್ಯಕರ್ತನ ಹತ್ಯೆ: ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಆರೋಪ ನಿಗದಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಬಿಜೆಪಿ ಕಾರ್ಯಕರ್ತ ಯೋಗಿಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಆರೋಪ ನಿಗದಿಪಡಿಸುವ ಕರ್ನಾಟಕದ ವಿಚಾರಣಾ ನ್ಯಾಯಾಲಯವೊಂದರ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ [ವಿನಯ್ ರಾಜಶೇಖರಪ್ಪ ಕುಲಕರ್ಣಿ ಮತ್ತು ಸಿಬಿಐ ನಡುವಣ ಪ್ರಕರಣ].

 ವಿಚಾರಣಾ ನ್ಯಾಯಾಲಯದ ತೀರ್ಪನ್ನು ಈ ಹಿಂದೆ ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ನಿರಾಕರಿಸಿತು.

(ತಮ್ಮ ಮೇಲೆ ಆರೋಪ ಮಾಡದಂತೆ) ಮೃತ ಯೋಗಿಶ್‌ ಗೌಡ ಅವರ ಪತ್ನಿಯನ್ನು ಕುಲಕರ್ಣಿ ʼಖರೀದಿಸಿದ್ದಾರೆʼ ಎಂಬುದು ಸ್ಪಷ್ಟಾತಿ ಸ್ಪಷ್ಟ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮನವಿ ಪುರಸ್ಕರಿಸಲು ಪೀಠ ಒಲವು ತೋರದಿರುವುದನ್ನು ಕಂಡ, ಕುಲಕರ್ಣಿ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ದವೆ ಅವರು ಮನವಿ ಹಿಂಪಡೆಯಲು ಅನುವು ಮಾಡಿಕೊಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕುಮಾರ್, "ಈ ನ್ಯಾಯಾಲಯ ಜೂಜಿನ ಅಡ್ಡೆಯಾಗಿದೆ” ಎಂದು ಸಿಡಿಮಿಡಿಗೊಂಡರು.

ಧಾರವಾಡ ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದ ಯೋಗೀಶ್‌ ಗೌಡ 2016ರ ಜೂನ್‌ನಲ್ಲಿ ಜಿಮ್‌ ಒಂದರಲ್ಲಿ ಕೊಲೆಯಾಗಿದ್ದರು. 

ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಕರ್ನಾಟಕ ಪೊಲೀಸರು ಆರು ಜನರನ್ನು ಬಂಧಿಸಿದ್ದರು. ವಿಚಾರಣೆ ನಡೆಯುತ್ತಿರುವಾಗಲೇ 2019ರಲ್ಲಿ ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು.

ಕುಲಕರ್ಣಿ ಅವರನ್ನು 2020ರಲ್ಲಿ ಸಿಬಿಐ ಬಂಧಿಸಿತು. ನಂತರ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. ವಿಚಾರಣಾ ನ್ಯಾಯಾಲಯ ಡಿಸೆಂಬರ್ 2023ರಲ್ಲಿ ಅವರ ವಿರುದ್ಧ ಆರೋಪ ನಿಗದಿಗೆ ಆದೇಶಿಸಿತು.

ತಮ್ಮ ವಿರುದ್ಧದ ಈ ಆದೇಶ ಪ್ರಶ್ನಿಸಿ ಕುಲಕರ್ಣಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಏಪ್ರಿಲ್ 8ರಂದು ವಜಾಗೊಳಿಸಿತು.  

2016ರ ಏಪ್ರಿಲ್‌ನಲ್ಲಿ ನಡೆದ ಪಂಚಾಯ್ತಿ ಸಭೆ ವೇಳೆ ನಡೆದ ವಾಗ್ವಾದದ ಹಿನ್ನೆಲೆಯಲ್ಲಿ ಸಚಿವರಾಗಿದ್ದ ಕುಲಕರ್ಣಿ ಅವರು ತಮ್ಮ ಆಪ್ತರು ಹಾಗೂ ಇತರ ಆರೋಪಿಗಳೊಂದಿಗೆ ಸೇರಿ ಗೌಡ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಹೈಕೋರ್ಟ್‌ ಹೇಳಿತ್ತು.

ಕುಲಕರ್ಣಿ ಅವರನ್ನು ಶಸ್ತ್ರಾಸ್ತ್ರ ಕಾಯಿದೆಯಡಿ ಶಿಕ್ಷಾರ್ಹ ಅಪರಾಧ ಎಸಗಿದ್ದು, ಅಪರಾಧದ ಮೊದಲು ಮತ್ತು ನಂತರ ಕುಲಕರ್ಣಿ ಅವರು ನಡೆದುಕೊಂಡ ರೀತಿಯನ್ನು ಗಮನಿಸಿದರೆ  ಆರೋಪಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆನ್ನುವುದು ಖಾತ್ರಿಯಾಗುತ್ತದೆ ಎಂಬ ಪ್ರಾಸಿಕ್ಯೂಷನ್ ವಾದವನ್ನು ಹೈಕೋರ್ಟ್ ಮನ್ನಿಸಿತ್ತು.

ಪ್ರಕರಣದ ಸುದೀರ್ಘ ವಿಚಾರಣೆಯ ಕುರಿತು ಪ್ರತಿಕ್ರಿಯಿಸಿದ ಹೈಕೋರ್ಟ್ 2016ರಲ್ಲಿ ಘಟನೆ ನಡೆದ ನಂತರ ಕುಲಕರ್ಣಿ ಸೇರಿದಂತೆ ಆರೋಪಿಗಳು ಹಲವು ಬಾರಿ ನ್ಯಾಯಾಲಯಕ್ಕೆ ಎಡತಾಕಿರುವುದನ್ನು ಗಮನಿಸಿತ್ತು.  

ತನ್ನ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದ ನಂತರ, ಕುಲಕರ್ಣಿ ಅವರು ಸುಪ್ರೀಂ ಕೋರ್ಟ್‌ಗೆ ಪ್ರಸ್ತುತ ಅರ್ಜಿ ಸಲ್ಲಿಸಿದ್ದರು. ಅದೀಗ ವಜಾಗೊಂಡಿದೆ.

ಕುಲಕರ್ಣಿ ಅವರ ಮನವಿಯನ್ನು ಎಸ್-ಲೀಗಲ್ ಅಸೋಸಿಯೇಟ್ಸ್ ಮೂಲಕ ಸಲ್ಲಿಸಲಾಗಿತ್ತು.

Kannada Bar & Bench
kannada.barandbench.com