ಚುನಾವಣಾ ಅರ್ಜಿ: ಗಡ್ಕರಿ ವಿರುದ್ಧದ ಅಸ್ಪಷ್ಟ ಆರೋಪಗಳನ್ನು ಕೈಬಿಡುವ ಹೈಕೋರ್ಟ್‌ ನಿರ್ಧಾರ ಎತ್ತಿ ಹಿಡಿದ ಸುಪ್ರೀಂ

ಗಡ್ಕರಿ ವಿರುದ್ಧದ ಬಹಿರಂಗಪಡಿಸದ ಆರೋಪವನ್ನು ಹೈಕೋರ್ಟ್ ಅಸ್ಪಷ್ಟ ಹೇಳಿಕೆ ಎಂದು ಸರಿಯಾಗಿ ಅರ್ಥೈಸಿಕೊಂಡಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್‌.
ಚುನಾವಣಾ ಅರ್ಜಿ: ಗಡ್ಕರಿ ವಿರುದ್ಧದ ಅಸ್ಪಷ್ಟ ಆರೋಪಗಳನ್ನು ಕೈಬಿಡುವ ಹೈಕೋರ್ಟ್‌ ನಿರ್ಧಾರ ಎತ್ತಿ ಹಿಡಿದ ಸುಪ್ರೀಂ
Published on

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ 2019ರ ಲೋಕಸಭಾ ಚುನಾವಣೆಯ ಗೆಲುವನ್ನು ಪ್ರಶ್ನಿಸಿ ಸಲ್ಲಿಸಲಾದ ಚುನಾವಣಾ ಅರ್ಜಿಯಲ್ಲಿನ ಕೆಲವು ಆರೋಪಗಳನ್ನು ತೆಗೆದುಹಾಕಲು ಆದೇಶಿಸಿದ್ದ ಬಾಂಬೆ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ [ಮಹಮ್ಮದ್ ನಫೀಸ್ ವಿ. ನಿತಿನ್ ಜೈರಾಮ್ ಗಡ್ಕರಿ].

ಗಡ್ಕರಿ ವಿರುದ್ಧದ ಬಹಿರಂಗಪಡಿಸದ ಆರೋಪವನ್ನು ಹೈಕೋರ್ಟ್ ಅಸ್ಪಷ್ಟ ಹೇಳಿಕೆ ಎಂದು ಸರಿಯಾಗಿ ಅರ್ಥೈಸಿಕೊಂಡಿದೆ, ಅರ್ಜಿಯಲ್ಲಿ ನಿರ್ದಿಷ್ಟ ವಿವರಗಳು ಅಥವಾ ಪೂರಕ ವಸ್ತು ಸಂಗತಿಗಳಿಲ್ಲ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್‌ ಕೆ ಸಿಂಗ್ ಅವರ ಪೀಠ ಹೇಳಿತು.

ಚುನಾವಣಾ ವೆಚ್ಚಗಳನ್ನು ಬಹಿರಂಗಪಡಿಸದಿರುವ ಕುರಿತಾದ ಆರೋಪಗಳು ಬೀಸು ಹೇಳಿಕೆಗಳಾಗಿದ್ದು, ಅಸ್ಪಷ್ಟವಾಗಿವೆ. ಇದು ಹೈಕೋರ್ಟ್ ಅಥವಾ ಚುನಾವಣಾ ನ್ಯಾಯಮಂಡಳಿ ನಿರ್ಣಾಯಕ ಅಭಿಪ್ರಾಯಕ್ಕೆ ಬರಲು ಅನುಕೂಲಕರವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

"ಜಯಶೀಲ ಅಭ್ಯರ್ಥಿಯು ವಿವರಗಳನ್ನು ಬಹಿರಂಗಪಡಿಸದಿರುವ ಆರೋಪವನ್ನು ಹೈಕೋರ್ಟ್ ಅಸ್ಪಷ್ಟ ಆರೋಪ ಎಂದು ಸರಿಯಾಗಿ ಅರ್ಥೈಸಿಕೊಂಡಿದೆ. ಇದು ಯಾವುದೇ ವಾಸ್ತವಾಂಶಗಳಿಲ್ಲದೆ ಆರೋಪಗಳ ಸ್ವರೂಪವನ್ನು ನಿರ್ದಿಷ್ಟಪಡಿಸುವುದಿಲ್ಲ. 56 ಕ್ಕೂ ಹೆಚ್ಚು ಇವಿಎಂಗಳಲ್ಲಿ ನಡೆಸಲಾದ ಅಣಕು ಮತಚಲಾವಣೆಗೆ ಕುರಿತಂತೆ ಜಯಶೀಲ ಅಭ್ಯರ್ಥಿಯ ವಿರುದ್ಧ ಮಾಡಲಾಗಿರುವ ಆರೋಪಗಳೂ ಸಹ ಇದೇ ರೀತಿ ಇವೆ. ಅಲ್ಲದೆ, ಆರೋಪವು ಚುನಾವಣೆಯ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದೇ ರೀತಿ, ಚುನಾವಣಾ ವೆಚ್ಚಗಳನ್ನು ಬಹಿರಂಗಪಡಿಸದಿರುವಿಕೆ ಅಥವಾ ಅನುಮತಿಸಲಾದ ಮಿತಿಗಳನ್ನು ಮೀರಿರುವ ಆರೋಪವು ಹೈಕೋರ್ಟ್ ಅಥವಾ ಚುನಾವಣಾ ನ್ಯಾಯಮಂಡಳಿಯು ನಿರ್ದಿಷ್ಟ ಅಭಿಪ್ರಾಯವನ್ನು ನೀಡಲು ಸಾಧ್ಯವಾಗದ ಅಸ್ಪಷ್ಟ ಮತ್ತು ಬೀಸು ಸ್ವರೂಪದ್ದಾಗಿವೆ ಎಂದು ನ್ಯಾಯಾಲಯವು" ಹೇಳಿತು.

ಇದೇ ವೇಳೆ ನ್ಯಾಯಾಲಯವು, ಗಡ್ಕರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ಪೀಠವು ಗಡ್ಕರಿ ಅವರು ಚುನಾವಣಾ ಫಲಿತಾಂಶದ ವಿರುದ್ಧ ನಫೀಸ್‌ ಖಾನ್‌ ಸಲ್ಲಿಸಿರುವ ಅರ್ಜಿಯಲ್ಲಿ ಕೆಲವೊಂದು ಆರೋಪಗಳನ್ನು ಕೈಬಿಡಲು ಹೇಳಿದ್ದ ಹೈಕೋರ್ಟ್‌ನ ಆದೇಶವನ್ನು ಎತ್ತಿಹಿಡಿಯಿತು.

ಹೈಕೋರ್ಟ್‌ನ ಆದೇಶದೊಂದಿಗೆ ಸಹಮತ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌, ಆದಾಗ್ಯೂ ಅರ್ಜಿಯು 2019ರ ಚುನಾವಣೆಗೆ ಸಂಬಂಧಿಸಿದ್ದು ಎನ್ನುವುದನ್ನು ಗಮನಿಸಿ ಸಕಾಲಿಕವಾಗಿ ಆಲಿಸುವಂತೆ ಹೈಕೋರ್ಟ್‌ಗೆ ಸೂಚಿಸಿತು.

Kannada Bar & Bench
kannada.barandbench.com