ಪ್ರಯಾಣಿಕರ ಉಚಿತವಾಗಿ ಸಾಗಿಸುವ ಸಾರಿಗೆ ವಾಹನ ಮಾಲೀಕರಿಗೆ ತೆರಿಗೆ: ಹಿಮಾಚಲ ಪ್ರದೇಶ ಕಾಯಿದೆ ಎತ್ತಿಹಿಡಿದ ಸುಪ್ರೀಂ

ಚಾಲಕ, ಕಂಡಕ್ಟರ್ ಮತ್ತು ವಾಹನ ಸಂಬಂಧಿತ ಕರ್ತವ್ಯ ನಿರ್ವಹಿಸುವ ನೌಕರರನ್ನುಕಾಯಿದೆಯಿಂದ ಹೊರಗಿಡಲಾಗಿದ್ದರೂ, ಉಚಿತವಾಗಿ ಪ್ರಯಾಣಿಕರ ಸಾಗಿಸುವ ಸಾರಿಗೆ ವಾಹನ ಮಾಲೀಕರ ಮೇಲೆ ತೆರಿಗೆ ವಿಧಿಸುವ ಕಾಯಿದೆಯನ್ನು ನ್ಯಾಯಾಲಯ ಎತ್ತಿಹಿಡಿದಿದೆ.
Bus Image for representative purpose
Bus Image for representative purpose Image for representative purpose

ಉದ್ಯೋಗದಾತರು ತಮ್ಮ ಉದ್ಯೋಗಿಗಳ ಮತ್ತು ಅವರ ಕುಟುಂಬಗಳನ್ನು ಸಾಗಿಸಲು ಬಳಸುವ ವಾಹನಗಳು ಸೇರಿದಂತೆ ಪ್ರಯಾಣಿಕರನ್ನು ಉಚಿತವಾಗಿ ಸಾಗಿಸುವ ಸಾರಿಗೆ ವಾಹನಗಳ ಮೇಲೆ ತೆರಿಗೆ ವಿಧಿಸುವ 1997ರ ಹಿಮಾಚಲ ಪ್ರದೇಶ ಕಾಯಿದೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ [ಎನ್‌ಎಚ್‌ಪಿಸಿ ಮತ್ತು ಹಿಮಾಚಲ ಪ್ರದೇಶ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].|

ಹೈಕೋರ್ಟ್‌ ನೀಡಿದ್ದ ಆದೇಶವೊಂದನ್ನು ರದ್ದುಗೊಳಿಸಲು ಅದೇ ವರ್ಷ ಜಾರಿಗೆ ತಂದ ಹಿಮಾಚಲ ಪ್ರದೇಶ ಪ್ರಯಾಣಿಕರ ಮತ್ತು ಸರಕುಗಳ (ತಿದ್ದುಪಡಿ ಮತ್ತು ಮಾನ್ಯತೆ) ಕಾಯಿದೆಯು ಸಿಂಧು ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಹೇಳಿತು.

ಕಾಯಿದೆಯನ್ನು ಎತ್ತಿ ಹಿಡಿದಿದ್ದ ಹಿಮಾಚಲ ಪ್ರದೇಶ ಹೈಕೋರ್ಟ್‌ನ 2008 ಮತ್ತು 2009 ರ ಆದೇಶಗಳ ವಿರುದ್ಧ ಥರ್ಮಲ್ ಪವರ್ ಕಂಪನಿಗಳು ಸಲ್ಲಿಸಿದ ಮೇಲ್ಮನವಿಗಳನ್ನು ತಿರಸ್ಕರಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

"ತನ್ನ ಉದ್ಯೋಗಿಗಳಿಗೆ ಮತ್ತವರ ಮಕ್ಕಳಿಗೆ ಉಚಿತ ಸಾರಿಗೆ ಒದಗಿಸುವಲ್ಲಿ ಮೇಲ್ಮನವಿದಾರರು ನಡೆಸಿದ ಚಟುವಟಿಕೆಯು 1997ರ ತಿದ್ದುಪಡಿ ಮತ್ತು ಮೌಲ್ಯೀಕರಣ ಕಾಯಿದೆಯ ಸೆಕ್ಷನ್ 3(1-A) ಅಡಿಯಲ್ಲಿ ತೆರಿಗೆಗೆ ಒಳಪಡುವ ಚಟುವಟಿಕೆಯಾಗಿದೆ" ಎಂದು ನ್ಯಾಯಾಲಯವು ತೀರ್ಮಾನಿಸಿದೆ.

ಅದಕ್ಕೂ ಮೊದಲು ಜಾರಿಯಲ್ಲಿದ್ದ 1955 ರ ಹಿಮಾಚಲ ಪ್ರದೇಶ ಪ್ರಯಾಣಿಕರ ಮತ್ತು ಸರಕು ತೆರಿಗೆ ಕಾಯಿದೆಯು ಹಿಮಾಚಲ ಪ್ರದೇಶ ರಾಜ್ಯದಲ್ಲಿ ನಿರ್ದಿಷ್ಟ ವಾಹನಗಳಲ್ಲಿ ರಸ್ತೆ ಮೂಲಕ ಸಾಗಿಸುವ ಪ್ರಯಾಣಿಕರು ಮತ್ತು ಸರಕುಗಳ ಮೇಲೆ ತೆರಿಗೆಯನ್ನು ವಿಧಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. 1955ರ ಕಾಯಿದೆಯನ್ನು ಕೆಲವು ಮೋಟಾರು ವಾಹನಗಳಿಗೆ ಮಾತ್ರ ಅನ್ವಯಿಸುವ ಉದ್ದೇಶದಿಂದ ಈ ಕಂಪನಿಗಳ ಪರವಾಗಿ ಹೈಕೋರ್ಟ್ ತೀರ್ಪು ನೀಡಿ  ಈ ಕಂಪನಿಗಳು ನಿರ್ವಹಿಸುವ ಸಾರಿಗೆ ವಾಹನಗಳು ಕಾಯಿದೆ ವ್ಯಾಪ್ತಿಗೆ ಬರುವುದಿಲ್ಲ ಎಂದಿತ್ತು. 1955 ರ ಕಾಯಿದೆಯು ಪ್ರಯಾಣಿಕರ ಮತ್ತು ಸರಕುಗಳ ಸಾಗಣೆಯ ವ್ಯವಹಾರದಲ್ಲಿ ತೊಡಗಿರುವ ವಾಹನ ಮಾಲೀಕರಿಗೆ ಮಾತ್ರ ತೆರಿಗೆ ವಿಧಿಸುತ್ತದೆ ಎಂಬುದು ಸ್ಪಷ್ಟ ಎಂದಿತು.

ರಾಜ್ಯ ಸರ್ಕಾರ ಹೈಕೋರ್ಟ್ ತೀರ್ಪಿನ ಪರಿಣಾಮ ತಡೆಯಲು 1997ರ ಕಾಯಿದೆಯನ್ನು ಜಾರಿಗೆ ತಂದಿತು. ಅದರಂತೆ ಪ್ರಯಾಣಿಕರನ್ನು ಉಚಿತವಾಗಿ ಸಾಗಿಸುವ ತೆರಿಗೆಯನ್ನು ವಿಧಿಸಬಹುದಾದ ವಾಹನಗಳ ವ್ಯಾಪ್ತಿಯನ್ನು ಸರ್ಕಾರ ವಿಸ್ತರಿಸಿತ್ತು.

“ಪ್ರಯಾಣಿಕ", "ವ್ಯವಹಾರ", "ಮೋಟಾರು ವಾಹನ" ಇತ್ಯಾದಿ ಸೇರಿದಂತೆ ವಿವಿಧ ವ್ಯಾಖ್ಯಾನಗಳನ್ನು 1997 ರ ಕಾಯಿದೆಯಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದು ಹೈಕೋರ್ಟ್‌ನ ಹಿಂದಿನ ತೀರ್ಪಿನ ಪರಿಣಾಮವನ್ನು 1997ರ ಕಾಯಿದೆಯು ನ್ಯಾಯಸಮ್ಮತವಾಗಿಯೇ ತೊಡೆದುಹಾಕಿದೆ ಎಂದು ನಾಯಾಲಯ ಅಭಿಪ್ರಾಯಪಟ್ಟಿದೆ. ಆ ಮೂಲಕ 1997 ರ ಕಾಯಿದೆಯನ್ನು ಅದು ಎತ್ತಿ ಹಿಡಿದಿದೆ.

Related Stories

No stories found.
Kannada Bar & Bench
kannada.barandbench.com