ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಲಯಾಳಂ ನಟ ವಿಜಯ್ ಬಾಬು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿ ಹಿಡಿದಿದೆ.
ಆದರೆ, ಜುಲೈ 3ರ ನಂತರ ಆರೋಪಿಯನ್ನು ವಿಚಾರಣೆ ನಡೆಸದಂತೆ ಪೊಲೀಸರ ಮೇಲೆ ಹೈಕೋರ್ಟ್ ಹೇರಿದ್ದ ನಿರ್ಬಂಧ ಅನಪೇಕ್ಷಿತ ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ರಜಾಕಾಲೀನ ಪೀಠ ಅದನ್ನು ರದ್ದುಗೊಳಿಸಿತು.
ಆರೋಪಿ-ನಟನಿಗೆ ನಿರೀಕ್ಷಣಾ ಜಾಮೀನು ನೀಡಿದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರ ಮತ್ತು ಪ್ರಕರಣದ ಸಂತ್ರಸ್ತೆ ಹಾಗೂ ನವನಟಿಯೊಬ್ಬರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಪೀಠ ಈ ತೀರ್ಪು ನೀಡಿತು.
ನಿರೀಕ್ಷಣಾ ಜಾಮೀನು ನೀಡುವುದರಿಂದ ತಲೆಮರೆಸಿಕೊಂಡಿರುವ ಆರೋಪಿ ಹೊರಬಂದು ತನಿಖೆಗೆ ನೆರವು ನೀಡುತ್ತಾನೆ ಎಂಬ ನೆಲೆಯಲ್ಲಿ ನಿರೀಕ್ಷಣಾ ಜಾಮೀನು ನೀಡಬಹುದೇ ಎಂಬ ಪ್ರಮುಖ ವಿಷಯವನ್ನು ಈ ಪ್ರಕರಣ ಹುಟ್ಟುಹಾಕುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ಆಕ್ಷೇಪಿಸಲಾಗಿತ್ತು.