
ಅಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ನಡೆಸುತ್ತಿರುವ ಈಶಾ ಫೌಂಡೇಶನ್‌ನ ಕೊಯಮತ್ತೂರು ಕ್ಯಾಂಪಸ್‌ನಲ್ಲಿ ನಡೆದಿದ್ದ ನಿರ್ಮಾಣ ಚಟುವಟಿಕೆಗಳ ವಿರುದ್ಧ ನೀಡಲಾದ ಶೋಕಾಸ್ ನೋಟಿಸ್ಅನ್ನು ರದ್ದುಗೊಳಿಸಿ ಮದ್ರಾಸ್ ಹೈಕೋರ್ಟ್ 2022ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ [ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಇಶಾ ಫೌಂಡೇಶನ್].
ಈಶಾ ಫೌಂಡೇಷನ್‌ನ ಯೋಗ ಮತ್ತು ಧ್ಯಾನ ಕೇಂದ್ರಕ್ಕೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್ ಕೆ ಸಿಂಗ್ ಅವರ ಪೀಠವು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗೆ (ಟಿಎನ್‌ಸಿಪಿಬಿ) ಆದೇಶಿಸಿದೆ.
ಇದೇ ವೇಳೆ, ತಾನು ಎಲ್ಲಾ ಕಾನೂನುಗಳನ್ನು ಪಾಲಿಸುವುದಾಗಿ ಈಶಾ ಫೌಂಡೇಶನ್ ನೀಡಿರುವ ಹೇಳಿಕೆಯನ್ನು ನ್ಯಾಯಾಲಯವು ದಾಖಲಿಸಿಕೊಂಡಿತು. "ಭವಿಷ್ಯದಲ್ಲಿ ವಿಸ್ತರಣಾ ಚಟುವಟಿಕೆ ಅಗತ್ಯವಿದ್ದಲ್ಲಿ, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು" ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸೂಚಿಸಿತು.
ಕೊಯಮತ್ತೂರಿನಲ್ಲಿ ಈಶಾ ಕೇಂದ್ರದ ಆವರಣದಲ್ಲಿ 2006 ರಿಂದ 2014 ರ ನಡುವೆ ಸೂಕ್ತ ಪರಿಸರ ಅನುಮತಿಗಳನ್ನು ಪಡೆಯದೆ ನಿರ್ಮಾಣ ಚಟುವಟಿಕೆಗಳನ್ನು ಕೈಗೊಂಡಿದ್ದಕ್ಕಾಗಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯು ಈಶಾ ಫೌಂಡೇಶನ್‌ಗೆ 2021ರಲ್ಲಿ ಶೋಕಾಸ್ ನೋಟಿಸ್ ನೀಡಿತ್ತು. ಇದನ್ನು 2022ರ ಡಿಸೆಂಬರ್‌ನಲ್ಲಿ ಮದ್ರಾಸ್ ಹೈಕೋರ್ಟ್ ರದ್ದುಪಡಿಸಿತ್ತು.
ಶೋಕಾಸ್ ನೋಟಿಸ್ ರದ್ದುಪಡಿಸುವ ವೇಳೆ ಮದ್ರಾಸ್ ಹೈಕೋರ್ಟ್ ಈಶಾ ಫೌಂಡೇಶನ್ ಸಾಮೂಹಿಕ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದು, ಯೋಗ ಕೇಂದ್ರವನ್ನು ನಡೆಸುವುದರಿಂದ, ಅದನ್ನು ಶಿಕ್ಷಣ ಸಂಸ್ಥೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ನಿರ್ಮಾಣ ಚಟುವಟಿಕೆಗಳಿಗೆ ಪೂರ್ವಭಾವಿ ಪರಿಸರ ಅನುಮತಿಯನ್ನು ಕೋರುವ ನಿಯಮಾವಳಿಗಳಿಗೆ ಕೇಂದ್ರ ಸರ್ಕಾರವು ನೀಡಿರುವ ವಿನಾಯತಿಗೆ ಅರ್ಹವಾಗಿದೆ ಎಂದು ಹೇಳಿತ್ತು. ಈ ತೀರ್ಪನ್ನು ಇದೀಗ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯವು, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವಲ್ಲಿ 633 ದಿನಗಳು ವಿಳಂಬವಾಗಿರುವ ಬಗ್ಗೆ ಬೆರಳು ಮಾಡಿತ್ತು. ಈ ಸಂದರ್ಭದಲ್ಲಿ ಟಿಎನ್‌ಸಿಪಿಬಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿ ಗಿರಿ ಅವರು "ನಾವು ಮತ್ತೊಂದು ಉತ್ತಮ ಅಫಿಡವಿಟ್ ಸಲ್ಲಿಸುತ್ತೇವೆ" ಎಂದು ಉತ್ತರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಮೂರ್ತಿ ಕಾಂತ್ ಅವರು, "ನಾವು ಈ ರೀತಿಯಲ್ಲಿ ಉತ್ತಮ ಅಫಿಡವಿಟ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದರೆ ಹಾಗೂ ಮೇಲ್ಮನವಿ ಸಲ್ಲಿಸಲು ಆಗಿರುವ 633 ದಿನಗಳ ವಿಳಂಬವನ್ನು ಸ್ವೀಕರಿಸಿದರೆ, ಬಡ ದಾವೆದಾರರು ಇಂತಹದ್ದೇ ಸೌಲಭ್ಯಗಳಿಂದ ಏಕೆ ವಂಚಿತರಾಗಬೇಕು? ಶ್ರೀಮಂತರ ವ್ಯಾಜ್ಯಗಳನ್ನು ಮಾತ್ರ ನಾವು ಏಕೆ ಕೇಳಬೇಕು, ಬಡ ದಾವೆದಾರರು ಎಲ್ಲಿಗೆ ಹೋಗಬೇಕು? ಎನ್ನುವ ಪ್ರಶ್ನೆಗಳು ಏಳುತ್ತವೆ," ಎಂದು ಕಿವಿ ಹಿಂಡಿದ್ದರು.