ಇ ಡಿ ನಿರ್ದೇಶಕರ ಸೇವಾವಧಿ ವಿಸ್ತರಣೆ: ನೇಮಕಾತಿ ಆದೇಶಕ್ಕೆ ಕೇಂದ್ರ ಮಾಡಿದ ಪೂರ್ವಾನ್ವಯ ಮಾರ್ಪಾಡಿಗೆ ಸುಪ್ರೀಂ ಸಮ್ಮತಿ

ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್‌ ಕುಮಾರ್ ಮಿಶ್ರಾ ಅವರ ಸೇವಾವಧಿಯನ್ನುಎರಡು ವರ್ಷಗಳಿಂದ ಮೂರು ವರ್ಷಗಳಿಗೆ ಹೆಚ್ಚಿಸಿ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರವು ನೇಮಕಾತಿ ಆದೇಶದಲ್ಲಿ ಬದಲಾವಣೆ ಮಾಡಿತ್ತು.
Supreme Court , ED
Supreme Court , ED
Published on

ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್‌ ಕುಮಾರ್ ಮಿಶ್ರಾ ಅವರ ನೇಮಕಾತಿ ಆದೇಶದಲ್ಲಿ ಪೂರ್ವಾನ್ವಯವಾಗುವಂತೆ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಬುಧವಾರ ಎತ್ತಿ ಹಿಡಿದಿದೆ. ಮಿಶ್ರಾ ಅವರ ಅವಧಿಯನ್ನು ಎರಡು ವರ್ಷಗಳಿಂದ ಮೂರು ವರ್ಷಗಳಿಗೆ ಹೆಚ್ಚಿಸಿ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರವು ನೇಮಕಾತಿ ಆದೇಶದಲ್ಲಿ ಬದಲಾವಣೆ ಮಾಡಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎಲ್‌ ನಾಗೇಶ್ವರ ರಾವ್‌ ಮತ್ತು ನ್ಯಾ. ಬಿ ಆರ್‌ ಗವಾಯಿ ಅವರ ಪೀಠವು ಕೇಂದ್ರ ಸರ್ಕಾರಕ್ಕೆ ಪೂರ್ವಾನ್ವಯವಾಗುವಂತೆ ಬದಲಾವಣೆಗಳನ್ನು ಮಾಡುವ ಅಧಿಕಾರವಿದೆ. ಆದರೆ ಅದನ್ನು ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾಡಬೇಕು ಎಂದು ಅಭಿಪ್ರಾಯಪಟ್ಟಿತು.

ಈ ಕುರಿತ ಆದೇಶವನ್ನು ಓದಿದ ನ್ಯಾ. ನಾಗೇಶ್ವರ ರಾವ್‌ ಅವರು, “ಜಾರಿ ನಿರ್ದೇಶನಾಲಯದ ನಿರ್ದೇಶಕರ ಸೇವಾವಧಿಯನ್ನು ವಿಸ್ತರಿಸಿರುವ ಭಾರತ ಸರ್ಕಾರದ ಅಧಿಕಾರವನ್ನು ನಾವು ಎತ್ತಿ ಹಿಡಿದಿದ್ದೇವೆ. ನಿವೃತ್ತಿ ವಯೋಮಿತಿಯ ಸಂದರ್ಭದಲ್ಲಿ ಅಂತಹ ವಿಸ್ತರಣೆಯನ್ನು ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾಡಬೇಕು ಎಂದು ನಾವು ಸ್ಪಷ್ಟಪಡಿಸಿದ್ದೇವೆ” ಎಂದರು.

ಕಾಮನ್‌ಕಾಸ್ ಎನ್ನುವ ಸ್ವಯಂಸೇವಾ ಸಂಸ್ಥೆಯು ಮಿಶ್ರಾ ಅವರ ಸೇವಾವಧಿಯಲ್ಲಿ ಬದಲಾವಣೆ ಮಾಡಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಹೊರಡಿಸಲಾಗಿರುವ ನವೆಂಬರ್‌ 13, 2020ರ ಆದೇಶವು ಕೇಂದ್ರ ವಿಚಕ್ಷಣಾ ಆಯೋಗ ಕಾಯಿದೆ - 2003 ರ ಸೆಕ್ಷನ್‌ 25ರ ಸ್ಪಷ್ಟ ಉಲ್ಲಂಘನೆಯಾಗಿದ್ದು ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ತನ್ನ ಮನವಿಯಲ್ಲಿ ಕೋರಿತ್ತು.

ಮಿಶ್ರಾ ಅವರನ್ನು ಇ ಡಿ ನಿರ್ದೇಶಕರಾಗಿ ಎರಡು ವರ್ಷಗಳ ಅವಧಿಗೆ 2018ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈ ಅವಧಿಯು ಹಿಂದಿನ ವರ್ಷದ ನವೆಂಬರ್‌ಗೆ ಮುಕ್ತಾಯವಾಗಿತ್ತು. ಮಿಶ್ರಾ ಅವರು ಮೇ, 2020ರ ವೇಳೆಗಾಗಲೇ ನಿವೃತ್ತಿಯ ವಯೋಮಾನವನ್ನು ತಲುಪಿದ್ದರು. ಆದರೆ, ಕೇಂದ್ರ ಸರ್ಕಾರವು ನವೆಂಬರ್‌ 13, 2020ರಂದು ಕಚೇರಿ ಆದೇಶವೊಂದನ್ನು ಹೊರಡಿಸುವ ಮೂಲಕ ರಾಷ್ಟ್ರಪತಿಯವರು 2018ರ ನೇಮಕಾತಿ ಆದೇಶದಲ್ಲಿ ‘ಎರಡು ವರ್ಷ’ ಎನ್ನುವುದನ್ನು ‘ಮೂರು ವರ್ಷ’ ಎಂದು ಮಾರ್ಪಡಿಸಿರುವುದಾಗಿ ಹೇಳಿತ್ತು. ಆ ಮೂಲಕ ಮಿಶ್ರಾ ಅವರ ನೇಮಕಾತಿ ಆದೇಶದಲ್ಲಿ ಪೂರ್ವಾನ್ವಯವಾಗುವಂತೆ ಬದಲಾವಣೆ ಮಾಡಲಾಗಿತ್ತು.

ಇ ಡಿ ನಿರ್ದೇಶಕರು ಎಲ್ಲ ರೀತಿಯ ಪ್ರಭಾವ ಮತ್ತು ಒತ್ತಡಗಳಿಂದ ಮುಕ್ತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರಿಗೆ ಎರಡು ವರ್ಷಗಳ ಸೇವಾವಧಿಗೆ ರಕ್ಷಣೆಯನ್ನು ಕಾಯಿದೆಯ ಸೆಕ್ಷನ್‌ 25(ಡಿ) ನೀಡಿದೆ. ಆದರೆ, ಪ್ರಸಕ್ತ ಪ್ರಕರಣದಲ್ಲಿ ಈ ಮೂಲ ಉದ್ದೇಶವನ್ನೇ ವಿಫಲಗೊಳಿಸುವ ರೀತಿಯಲ್ಲಿ ಎರಡು ವರ್ಷಗಳ ಅಂತ್ಯದಲ್ಲಿ ಹಾಗೂ ನಿವೃತ್ತಿಯ ವಯೋಮಾನವನ್ನು ಮೀರಿದ ಸಾಕಷ್ಟು ಸಮಯದ ನಂತರ ಪೂರ್ವಾನ್ವಯವಾಗುವಂತೆ ನೇಮಕಾತಿ ಅದೇಶವನ್ನು ಮಾರ್ಪಾಡುಗೊಳಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಮುಂದುವರೆದು, ಇಂತಹ ಕ್ರಮವು ಜಾರಿ ನಿರ್ದೇಶನಾಲಯದ ಬಗ್ಗೆ ಜನತೆ ಹೊಂದಿರುವ ವಿಶ್ವಾಸವನ್ನು ಅಲುಗಾಡಿಸಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

Kannada Bar & Bench
kannada.barandbench.com