ಸೂಕ್ತ ಪ್ರಕ್ರಿಯೆಯ ಅನುಪಸ್ಥಿತಿ ಮತ್ತು ಸ್ವಾಭಾವಿಕ ನ್ಯಾಯ ತತ್ವದ ಉಲ್ಲಂಘನೆ ಸೇರಿದಂತೆ ವಿವಿಧ ಆಕ್ಷೇಪಗಳಿಗೆ ತುತ್ತಾಗಿದ್ದ ದಿವಾಳಿ ಮತ್ತು ದಿವಾಳಿತನ ಸಂಹಿತೆ (ಐಬಿಸಿ) 2016ರ ಪ್ರಮುಖ ನಿಯಮಾವಳಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದೆ.
ಸಂಹಿತೆಯ ಸೆಕ್ಷನ್ 95(1), 96(1), 97(5), 99(1), 99(2), 99(4), 99(5), 99(6) ಹಾಗೂ 100ನೇ ಸೆಕ್ಷನ್‌ಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 200ಕ್ಕೂ ಹೆಚ್ಚು ಅರ್ಜಿಗಳಿಗೆ ಸಂಬಂಧಿಸಿದಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತೀರ್ಪು ಪ್ರಕಟಿಸಿದೆ.
ಸಂಹಿತೆಯನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಇಂದು ತಿರಸ್ಕರಿಸಿದ ನ್ಯಾಯಾಲಯ ಸಂಹಿತೆಯು ಸಾಂವಿಧಾನಿಕವಾಗಿ ಮಾನ್ಯವಾಗಿದ್ದು ಅರ್ಜಿದಾರರು ವಾದಿಸಿರುವಂತೆ ನಿಯಮಾವಳಿಗಳು ನಿರಂಕುಶವಾಗಿಲ್ಲ ಎಂದಿತು.
“ಸಂಹಿತೆಯು ಸಂವಿಧಾನ ಉಲ್ಲಂಘಿಸಿ ಪೂರ್ವಾನ್ವಯವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗದು. ಹೀಗಾಗಿ ಅನಿಯಂತ್ರಿತತೆಯ ದುರ್ಗುಣಗಳಿಗೆ ಸಂಹಿತೆ ತುತ್ತಾಗಿಲ್ಲ ಎಂಬುದಾಗಿ ಭಾವಿಸುತ್ತೇವೆ” ಎಂದು ನ್ಯಾಯಾಲಯ ತೀರ್ಪಿತ್ತಿದೆ.
ಸಂಹಿತೆಯು ಸ್ವಾಭಾವಿಕ ನ್ಯಾಯದ ತತ್ವವನ್ನು ಉಲ್ಲಂಘಿಸುವುದರಿಂದ ಸಂವಿಧಾನದ 14 ನೇ ವಿಧಿಯ ಅಡಿಯಲ್ಲಿ ಅರ್ಜಿದಾರರ ಮೂಲಭೂತಹಕ್ಕಗಳನ್ನು ಅನಿಯಂತ್ರಿತವಾಗಿ ಉಲ್ಲಂಘಿಸುತ್ತದೆ ಎಂದು ರಿಲಯನ್ಸ್ ಎಡಿಎ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಸೇರಿದಂತೆ ಅರ್ಜಿ ಸಲ್ಲಿಸಿದ್ದ ವಿವಿಧ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಗಮನಾರ್ಹವಾಗಿ, ಮೇ 2021 ರಲ್ಲಿ, 2019 ರಲ್ಲಿ ಜಾರಿಗೆ ತರಲಾದ ವೈಯಕ್ತಿಕ ಖಾತರಿದಾರರ ದಿವಾಳಿತನಕ್ಕೆ ಸಂಬಂಧಿಸಿದ ದಿವಾಳಿ ಮತ್ತು ದಿವಾಳಿತನ ಸಂಹಿತೆಯ ನಿಯಮಾವಳಿಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.