ಮಧ್ಯಸ್ಥಿಕೆ ವಿಚಾರ ಗಂಭೀರವಾಗಿ ಪರಿಗಣಿಸಿ, 2024ರ ಮಸೂದೆ ಮಾರ್ಪಡಿಸಿ: ಕಾನೂನು ಸಚಿವಾಲಯಕ್ಕೆ ಸುಪ್ರೀಂ ಆಗ್ರಹ

1996ರ ಮಧ್ಯಸ್ಥಿಕೆ ಕಾಯಿದೆಯಲ್ಲಿ ಯಾವ ಅಂಶಗಳು ಇರಲಿಲ್ಲವೋ 2024ರ ಮಸೂದೆಯಲ್ಲಿಯೂ ಆ ಅಂಶಗಳು ಕಂಡು ಬಂದಿಲ್ಲ ಎಂದು ನ್ಯಾಯಾಲಯ ಗಮನ ಸೆಳೆಯಿತು.
Supreme Court
Supreme Court
Published on

ಭಾರತದ ಮಧ್ಯಸ್ಥಿಕೆ ಸ್ವರೂಪದ ಬಗ್ಗೆ ತೀವ್ರ ಟೀಕೆ ಮಾಡಿರುವ ಸುಪ್ರೀಂ ಕೋರ್ಟ್‌, ದಶಕಗಳ ಕಾಲದ ಮೊಕದ್ದಮೆಗಳು ಮತ್ತು ಅನೇಕ ನ್ಯಾಯಾಂಗ ತೀರ್ಪುಗಳ ಹೊರತಾಗಿಯೂ, ಸಹಿ ಮಾಡದವರನ್ನು ಪ್ರಕರಣದಲ್ಲಿ ಒಳಗೊಳ್ಳುವಂತೆ ಮಾಡುವ ವಿಚಾರದಲ್ಲಿ ಮಧ್ಯಸ್ಥಿಕೆ ನ್ಯಾಯಮಂಡಳಿಗಳ ಅಧಿಕಾರದ ಬಗ್ಗೆ ಶಾಸನಬದ್ಧ ಸ್ಪಷ್ಟತೆ ಇಲ್ಲ ಎಂದು ಶುಕ್ರವಾರ ಅಸಮ್ಮತಿ ವ್ಯಕ್ತಪಡಿಸಿದೆ.

ದೀರ್ಘಕಾಲದ ಶಾಸಕಾಂಗ ನಿರ್ವಾತವನ್ನು ತುಂಬುವ ವಿಚಾರದಲ್ಲಿ ಪ್ರಸ್ತುತ ಕಾನೂನು ಮತ್ತು ನ್ಯಾಯ ಸಚಿವಾಲಯದ ಪರಿಗಣನೆಯಲ್ಲಿರುವ ಪ್ರಸ್ತಾವಿತ ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ) ಮಸೂದೆ, 2024 ವಿಫಲವಾಗಿದೆ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಹೇಳಿದೆ.

Also Read
ಸರ್ಕಾರಿ ಇಲಾಖೆಗಳು ಮಧ್ಯಸ್ಥಿಕೆ ಬದ್ಧತೆಯಿಂದ ಹಿಂದೆ ಸರಿಯುತ್ತಿವೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮಿತ್ತಲ್

1996ರ ಮಧ್ಯಸ್ಥಿಕೆ ಕಾಯಿದೆಯಲ್ಲಿ ಯಾವ ಅಂಶಗಳು ಇರಲಿಲ್ಲವೋ 2024ರ ಮಸೂದೆಯಲ್ಲಿಯೂ ಆ ಅಂಶಗಳು ಕಂಡು ಬಂದಿಲ್ಲ ಎಂದಿರುವ ನ್ಯಾಯಾಲಯ ಹಲವು ನಿರ್ಧಾರಗಳ ಹೊರತಾಗಿಯೂ ಗೊಂದಲದ ಸಾಧ್ಯತೆಗಳನ್ನು ನಿವಾರಿಸಲು ಅಂತಹ ಅಧಿಕಾರದ ಶಾಸನಬದ್ಧ ಮಾನ್ಯತೆಯ ಅಗತ್ಯ ಇರುವುದನ್ನು ಎತ್ತಿ ತೋರಿಸುತ್ತದೆ ಎಂದು ವಿವರಿಸಿದೆ.

ಭಾರತದಲ್ಲಿ ಮಧ್ಯಸ್ಥಿಕೆಯನ್ನು ಆಧುನೀಕರಿಸಲು 1996ರಲ್ಲಿ ಕಾಯಿದೆ ಜಾರಿಗೆ ತರಲಾಗಿದ್ದು ಅದಾಗಿ ಸುಮಾರು ಮೂವತ್ತು ವರ್ಷಗಳು ಕಳೆದರೂ, ಕಾರ್ಯವಿಧಾನದ ಅಸ್ಪಷ್ಟತೆಗಳು ಮುಂದುವರೆದಿರುವುದು ʼತುಂಬಾ ದುಃಖಕರ ಸಂಗತಿʼ ಎಂದು ಪೀಠ ಹೇಳಿದೆ.

ಈ ಕುರಿತಂತೆ ಕಾರ್ಯಾಂಗಕ್ಕೆ ನೇರ ಶಿಫಾರಸು ಮಾಡಿರುವ ನ್ಯಾಯಾಲಯ ಕಾನೂನು ವ್ಯವಹಾರಗಳ ಇಲಾಖೆ ಮಸೂದೆಯ ಪ್ರಸ್ತುತ ಕರಡನ್ನು ಮರುಪರಿಶೀಲಿಸಿ ಅಗತ್ಯ ಸುಧಾರಣೆ ತರುವಂತೆ ಒತ್ತಾಯಿಸಿತು.

Also Read
ಲೋಧಾ ಸಹೋದರರ ₹5,000 ಕೋಟಿ ದಾವೆ ಮಧ್ಯಸ್ಥಿಕೆ ಮೂಲಕ ಇತ್ಯರ್ಥ

"ಭಾರತದಲ್ಲಿ ಚಾಲ್ತಿಯಲ್ಲಿರುವ ಮಧ್ಯಸ್ಥಿಕೆ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಮಧ್ಯಸ್ಥಿಕೆ ಮತ್ತು ಸಂಧಾನ ಮಸೂದೆ- 2024 ಇನ್ನೂ ಪರಿಗಣಿಸಲಾಗುತ್ತಿರುವ ಸಂದರ್ಭದಲ್ಲಿ ಅಗತ್ಯ ಬದಲಾವಣೆಗಳನ್ನು ತರಬೇಕು ಎಂದು ನಾವು ಕಾನೂನು ವ್ಯವಹಾರಗಳ ಇಲಾಖೆ, ಕಾನೂನು ಮತ್ತು ನ್ಯಾಯ ಸಚಿವಾಲಯವನ್ನು ಒತ್ತಾಯಿಸುತ್ತೇವೆ" ಎಂದು ಪೀಠ ಹೇಳಿದೆ.

ಮಧ್ಯಸ್ಥಿಕೆ ಒಪ್ಪಂದಕ್ಕೆ ಸಹಿ ಹಾಕದಿದ್ದರೂ, ಮಧ್ಯಸ್ಥಿಕೆ ಪ್ರಕ್ರಿಯೆಗಳಲ್ಲಿ ಅದನ್ನು ಜಾರಿಗೆ ತರುವುದನ್ನು ಪ್ರಶ್ನಿಸಿ ಎಎಸ್‌ಎಫ್‌ ಬಿಲ್ಡ್‌ಟೆಕ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಪೀಠ ಈ ಅವಲೋಕನಗಳನ್ನು ವಿವರಿಸಿತು. ಎಎಸ್‌ಎಫ್‌ ಸಮೂಹ ಕಂಪನಿಗಳು ಒಂದೇ ಆರ್ಥಿಕ ಘಟಕವಾಗಿ ಕಾರ್ಯನಿರ್ವಹಿಸುತ್ತಿದ್ದು ಎಎಸ್‌ಎಫ್‌ ಬಿಲ್ಡ್‌ಟೆಕ್‌ನ ನಡವಳಿಕೆ ಒಪ್ಪಂದಕ್ಕೆ ಬದ್ಧವಾಗಿರುವ  ಉದ್ದೇಶ ವ್ಯಕ್ತಪಡಿಸಿದೆ ಎಂದು ಗಮನಿಸಿದ ನ್ಯಾಯಾಲಯ ನ್ಯಾಯಮಂಡಳಿಯ ನಿರ್ಧಾರವನ್ನು ಎತ್ತಿಹಿಡಿಯಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
ASF_Vs_Shapoorji
Preview
Kannada Bar & Bench
kannada.barandbench.com