ಭೂ ಕಂದಾಯ ಹಿಂಪಡೆಯುವಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಯೂಸುಫ್ ಮಲಿಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ) ಅಡಿ ಬಂಧಿಸಿರುವ ಉತ್ತರ ಪ್ರದೇಶ ಸರ್ಕಾರದ ನಡೆಗೆ ಸುಪ್ರೀಂ ಕೋರ್ಟ್ ಈಚೆಗೆ ಆಕ್ಷೇಪಿಸಿದೆ [ಯೂಸುಫ್ ಮಲಿಕ್ ವರ್ಸಸ್ ಭಾರತ ಸರ್ಕಾರ ಮತ್ತು ಇತರರು].
ಪ್ರಕರಣದಲ್ಲಿ ಎನ್‌ಎಸ್‌ಎ ಅಡಿ ಪ್ರಕರಣ ದಾಖಲಿಸುವಾಗ ಸಂಬಂಧಿತರು ವಿವೇಚನೆ ಬಳಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.
“… ಸದರಿ ಪ್ರಕರಣದಲ್ಲಿ ಎನ್‌ಎಸ್‌ಎ ಕಾಯಿದೆ ಬಳಕೆಯು ಆಘಾತಕಾರಿಯಾಗಿದ್ದು, ಅನೂರ್ಜಿತವಾಗಲಿದೆ. ಇಂತಹದ್ದೊಂದು ಪ್ರಸ್ತಾವನೆಯನ್ನು ಮಾಡಲಾಯಿತು ಹಾಗೂ ಅದಕ್ಕೆ ಹಿರಿಯ ಅಧಿಕಾರಿಗಳ ಮತ್ತು ಸಲಹಾ ಸಮಿತಿಯಿಂದ ಅನುಮತಿಸಲಾಯಿತು ಎನ್ನುವುದು ಸಂಬಂಧಿಸಿದ ಪ್ರಾಧಿಕಾರಗಳು ಕಾಯಿದೆಯ ನಿಬಂಧನೆಗಳನ್ನು ಅನ್ವಯಿಸುವಾಗ ವಿವೇಚನೆಯನ್ನು ಬಳಸಿರುವ ರೀತಿಯ ಬಗ್ಗೆ ಗೌರವ ಹುಟ್ಟಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
“…ಬಂಧಿಸಿರುವುದಕ್ಕೆ ಹಾಗೂ ಬಂಧನವನ್ನು ವಿಸ್ತರಿಸಿರುವುದಕ್ಕೆ ಯಾವುದೇ ಸಕಾರಣಗಳು ಕಂಡುಬರುತ್ತಿಲ್ಲ. ಅಲ್ಲದೇ ಸಕಾರಣವಿಲ್ಲದಿರುವುದರಿಂದ ಕಾಯಿದೆ ಅಡಿ ಪ್ರಕ್ರಿಯೆಯನ್ನು ಪೂರ್ಣವಾಗಿ ವಜಾ ಮಾಡಲು ನಮಗೆ ಯಾವುದೇ ಹಿಂಜರಿಕೆ ಇಲ್ಲ. ಸಂಬಂಧಪಟ್ಟ ಎಲ್ಲ ಪ್ರಾಧಿಕಾರಗಳು ವಿವೇಚನಾರಹಿತವಾಗಿ ವರ್ತಿಸಿರುವ ಪ್ರಕರಣ ಇದಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಈ ಆಧಾರದಲ್ಲಿ ಸಮಾಜವಾದಿ ಪಕ್ಷದ ನಾಯಕನ ವಿರುದ್ಧದ ಪ್ರಕ್ರಿಯೆಯನ್ನು ವಜಾ ಮಾಡಿರುವ ನ್ಯಾಯಾಲಯವು ಇದನ್ನು ರಾಮಪುರ ಜಿಲ್ಲಾ ಜೈಲು ಪ್ರಾಧಿಕಾರಕ್ಕೆ ತಿಳಿಸಬೇಕು. ಇದರಿಂದ ಅವರನ್ನು ತಕ್ಷಣ ಬಿಡುಗಡೆ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದೆ.
ಕಂದಾಯ ಭೂಮಿ ಶುಲ್ಕ ಪಾವತಿಸಲು ವ್ಯಕ್ತಿಯೊಬ್ಬರಿಗೆ ನಿರ್ಬಂಧ ಮತ್ತು ಆನಂತರ ಆಕ್ಷೇಪಾರ್ಹವಾದ ನಿವಾಸಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿದ ಆರೋಪ ಮಲಿಕ್ ಮೇಲಿತ್ತು. ಎರಡು ಕ್ರಿಮಿನಲ್ ಪ್ರಕರಣದ ದಾಖಲಿಸಿ, ಆನಂತರ ಎರಡೂ ಪ್ರಕರಣಗಳಲ್ಲಿಯೂ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.
ನಗರಸಭೆಯ ಹೆಚ್ಚುವರಿ ಆಯುಕ್ತರನ್ನು ನಿಂದಿಸಿ ಬೆದರಿಕೆ ಹಾಕಿ, ಅವರಲ್ಲಿ ಭಯ ಮತ್ತು ಆತಂಕ ಪರಿಸ್ಥಿತಿ ನಿರ್ಮಿಸಿದ ಹಿನ್ನೆಲೆಯಲ್ಲಿ ಮೊರದಾಬಾದ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಠಾಣೆಯ ಅಧಿಕಾರಿಯು ಎನ್‌ಎಸ್‌ಎ ಅಡಿ ಮಲಿಕ್ ವಿರುದ್ಧ ಪ್ರಕ್ರಿಯೆ ಆರಂಭಿಸಲು ಜಿಲ್ಲಾಧಿಕಾರಿಗೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವರ್ಷದ 24ರಂದು ಕಾಯಿದೆಯ ಸಲಹಾ ಮಂಡಳಿ ಒಪ್ಪಿಗೆ ಆಧರಿಸಿ ಜಿಲ್ಲಾಧಿಕಾರಿಯು ಎನ್‌ಎಸ್‌ಎ ಅಡಿ ಮಲಿಕ್ ವಶ ಮತ್ತು ಕಸ್ಟಡಿಗೆ ಆದೇಶ ಮಾಡಿದ್ದರು. ಮಲಿಕ್ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ತುರ್ತಾಗಿ ಅಲಾಹಾಬಾದ್ ಹೈಕೋರ್ಟ್ ಇತ್ಯರ್ಥಪಡಿಸಿದ ಹಿನ್ನೆಲೆಯಲ್ಲಿ ವಶ ಆದೇಶವನ್ನು ವಿಸ್ತರಿಸಲಾಗಿತ್ತು. ಜನವರಿ 17ರಂದು ಉತ್ತರ ಪ್ರದೇಶ ಸರ್ಕಾರವು ಮಲಿಕ್‌ರ ಬಂಧನದ ಅವಧಿಯನ್ನು ಬಂಧನಕ್ಕೆ ತೆಗೆದುಕೊಂಡಿರುವ ಅವಧಿಯಿಂದ ಹನ್ನೆರಡು ತಿಂಗಳ ಕಾಲ ವಿಸ್ತರಿಸಿತ್ತು.