ಸಲಿಂಗ ವಿವಾಹದ ಕುರಿತ ಸುಪ್ರೀಂ ತೀರ್ಪು ಆಶ್ಚರ್ಯಕರವಲ್ಲ, ಮೌಖಿಕ ವಾದ ಸಮಗ್ರವಾಗಿರಲಿಲ್ಲ: ನ್ಯಾ.ಎಸ್ ಮುರಳೀಧರ್

"ಅರ್ಜಿದಾರರು ತಾವು ನಿರೀಕ್ಷಿಸಬಹುದಾದ ಅತ್ಯುತ್ತಮ ಪೀಠ ಹೊಂದಿದ್ದರು. ಆದರೆ, ಮೌಖಿಕ ವಾದಗಳಲ್ಲಿ ಖಾಲಿ ಸ್ಥಳಗಳಿದ್ದವು. ಇದು ಮೌಖಿಕ ವಿಚಾರಣೆಗಳನ್ನು ಬಿಗಿಯಾದ ರೀತಿಯಲ್ಲಿ ನಡೆಸುವ ಮಿತಿಗಳನ್ನು ಹೊರತರುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.
ನ್ಯಾಯಮೂರ್ತಿ ಎಸ್ ಮುರಳೀಧರ್
ನ್ಯಾಯಮೂರ್ತಿ ಎಸ್ ಮುರಳೀಧರ್

ನಿವೃತ್ತ ನ್ಯಾಯಮೂರ್ತಿ ಎಸ್.ಮುರಳೀಧರ್ ಅವರು ಇತ್ತೀಚೆಗೆ ಭಾರತದ ಸುಪ್ರೀಂ ಕೋರ್ಟ್ ಮುಂದೆ ವಿವಾಹ ಸಮಾನತೆ ಪ್ರಕರಣದಲ್ಲಿ ಅರ್ಜಿದಾರರು ಮಂಡಿಸಿದ ಮೌಖಿಕ ವಾದಗಳಲ್ಲಿ ವಿವರಿಸದೆ ಉಳಿದ ಅಂತರಗಳಿದ್ದವು ಎಂದು ಅಭಿಪ್ರಾಯಪಟ್ಟರು.

ವಿಚಾರಣೆಯ ಸಮಯದಲ್ಲಿ ಮಾಡಿದ ಮೌಖಿಕ ವಾದಗಳ ವಿಷಯಕ್ಕೆ ಬಂದಾಗ ಸಾಕಷ್ಟು ಯೋಚಿಸಲಾಗಿಲ್ಲ, ಆದರೆ ಲಿಖಿತ ಸಲ್ಲಿಕೆಗಳು ಸಮೃದ್ಧವಾಗಿವೆ, ವಿಸ್ತಾರವಾಗಿವೆ ಮತ್ತು ಸಮಸ್ಯೆಯನ್ನು ಉತ್ತಮವಾಗಿ ಸೆರೆಹಿಡಿದಿವೆ ಎಂದು ಅವರು ಹೇಳಿದರು.

ಸಂಕೀರ್ಣ ವಿಷಯದ ಬಗ್ಗೆ ಹೆಚ್ಚು ವಿವರವಾದ ವಿಚಾರಣೆಗೆ ಅನುವು ಮಾಡಿಕೊಡಲು ಪ್ರಕರಣವನ್ನು ದೀರ್ಘಕಾಲದವರೆಗೆ ವಿಚಾರಣೆ ನಡೆಸಬೇಕಾಗಿತ್ತು ಎಂದು ಒರಿಸ್ಸಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಹೇಳಿದರು.

"ತೀರ್ಪು ಆಶ್ಚರ್ಯಕರವಾಗಿಯೇನೂ ಬರಲಿಲ್ಲ ... ಅರ್ಜಿದಾರರು ಅನುಸರಿಸಿದ ಕಾರ್ಯತಂತ್ರದ ಬಗ್ಗೆ ಗಮನಿಸುವುದಾದರೆ ಅದರ ಹಿಂದೆ ಸಾಕಷ್ಟು ಯೋಚನೆ ಇರುವುದು ಕಾಣಲಿಲ್ಲ - ಅದು ಒಂದು ಮುಖ್ಯ ಕೊರತೆಯಾಗಿತ್ತು. ನೀವು ಗಮನಿಸಿದರೆ, ಲಿಖಿತ ಸಲ್ಲಿಕೆಗಳು ಬಹಳ ಶ್ರೀಮಂತ ಮತ್ತು ವಿಸ್ತಾರವಾಗಿದ್ದವು. ಸಮಸ್ಯೆಯ ಸಂಕೀರ್ಣತೆಯನ್ನು ಬಹುತೇಕವಾಗಿ ಸೆರೆಹಿಡಿಯಲಾಗಿತ್ತು. ಆದರೆ, ಮೌಖಿಕ ವಾದಗಳಲ್ಲಿ ಅದೆಲ್ಲವನ್ನೂ ಪ್ರತಿಬಿಂಬಿಸಲು ಸಮಯ ಬೇಕಾಗುತ್ತದೆ. ಅರ್ಜಿದಾರರು ತಾವು ನಿರೀಕ್ಷಿಸಬಹುದಾದ ಅತ್ಯುತ್ತಮ ಪೀಠವನ್ನು ಹೊಂದಿದ್ದರು. ಮೌಖಿಕ ವಾದಗಳಲ್ಲಿ ಖಾಲಿ ಸ್ಥಳಗಳಿದ್ದವು. ಇದು ಮೌಖಿಕ ವಿಚಾರಣೆಗಳನ್ನು ಬಿಗಿಯಾದ ರೀತಿಯಲ್ಲಿ ನಡೆಸುವ ಮಿತಿಗಳನ್ನು ಸಹ ಹೊರತರುತ್ತದೆ" ಎಂದು ಅವರು ವಿವರಿಸಿದರು.

'ವಿವಾಹ ಸಮಾನತೆ ತೀರ್ಪಿನ ಭವಿಷ್ಯ ಮತ್ತು ಸಾಮಾಜಿಕ-ಕಾನೂನು ಹಕ್ಕುಗಳೊಂದಿಗೆ ನ್ಯಾಯಾಂಗದ ಸಂಬಂಧ' ಎಂಬ ವಿಷಯದ ಕುರಿತು ನಡೆದ ಚರ್ಚೆಯಲ್ಲಿ ನ್ಯಾಯಮೂರ್ತಿ ಮುರಳೀಧರ್ ಮಾತನಾಡುತ್ತಿದ್ದರು.

ಕಳೆದ ತಿಂಗಳು ನೀಡಿದ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠದ ಬಹುಮತದ ತೀರ್ಪು ಸಲಿಂಗ ದಂಪತಿಗಳು ವಿವಾಹ ಹೊಂದುವ ಅಥವಾ ನಾಗರಿಕ ಸಹಚರ್ಯ ಹೊಂದುವ ಹಕ್ಕನ್ನು ಮಾನ್ಯ ಮಾಡಲು ನಿರಾಕರಿಸಿತು.

ಬದಲಾಗಿ, ಇದು ಸರ್ಕಾರ ನಿರ್ಧರಿಸಬೇಕಾದ ವಿಷಯ ಎಂದು ಉನ್ನತ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಆ ನಿಟ್ಟಿನಲ್ಲಿ, ಸಲಿಂಗ ವಿವಾಹಗಳಿಗೆ ಸಂಬಂಧಿಸಿದ ಎಲ್ಲಾ ಸಂಬಂಧಿತ ಅಂಶಗಳ ಸಮಗ್ರ ಪರಿಶೀಲನೆಯನ್ನು ಕೈಗೊಳ್ಳಲು ಕೇಂದ್ರ ಸರ್ಕಾರವು ಉನ್ನತಾಧಿಕಾರ ಸಮಿತಿಯನ್ನು (ಎಚ್‌ಪಿಸಿ) ರಚಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರು ನಿವೃತ್ತರಾಗಲಿದ್ದ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ವಿಚಾರಣೆಗಳನ್ನು ಕಟ್ಟುನಿಟ್ಟಾದ ವೇಳಾಪಟ್ಟಿಗೆ ಅಳವಡಿಸಲಾಗಿತ್ತು ಎಂದು ನ್ಯಾಯಮೂರ್ತಿ ಮುರಳೀಧರ್ ನೆನಪಿಸಿಕೊಂಡರು.

ಆದಾಗ್ಯೂ, ಈ ವಿಷಯಕ್ಕೆ ಅರ್ಜಿದಾರರ ಕಡೆಯಿಂದ ಸಾಕಷ್ಟು ಚಿಂತನ ಮಂಥನ ಮತ್ತು ಸಾರ್ವಜನಿಕ ಚರ್ಚೆಯನ್ನು ಒಳಗೊಳ್ಳುವ ಅಗತ್ಯವಿತ್ತು ಎಂದು ಅವರು ಹೇಳಿದರು. ಸಲಿಂಗಕಾಮ ಪ್ರಕರಣವನ್ನು ಅಪರಾಧಮುಕ್ತಗೊಳಿಸಿದಂತೆಯೇ ಈ ಪ್ರಕರಣವನ್ನು ಮೊದಲು ಹೈಕೋರ್ಟ್ ವಿಚಾರಣೆ ನಡೆಸಬಹುದಿತ್ತು ಎಂದು ಅವರು ಹೇಳಿದರು.

"ನ್ಯಾಯಾಧೀಶರು ನಿವೃತ್ತರಾಗುವುದನ್ನು ಲೆಕ್ಕಿಸದೆ, ಈ ಪ್ರಕರಣವನ್ನು ಕಾರ್ಯತಂತ್ರದ ಭಾಗವಾಗಿ ನ್ಯಾಯಾಲಯದಲ್ಲಿ ಹೆಚ್ಚು ಕಾಲ ಇರಿಸಿಕೊಳ್ಳಬೇಕಿತ್ತು ಎಂದು ನಾನು ಭಾವಿಸುತ್ತೇನೆ ... ನಾವು ಆ ಕ್ಷಣವನ್ನು ಕಳೆದುಕೊಳ್ಳದಂತೆ ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಕೆಲ ಕಾಲದವರೆಗೆ ಇರಿಸಬೇಕಿತ್ತೇ [ವಕೀಲರು ಆ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಬೇಕಿತ್ತು] " ಎಂದು ಅವರು ಅಭಿಪ್ರಾಯಪಟ್ಟರು.

ಆದಾಗ್ಯೂ, ಈ ಸಮಸ್ಯೆಯನ್ನು ಅಂತಿಮವಾಗಿ ಎಲ್ಜಿಬಿಟಿಕ್ಯೂ + ಸಮುದಾಯದ ಪರವಾಗಿ ಪರಿಹರಿಸಲಾಗುವುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಹೇಳಿದರು.

"ನಾನು ನಿರಂತರ ಆಶಾವಾದಿ, ಈ ವಿಷಯವು ಅಂತಿಮವಾಗಿ ಅರ್ಜಿದಾರರ ಪರವಾಗಿರಬೇಕು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅರ್ಜಿದಾರರು ಭರವಸೆ ಕಳೆದುಕೊಳ್ಳುವುದನ್ನು ನಾನು ಬಯಸುವುದಿಲ್ಲ, ಪ್ರಜಾಪ್ರಭುತ್ವದಲ್ಲಿ ಸಾಕಷ್ಟು ಅಭಿಪ್ರಾಯಗಳು ಮತ್ತು ಚಿಂತನೆಯ ಎಳೆಗಳಿವೆ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ (ತೀರ್ಪಿನ) ಅಭಿಪ್ರಾಯಗಳಲ್ಲಿ ನೀವು ಆತಂಕವನ್ನು ನೋಡಬಹುದು, ಅವರಿಬ್ಬರೂ ಸರಿಯಾದದ್ದನ್ನು ಮಾಡಲು ಬಯಸಿದ್ದಾರೆ ಆದರೆ ಅದಕ್ಕೆ ದಾರಿ ಯಾವುದು ಎಂದು ತಿಳಿದಿಲ್ಲ. ನನಗನಿಸುವಂತೆ, ಇಲ್ಲಿ ಯೋಚಿಸಲು ಸಾಕಷ್ಟು ಸಮಯ ದೊರೆತಿಲ್ಲ "ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ಹೇಗೆ ಬಹು ಅಭಿಪ್ರಾಯಗಳ ನ್ಯಾಯಾಲಯವಾಗಿದೆ ಎಂಬುದರ ಬಗ್ಗೆಯೂ ಮಾಜಿ ನ್ಯಾಯಮೂರ್ತಿ ಮಾತನಾಡಿದರು. ಅರ್ಜಿದಾರರು ಇನ್ನೂ ತಮ್ಮ ಪ್ರಕರಣವನ್ನು ಸರ್ಕಾರದ ಉನ್ನತಾಧಿಕಾರ ಸಮಿತಿಯ ಮುಂದೆ ಇರಿಸಬಹುದು ಎಂದು ಅವರು ಹೇಳಿದರು.

"ನಿಮ್ಮಲ್ಲಿ ಕೆಲವರು ಈ ಸಮಿತಿಯ ಬಗ್ಗೆ ವಿಮರ್ಶಾತ್ಮಕ ದೃಷ್ಟಿಕೋನ ಹೊಂದಿದ್ದೀರಿ ಎಂದು ನನಗೆ ತಿಳಿದಿದೆ. ಕಾರ್ಯತಂತ್ರದ ಭಾಗವಾಗಿ ಸಮಿತಿಯನ್ನು ಕಾಲಮಿತಿಗೊಳಪಡಿಸಿ. ನ್ಯಾಯಾಲಯವು ಖಂಡಿತವಾಗಿಯೂ ಈ ಸಮಿತಿಯನ್ನು ನೀವು ಪ್ರತಿಕ್ರಿಯಿಸಬಹುದಾದ ಮತ್ತು ಚಿಂತಿಸಬಹುದಾದ ಅಂಶಗಳನ್ನು ಮುಂದಿರಿಸಲು ಪ್ರೇರೇಪಿಸಬಹುದು. ಇದರಿಂದಾಗಿ ಸಮಸ್ಯೆ ಇರುವ ಸಂಗತಿಯ ಮೇಲೆ ಗಮನ ಕೇಂದ್ರೀಕರಿಸಬಹುದು" ಎಂದು ಅವರು ಸಲಹೆ ನೀಡಿದರು.

ಮರ್ಯಾದಾ ಹತ್ಯೆಗಳು, ಬಾಲ್ಯವಿವಾಹಗಳು, ಅಂತರ್ಜಾತೀಯ ವಿವಾಹಗಳ ವಿರುದ್ಧ ಹಿನ್ನಡೆ ಮತ್ತು ವರದಕ್ಷಿಣೆ ಸಾವುಗಳಂತಹ ಆಚರಣೆಗಳು ಇನ್ನೂ ಚಾಲ್ತಿಯಲ್ಲಿರುವ ಭಾರತೀಯ ಸಮಾಜದಲ್ಲಿ ಇಂತಹ ಹೋರಾಟಗಳು ಸಮಯ ತೆಗೆದುಕೊಳ್ಳುತ್ತವೆ ಎಂದು ಅವರು ಒತ್ತಿ ಹೇಳಿದರು.

"ಸಾರ್ವಜನಿಕ ಅಭಿಪ್ರಾಯ ಬೆಳೆಯಲು ಬಿಡಿ, ಅದು ಖಂಡಿತವಾಗಿಯೂ ಬೆಳೆಯುತ್ತದೆ... ಈ ವಿಷಯಗಳು (ಚರ್ಚೆಗಳು) ನಮ್ಮ ಪರವಾಗಿ ಸಾಮೂಹಿಕ ಸಾರ್ವಜನಿಕ ಅಭಿಪ್ರಾಯವನ್ನು ಸೃಷ್ಟಿಸಲು ಮೂಲ ಅಕರಗಳಾಗುತ್ತವೆ. ಇದಿಲ್ಲದಿದ್ದರೆ, ನ್ಯಾಯಾಲಯದಲ್ಲಿ ವಿಜಯದ ಫಲವನ್ನು ನಾವು ಆನಂದಿಸಲು ಸಾಧ್ಯವಿಲ್ಲ. ಭರವಸೆ ಮತ್ತು ಆಶಾವಾದವನ್ನು ಕಳೆದುಕೊಳ್ಳಬೇಡಿ. ನ್ಯಾಯಾಲಯದಲ್ಲಿನ ಪ್ರತಿಯೊಂದು ಪ್ರಕರಣವನ್ನು ಗೆಲ್ಲಲಾಗದು. ಹಕ್ಕುಗಳನ್ನು ಪಡೆಯುವ ನಿಟ್ಟಿನ ಸುದೀರ್ಘ ಪಯಣದಲ್ಲಿ ಇದು ಒಂದು ಮೆಟ್ಟಿಲಾಗಿದೆ ಮತ್ತು ಈ ಪ್ರಕರಣದಲ್ಲಿ ನಾನು ಇದನ್ನು ಮೊದಲ ಹೆಜ್ಜೆಯಾಗಿ ನೋಡುತ್ತೇನೆ" ಎಂದು ಅವರು ಅಶಾಭಾವ ವ್ಯಕ್ತಪಡಿಸಿದರು.

Related Stories

No stories found.
Kannada Bar & Bench
kannada.barandbench.com