ಪ್ರಸಕ್ತ ವರ್ಷದಲ್ಲಿ ಸುಪ್ರೀಂ ಕೋರ್ಟ್‌ನ ಆರು ನ್ಯಾಯಮೂರ್ತಿಗಳು ನಿವೃತ್ತಿ ಹೊಂದುತ್ತಿದ್ದು, ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ವಸ್ತುನಿಷ್ಠತೆ ತರಲು ಸಂಶೋಧನೆ ಮತ್ತು ಯೋಜನಾ ಕೇಂದ್ರಕ್ಕೆ (ಸಿಆರ್‌ಪಿ) ಸರ್ವೋಚ್ಚ ನ್ಯಾಯಾಲಯ ಜವಾಬ್ದಾರಿ ವಹಿಸಿದೆ.
ಸುಪ್ರೀಂ ಕೋರ್ಟ್ ವಕೀಲರ ಸಂಘ (ಎಸ್‌ಸಿಬಿಎ) ಈಚೆಗೆ ನೇಮಕಗೊಂಡ ನ್ಯಾಯಮೂರ್ತಿಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಸಿಆರ್‌ಪಿಯು ನ್ಯಾಯಂಗ ನೇಮಕಾತಿ ವಿಚಾರಗಳಲ್ಲಿ ಗಮನಹರಿಸುವ ಶಾಶ್ವತ ಸೆಕ್ರೆಟೇರಿಯಟ್‌ಗೆ ನೆರವಾಗಲಿದೆ ಎಂದಿದ್ದಾರೆ.
“ಸಿಆರ್‌ಪಿಯು ಯುವ ನ್ಯಾಯಾಂಗ ಅಧಿಕಾರಿಗಳನ್ನು ಒಳಗೊಂಡಿದ್ದು, ಅದರಲ್ಲಿ ಕೆಲವು ಅಸಾಧಾರಣ ಪ್ರತಿಭಾವಂತರನ್ನು ನಾನು ನೇಮಕ ಮಾಡಿದ್ದೇನೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಅಧಿಕಾರಿ ಸಿಆರ್‌ಪಿ ನೇತೃತ್ವ ವಹಿಸಿದ್ದು, ನನ್ನ ಕಾನೂನು ಗುಮಾಸ್ತರಾಗಿದ್ದ ಯುವ ದಲಿತ ವಿದ್ಯಾರ್ಥಿಯೊಬ್ಬರು ಹಾರ್ವರ್ಡ್ ಕಾನೂನು ಶಾಲೆಯ ಕೋರ್ಸ್ ಪೂರ್ಣಗೊಳಿಸಿ, ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಿಂದ ಈ ಕೇಂದ್ರಕ್ಕೆ ಮರಳಿದ್ದಾರೆ” ಎಂದು ಸಿಆರ್‌ಪಿ ಸಮೀಕರಣದ ಬಗ್ಗೆ ವಿವರಿಸಿದರು.
“ಹಿಂದೆಂದೂ ಈ ರೀತಿ ನಡೆದಿರಲಿಲ್ಲ. ಈಗ ನಮ್ಮ ಬಳಿ ಹಿರಿತನದ ಆಧಾರದಲ್ಲಿ 50 ನ್ಯಾಯಮೂರ್ತಿಗಳ ದತ್ತಾಂಶವಿದೆ. ಆ ನ್ಯಾಯಮೂರ್ತಿಗಳ ತೀರ್ಪುಗಳು ನಮ್ಮ ಬಳಿ ಇದ್ದು, ಇದರಲ್ಲಿ ಅವರು ಬರೆದಿರುವ ಮಹತ್ವದ ತೀರ್ಪುಗಳು ಸೇರಿವೆ. ಕೊಲಿಜಿಯಂ ಕೈಗೊಳ್ಳುವ ಕೆಲಸದಲ್ಲಿ ವಸ್ತುನಿಷ್ಠತೆ ತರುವುದು ಈ ಕಾರ್ಯ ಯೋಜನೆಯ ಹಿಂದಿರುವ ಕೆಲಸವಾಗಿದೆ. ಸಿಜೆಐ ಅವರ ಶಾಶ್ವತ ಸೆಕ್ರೆಟೇರಿಯೆಟ್ ಜೊತೆ ಸೇರಿ ಸಿಆರ್‌ಪಿ ತನ್ನ ಕೆಲಸ ಮಾಡಲಿದೆ” ಎಂದು ಸಿಜೆಐ ಹೇಳಿದರು.
“ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಅಥವಾ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿ ಅಥವಾ ನ್ಯಾಯಮೂರ್ತಿಗಳ ವರ್ಗಾವಣೆಯ ವಿಚಾರದಲ್ಲಿ ಈಚೆಗೆ ಕೊಲಿಜಿಯಂ ನಿಲುವಳಿಗೆ ಪೂರಕವಾಗಿ ಕಾರಣಗಳನ್ನು ನೀಡಲಾಗುತ್ತಿದೆ ಎಂಬುದು ನಿಮಗೆ ತಿಳಿದಿದೆ” ಎಂದು ಅವರು ನೆನಪಿಸಿದರು.
“ಹೈಕೋರ್ಟ್‌ಗಳಿಂದ 2006 ಮತ್ತು 2011ರ ನಡುವೆ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡಿರುವ ನ್ಯಾಯಮೂರ್ತಿಗಳ ಒಟ್ಟಾರೆ ಅನುಭವವು 121 ವರ್ಷಗಳಾಗಿವೆ. ನಮ್ಮ ಸಹೋದ್ಯೋಗಿಗಳು ಹೊಂದಿರುವ ಅನುಭವ, ವೈವಿಧ್ಯತೆ ಬಗ್ಗೆ ಇದು ಅಂದಾಜು ನೀಡಲಿದೆ” ಎಂದರು.
“ಮೇಲಿಂದ ಮೇಲೆ ಕೊಲಿಜಿಯಂ ಅನ್ನು ಟೀಕೆಗೆ ಗುರಿಯಾಗಿಸಲಾಗುತ್ತದೆ. ಹೆಚ್ಚು ವೈವಿಧ್ಯತೆ ಕಾಣುವುದಿಲ್ಲ ಮತ್ತು ಹೆಚ್ಚು ಪ್ರಜಾಸತ್ತಾತ್ಮಕವಾಗಿಲ್ಲ ಎಂಬ ಕಾರಣಕ್ಕೆ ಕೊಲಿಜಿಯಂ ಅನ್ನು ಟೀಕಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಾನೊಂದು ಸರಳ ಪ್ರಶ್ನೆಯನ್ನು ಕೇಳಿಕೊಳ್ಳುತ್ತೇನೆ. ಅದೇನೆಂದರೆ ಇಂದು ಈ ವೇದಿಕೆಯ ಮೇಲಿರುವ ನನ್ನ ಎಂಟು ಸಹೋದ್ಯೋಗಿ ನ್ಯಾಯಮೂರ್ತಿಗಳಿಗಿಂತ ಹೆಚ್ಚಿನದನ್ನು ವೈವಿಧ್ಯತೆಗೆ ಕಾಣಿಕೆಯಾಗಿ ನೀಡಲು ಸಾಧ್ಯವೇ?” ಎಂದರು.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ, ಪಂಕಜ್ ಮಿತ್ತಲ್, ಸಂಜಯ್ ಕರೋಲ್, ಸಂಜಯ್ ಕುಮಾರ್, ಅಹ್ಸಾನುದ್ದೀನ್ ಅಮಾನುಲ್ಲಾ, ಮನೋಜ್ ಮಿಶ್ರಾ, ರಾಜೇಶ್ ಬಿಂದಾಲ್ ಮತ್ತು ಅರವಿಂದ ಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.