ಚುನಾವಣಾ ಬಾಂಡ್ ಪ್ರಕರಣ ಕೈಗೆತ್ತಿಕ್ಕೊಳ್ಳದ ಸುಪ್ರೀಂ ಕೋರ್ಟ್ ನಡೆ ಬಗ್ಗೆ ನ್ಯಾ. ಗೋಪಾಲಗೌಡ ಬೇಸರ

ಈ ರೀತಿಯ ಚುನಾವಣಾ ಬಾಂಡ್‌ಗಳಿಂದ ಸಾಕಷ್ಟು ಚುನಾವಣಾ ಪ್ರಚಾರ ನಿಧಿ ಸಂಗ್ರಹಿಸಬಲ್ಲ ಪಕ್ಷಗಳೊಂದಿಗೆ ಹೆಚ್ಚಿನ ಚುನಾವಣಾ ನಿಧಿ ಇಲ್ಲದ ರಾಜಕೀಯ ಪಕ್ಷಗಳು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.
Former Supreme Court judge Justice V Gopala Gowda
Former Supreme Court judge Justice V Gopala Gowda
Published on

ದೇಶದ ಮೇಲೆ ನಿರ್ಣಾಯಕ ಪರಿಣಾಮ ಬೀರುವ ಪ್ರಕರಣಗಳ ವಿಚಾರಣೆಯಿಂದ ದೂರವಿರುವ ಸುಪ್ರೀಂ ಕೋರ್ಟ್‌ನ ಇತ್ತೀಚಿನ ನಡೆ ಪರಿಣಾಮಕಾರಿಯಾಗಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ಬೇಸರ ವ್ಯಕ್ತಪಡಿಸಿದರು.

ಅಖಿಲ ಭಾರತ ವಕೀಲರ ಒಕ್ಕೂಟ (ಎಐಎಲ್‌ಯು) ದೆಹಲಿ ಪತ್ರಕರ್ತರ ಒಕ್ಕೂಟ (ಡಿಯುಜೆ) ಹಾಗೂ ಪ್ರಜಾಸತ್ತಾತ್ಮಕ ಶಿಕ್ಷಕರ ವೇದಿಕೆ (ಡಿಟಿಎಫ್‌) ಜಂಟಿಯಾಗಿ ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ  ʼಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿʼ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  

Also Read
ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ಬಾಂಡ್‌ ಮಾರಾಟ ನಿಷೇಧ ಕೋರಿದ್ದ ಎಡಿಆರ್‌ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಚುನಾವಣಾ ಬಾಂಡ್‌ ಪ್ರಕರಣವನ್ನು ಪ್ರಸ್ತಾಪಿಸಿದ ಅವರು ಈ ರೀತಿಯ ಬಾಂಡ್‌ಗಳಿಂದಾಗಿ ಚುನಾವಣ ಪ್ರಚಾರಕ್ಕೆ ಸಾಕಷ್ಟು ದೇಣಿಗೆ ಸಂಗ್ರಹಿಸಬಲ್ಲ ಪಕ್ಷಗಳೊಂದಿಗೆ, ದೇಣಿಗೆ ಸಂಗ್ರಹಿಸಲಾಗದ ರಾಜಕೀಯ ಪಕ್ಷಗಳು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

“ಜಮ್ಮು ಮತ್ತು ಕಾಶ್ಮೀರದಲ್ಲಿ ವಾಕ್‌ ಸ್ವಾತಂತ್ರ್ಯ ಮೊಟಕುಗೊಂಡಾಗ ಸುಪ್ರೀಂ ಕೋರ್ಟ್‌ ನಡೆ ಪರಿಣಾಮಕಾರಿಯಾಗಿರಲಿಲ್ಲ. ಚುನಾವಣಾ ಬಾಂಡ್‌ ಪ್ರಕರಣವನ್ನೂ ಅದು ಕೈಗೆತ್ತಿಕೊಂಡಿಲ್ಲ. ದೇಣಿಗೆ ಪಡೆಯಲಾಗದ ರಾಜಕೀಯ ಪಕ್ಷಗಳು ಅಂತಹವುಗಳೊಂದಿಗೆ (ದೇಣಿಗೆ ಸಂಗ್ರಹಿಸಬಲ್ಲ ಪಕ್ಷಗಳೊಂದಿಗೆ) ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಳ್ಳದಿರುವುದು ತುಂಬಾ ಕೆಟ್ಟದ್ದು” ಎಂದು ಅವರು ಹೇಳಿದರು.

 ನ್ಯಾ. ಗೌಡ ಅವರ ಭಾಷಣದ ಪ್ರಮುಖ ಅಂಶಗಳು

  • ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿಲ್ಲ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸಂಸದೀಯ ಪ್ರಜಾಪ್ರಭುತ್ವಕ್ಕೆ ಬಹಳ ಮುಖ್ಯ. ಚುನಾವಣೆಗಳು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ನಡೆಯುವುದರಿಂದ ಪ್ರತಿಗಾಮಿ ಶಕ್ತಿಗಳು ಹುಟ್ಟಿಕೊಳ್ಳುವಂತಾಗಿದೆ.

  • ಪ್ರಜಾಪ್ರಭುತ್ವದ ಈ ಬಗೆಯ ಅವನತಿಯಿಂದ  ದಲಿತರು ಬಳಲುತ್ತಿದ್ದು  ಮುಸ್ಲಿಮರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ.

  • ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆ ಪರಿಪೂರ್ಣವಾಗಿದೆ ಎಂದು ನಾನು ಹೇಳುತ್ತಿಲ್ಲ. ಈ ವ್ಯವಸ್ಥೆ ಬಗ್ಗೆ ನನಗೂ ತೃಪ್ತಿ ಇಲ್ಲ. ಆದರೂ ಕೊಲಿಜಿಯಂ ವ್ಯವಸ್ಥೆ ಜಾರಿಯಲ್ಲಿರುವವರೆಗೂ ನಾವೆಲ್ಲರೂ ಅದಕ್ಕೆ ಬದ್ಧರಾಗಿರಬೇಕು. ಕಾರ್ಯಾಂಗಕ್ಕೆ ಅಪಸವ್ಯವಾಗುವಂತಹ ತೀರ್ಪು ಬಂದಾಗ ಅದು ನ್ಯಾಯಾಂಗದ ಮೇಲೆ ನಿರಂತರ ದಾಳಿ ಮಾಡುವುದು ಸರಿಯಲ್ಲ.

  • ಕೊಲಿಜಿಯಂ  ವ್ಯವಸ್ಥೆ ಇನ್ನೂ ಕಾರ್ಯನಿರ್ವಹಿಸುತ್ತಿದ್ದು ಅವರು (ಅಧಿಕಾರಸ್ಥರು) ಅದರ ಮೇಲೆ ದಾಳಿ ಮಾಡಲು ಬಯಸಿದ್ದರು. ಇಂತಹ ಹೇಳಿಕೆಗಳನ್ನು ಒಪ್ಪಲಾಗದು. ಸರ್ಕಾರ ನ್ಯಾಯಾಂಗದ ಮೇಲೆ ದಾಳಿ ಮಾಡಿದಾಗಲೆಲ್ಲಾ ವಕೀಲರು ದೊಡ್ಡಮಟ್ಟದಲ್ಲಿ ಅದನ್ನು ಒಪ್ಪಿಲ್ಲ.

  • ದೇಶದ ಪ್ರಸ್ತುತ ರಾಜಕೀಯ ಹಾದಿ ನೆರೆಯ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನವನ್ನು ಹೋಲುತ್ತಿದೆ.

  • ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ನ್ಯಾಯಿಕ ವರ್ಗವನ್ನು ಅಭಿನಂದಿಸಬೇಕಿದೆ. ಆದರೆ ಇಂತಹ ಒಂದು ಘಟನೆ ಸಾಲದು. ಇದು ಅವಿರತವಾಗಿ ಮುಂದುವರೆಯಬೇಕು. ನಾಗರಿಕ ಸಮಾಜದ ಉಳಿವಿಗಾಗಿ ಸಂವಿಧಾನವನ್ನು ರಕ್ಷಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಕಾರ್ಯಕ್ರಮದಲ್ಲಿ ದೆಹಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೇಖಾ ಶರ್ಮಾ, ಹಿರಿಯ ವಕೀಲರಾದ ಇಂದಿರಾ ಜೈಸಿಂಗ್, ಬಿಕಾಶ್ ರಂಜನ್ ಭಟ್ಟಾಚಾರ್ಯ, ರಾಜು ರಾಮಚಂದ್ರನ್, ಪಿ ವಿ ಸುರೇಂದ್ರನಾಥ್ ಹಾಗೂ ಸಿ ಯು ಸಿಂಗ್ ಉಪಸ್ಥಿತರಿದ್ದರು.

Kannada Bar & Bench
kannada.barandbench.com