ಅನುಚಿತ ವರ್ತನೆ: ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ ಮಲಯಾಳಂ ನಟ ಸುರೇಶ್ ಗೋಪಿ

ಹಲವು ಮಾಧ್ಯಮ ಸಿಬ್ಬಂದಿಯ ಸಮ್ಮುಖದಲ್ಲೇ ಪತ್ರಕರ್ತೆಯನ್ನು ದಾಟಲು ಯತ್ನಿಸಿದ್ದು ಈ ಯತ್ನದಲ್ಲಿ ಯಾವುದೇ ಲೈಂಗಿಕ ಉದ್ದೇಶವಿಲ್ಲದ ಕಾರಣ ತನ್ನ ವಿರುದ್ಧದ ಆರೋಪ ನಿಲ್ಲುವುದಿಲ್ಲ ಎಂದು ಗೋಪಿ ವಾದಿಸಿದ್ದಾರೆ.
ಸುರೇಶ್ ಗೋಪಿ ಮತ್ತು ಕೇರಳ ಹೈಕೋರ್ಟ್
ಸುರೇಶ್ ಗೋಪಿ ಮತ್ತು ಕೇರಳ ಹೈಕೋರ್ಟ್Facebook

ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಮಲಯಾಳಂ ನಟ ಮತ್ತು ರಾಜಕಾರಣಿ ಸುರೇಶ್ ಗೋಪಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬಿಜೆಪಿ ಸದಸ್ಯರೂ ಆಗಿರುವ ಗೋಪಿ, ಐಪಿಸಿ ಸೆಕ್ಷನ್ 354ರ (ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ) ಅಡಿಯಲ್ಲಿ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ತನ್ನ ವಿರುದ್ಧ ರಾಜಕೀಯ ಭಾವನೆಗಳನ್ನು ಕೆರಳಿಸಲು ಮತ್ತು ಕರುವನೂರ್ ಸಹಕಾರಿ ಬ್ಯಾಂಕ್ ಹಗರಣದಲ್ಲಿ ಠೇವಣಿದಾರರ ಪ್ರಕರಣವನ್ನು ಮುನ್ನಡೆಸಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ತನ್ನ ವಿರುದ್ಧ ಹೂಡಲಾಗಿದ್ದ ತೆರಿಗೆ ವಂಚನೆ ಪ್ರಕರಣದಂತೆಯೇ ಈ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಗೋಪಿ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ವಾದಿಸಿದ್ದಾರೆ.

ಕಾರ್ಯಕ್ರಮವೊಂದರಿಂದ ಹೊರಹೋಗಲು ಯತ್ನಿಸುತ್ತಿದ್ದಾಗ ಪತ್ರಕರ್ತೆ ಸೇರಿದಂತೆ ಮಾಧ್ಯಮ ಸಿಬ್ಬಂದಿ ತಮ್ಮನ್ನು ಹಿಂಬಾಲಿಸಿದರು. ಆಗ ತನ್ನ ದಾರಿಗೆ ಅಡ್ಡಲಾಗಿದ್ದ ಮಹಿಳೆಯಿಂದ ಮುಂದೆ ಸಾಗಲು ಯತ್ನಿಸಿದ್ದಾಗಿ ಮನವಿಯಲ್ಲಿ ಗೋಪಿ ತಿಳಿಸಿದ್ದಾರೆ.

ಘಟನೆ ವೇಳೆ ಸಾಕಷ್ಟು ಮಾಧ್ಯಮ ಸಿಬ್ಬಂದಿಯೂ ಇದ್ದುದರಿಂದ ಇದರಲ್ಲಿ ಯಾವುದೇ ಲೈಂಗಿಕ ಉದ್ದೇಶವನ್ನು ಇದರಲ್ಲಿ ಕಾಣಲು ಸಾಧ್ಯವಿಲ್ಲ. ಹಾಗಾಗಿ ತನ್ನ ಮೇಲಿನ ಆರೋಪ ನಿರಾಧಾರವಾದುದು ಎಂದು ಎಂದು ಗೋಪಿ ವಾದಿಸಿದ್ದಾರೆ.

ಸಮನ್ಸ್‌ ನೀಡಿದಾಗ ಪೊಲೀಸರೆದುರು ತಾನು ಹಾಜರಾಗಿ ತನಿಖೆಗೆ ಎಲ್ಲಾ ರೀತಿಯಲ್ಲಿ ಸಹಕರಿಸಿದ್ದು ಕಸ್ಟಡಿಗೆ ಪಡೆದು ತಮ್ಮನ್ನು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಅವರು ಕೋರಿದ್ದಾರೆ.

ಪ್ರಕರಣ ಶುಕ್ರವಾರ ನ್ಯಾಯಮೂರ್ತಿ ಸಿ ಪ್ರತಾಪ್ ಕುಮಾರ್ ಅವರೆದುರು ಬಂದಾಗ ಅವರು 2024ರ ಜನವರಿ ಮೊದಲ ವಾರದಲ್ಲಿ ವಿಚಾರಣೆ ನಡೆಸುವುದಾಗಿ ತಿಳಿಸಿದರು.

Related Stories

No stories found.
Kannada Bar & Bench
kannada.barandbench.com