ಕೋವಿಡ್ ನಡುವೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ನಡೆಸುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ ಪಿ ಸಾಹಿ ಅವರಿಗೆ ನ್ಯಾಯಮೂರ್ತಿ ಎಸ್ ಎಂ ಸುಬ್ರಮಣ್ಯಂ ಪತ್ರ ಬರೆದಿದ್ದಾರೆ.
ಪುತಿಯಾ ತಲೈಮುರೈ ಟಿವಿ ಚಾನೆಲ್ ಮತ್ತು ಯೂಟ್ಯೂಬ್‌ನಲ್ಲಿ ನಟ ಸೂರ್ಯ ಅವರ ಹೇಳಿಕೆ ಪ್ರಸಾರವಾಗಿದೆ ಎಂದು ಸೆಪ್ಟೆಂಬರ್ 13ರಂದು ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಾಂಕ್ರಮಿಕ ರೋಗದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ವರ್ಚುವಲ್ ಕಲಾಪ ನಡೆಸುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳು ಯಾವುದೇ ಭಯಪಡದೇ ಪರೀಕ್ಷೆ ಬರೆಯುವಂತೆ ಸೂಚಿಸಲಾಗಿದೆ ಎಂದು ನಟ ಸೂರ್ಯ ಹೇಳಿದ್ದಾರೆ ಎನ್ನಲಾಗಿದೆ.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾ. ಸುಬ್ರಮಣ್ಯಂ ಅವರು ಪತ್ರದಲ್ಲಿ ಹೀಗೆ ಉಲ್ಲೇಖಿಸಿದ್ದಾರೆ.
“ಗೌರವಾನ್ವಿತ ನ್ಯಾಯಮೂರ್ತಿಗಳು ತಮ್ಮ ಜೀವದ ಬಗ್ಗೆ ಭಯಭೀತರಾಗಿದ್ದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯದಾನ ಮಾಡುತ್ತಿದ್ದಾರೆ. ಹಾಗಾಗಿ, ಯಾವುದೇ ಭಯಪಡದೇ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಆದೇಶಿಸುವ ನೈತಿಕತೆ ಇಲ್ಲ ಎಂಬ ಅರ್ಥವನ್ನು ಹೇಳಿಕೆ ಹೊಂದಿದೆ. ನಮ್ಮ ಮಹಾನ್ ರಾಷ್ಟ್ರದ ಗೌರವಾನ್ವಿತ ನ್ಯಾಯಮೂರ್ತಿಗಳು ಹಾಗೂ ನ್ಯಾಯಾಂಗದ ವ್ಯವಸ್ಥೆಯ ಮೇಲಿನ ಸಮಗ್ರತೆ ಮತ್ತು ಗೌರವವನ್ನು ಕೆಳದರ್ಜೆಗಿಳಿಸಲಾಗಿದ್ದು, ಅತ್ಯಂತ ಕೀಳಾಗಿ ಟೀಕಿಸಲಾಗಿದೆ. ಇದರಿಂದ ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಗೆ ಹೊಡೆತಬಿದ್ದಿದೆ. ಇದರಿಂದಾಗಿ ನನ್ನ ದೃಷ್ಟಿಯಲ್ಲಿ ಇದು ನ್ಯಾಯಾಂಗ ನಿಂದನೆಗೆ ಸಮ” ಎಂದು ಹೇಳಿದ್ದಾರೆ.
ಭಾರತದ ನ್ಯಾಯಾಂಗ ವ್ಯವಸ್ಥೆಯ ಘನತೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸುವುದು ಅಗತ್ಯ ಎಂದು ನ್ಯಾ. ಸುಬ್ರಮಣ್ಯಂ ಹೇಳಿದ್ದಾರೆ. ಹೈಕೋರ್ಟ್‌ನಲ್ಲಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಆರಂಭಿಸಬೇಕಾದರೆ ಅಡ್ವೊಕೇಟ್ ಜನರಲ್, ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕಾದರೆ ಅಟಾರ್ನಿ ಜನರಲ್ ಅವರ ಒಪ್ಪಿಗೆ ಅಗತ್ಯ. ಸದರಿ ಪ್ರಕರಣದಲ್ಲಿ ನ್ಯಾ. ಸುಬ್ರಮಣ್ಯಂ ಅವರ ಪತ್ರ ಹೇಗೆ ನಿರ್ಧರಿತವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
“ಬಾರ್ ಅಂಡ್ ಬೆಂಚ್” ಜೊತೆ ಮಾತನಾಡಿರುವ ತಮಿಳುನಾಡು ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಅವರು ಹೀಗೆ ಹೇಳಿದ್ದಾರೆ.
“ನನಗೆ ತಿಳಿದಿರುವ ಹಾಗೆ ಯಾರೂ ಮನವಿ ಸಲ್ಲಿಸಿಲ್ಲ. ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಡ್ವೊಕೇಟ್ ಜನರಲ್ ಒಪ್ಪಿಗೆ ಕೇಳಲಾಗುತ್ತದೆ. ಆದರೆ, ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವುದರಿಂದ ನ್ಯಾಯಾಲಯವನ್ನು ತಡೆಯಲಾಗದು. ಮುಖ್ಯ ನ್ಯಾಯಮೂರ್ತಿಗೆ ಪತ್ರ ಮಾತ್ರ ಬರೆಯಲಾಗಿದೆ ಎಂಬುದು ನನಗೆ ಪತ್ರಿಕೆಗಳಿಂದ ತಿಳಿದಿದೆ. ಮುಖ್ಯ ನ್ಯಾಯಮೂರ್ತಿ ಏನು ಮಾಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ” ಎಂದಿದ್ದಾರೆ.
ನೀಟ್ ಮುಂದೂಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳು ತಿರಸ್ಕೃತಗೊಂಡ ಬಳಿಕ ದೇಶದ ವಿವಿಧ ಕೇಂದ್ರಗಳಲ್ಲಿ ಭಾನುವಾರ ಪರೀಕ್ಷೆ ನಡೆಸಲಾಗಿದೆ.
ನ್ಯಾಯಾಂಗ ನಿಂದನಾ ಆರೋಪಕ್ಕೆ ಗುರಿಯಾಗಿರುವ ನಟ ಸೂರ್ಯ ಬರೆದಿರುವ ಪತ್ರ ಹೀಗಿದೆ: