ಸುಶಾಂತ್ ಸಿಂಗ್ ಪ್ರಕರಣ: ತನ್ನ ದೋಷರಹಿತ ತನಿಖಾ ವರದಿಗಾರಿಕೆ ಅಧಿಕಾರಿಗಳಿಗೆ ಸಹಾಯ ಮಾಡಿದೆ ಎಂದ 'ರಿಪಬ್ಲಿಕ್' ಟಿವಿ

ಶೀನಾ ಬೋರಾ ಕೊಲೆ ಪ್ರಕರಣ ಮತ್ತು ಸುನಂದಾ ಪುಷ್ಕರ್ ಸಾವಿನ ಪ್ರಕರಣ ಪ್ರಸಾರ ಮಾಡಿದ ಬಗೆಯನ್ನು ಸಮರ್ಥನೆಯ ರೂಪದಲ್ಲಿ ಸುದ್ದಿವಾಹಿನಿ ಉಲ್ಲೇಖಿಸಿದೆ.
ಸುಶಾಂತ್ ಸಿಂಗ್ ಪ್ರಕರಣ: ತನ್ನ ದೋಷರಹಿತ ತನಿಖಾ ವರದಿಗಾರಿಕೆ ಅಧಿಕಾರಿಗಳಿಗೆ ಸಹಾಯ ಮಾಡಿದೆ ಎಂದ 'ರಿಪಬ್ಲಿಕ್' ಟಿವಿ

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ಮಾಧ್ಯಮ ಪ್ರಸಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ಗೆ ‘ರಿಪಬ್ಲಿಕ್’ ಟಿವಿ ಅಫಿಡವಿಟ್ ಸಲ್ಲಿಸಿದ್ದು " ಸಾರ್ವಜನಿಕರ ಮುಂದೆ ಸತ್ಯ" ಮಂಡಿಸುವಲ್ಲಿ ತನ್ನ ಪಾತ್ರ ಇದೆ ಎಂದು ಒತ್ತಿ ಹೇಳಿದೆ.

ಬಾಲಿವುಡ್ ನಟ ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಸುದ್ದಿ ವಾಹಿನಿಗಳು ತನಿಖಾ ಪತ್ರಿಕೋದ್ಯಮದ ಹೆಸರಿನಲ್ಲಿ ಮಾಧ್ಯಮ ವಿಚಾರಣೆ ನಡೆಸುತ್ತಿವೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಅದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಈ ಅಫಿಡವಿಟ್ ಸಲ್ಲಿಕೆಯಾಗಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಮರ್ಥನೀಯವಲ್ಲ. ಹೀಗಾಗಿ ಅದನ್ನು ತಿರಸ್ಕರಿಸಬೇಕು ಎಂದು ವಾಹಿನಿ ಮನವಿ ಮಾಡಿದೆ. ತನ್ನ ವರದಿಗಾರಿಕೆ ಮುಂದುವರೆಸುವ ಸಲುವಾಗಿ ಮಾಧ್ಯಮಗಳ ಹಕ್ಕನ್ನು ಪ್ರತಿಪಾದಿಸಲು ಕೂಡ ಅದು ಮುಂದಾಗಿದೆ.

ರಿಪಬ್ಲಿಕ್‌ನ ಸಿಎಫ್‌ಒ ಶಿವಸುಬ್ರಮಣಿಯನ್ ಸುಂದರಂ ಅಫಿಡವಿಟ್ ಸಲ್ಲಿಸಿದ್ದು ನೆಟ್‌ವರ್ಕ್ ಮತ್ತು ಅದರ ವಾಹಿನಿಗಳು ನಟ ಹಾಗೂ ಆತನ ಸಾವಿನ ಕುರಿತಂತೆ ವಿವಿಧ ಸಂಗತಿಗಳನ್ನು ಬೆಳಕಿಗೆ ತಂದಿವೆ ಎಂದು ಉಲ್ಲೇಖಿಸಲಾಗಿದೆ. ‘ಘಟನೆಗಳು ಮತ್ತು ಸಂಗತಿಗಳ ಯಾಂತ್ರಿಕ ವರದಿಗಾರಿಕೆ’ಯಿಂದ "ಸಾರ್ವಜನಿಕ ವ್ಯಕ್ತಿಗಳು ಮತ್ತು ಸರ್ಕಾರಿ ಯಂತ್ರದ ನಡೆಯನ್ನು ಪ್ರಶ್ನಿಸುವವರೆಗೆ" ಮಾಧ್ಯಮಗಳ ಪಾತ್ರ ಅನೇಕ ವರ್ಷಗಳಲ್ಲಿ ವಿಕಸಿತವಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

"ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಪ್ರತಿಷ್ಠೆ ಗಳಿಸಿರುವ", ‘ರಿಪಬ್ಲಿಕ್’ನೆಟ್‌ವರ್ಕ್‌ನ ವಾಹಿನಿಗಳು ಈ ಪಾತ್ರದ ಮುಂದುವರಿಕೆಯ ಭಾಗವಾಗಿ ಸಾರ್ವಜನಿಕ ವಲಯದಲ್ಲಿ ಪುರಾವೆಗಳನ್ನು ಮುಂದಿಟ್ಟಿವೆ, ಪ್ರಕರಣದಲ್ಲಿ ನಡೆದ ತನಿಖೆಯ ಲೋಪದೋಷ ಮತ್ತು ನ್ಯೂನತೆಗಳನ್ನು ಇವು ಬೆರಳು ಮಾಡಿ ತೋರಿಸಿವೆ” ಎಂದು ಅಫಿಡವಿಟ್‌ನಲ್ಲಿ ಸಮರ್ಥಿಸಿಕೊಳ್ಳಲಾಗಿದೆ.

" ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ‘ರಿಪಬ್ಲಿಕ್’ಟಿವಿ ತನ್ನ ದೋಷರಹಿತ ಪಾತ್ರವನ್ನು ಬಿಂಬಿಸುವಂತಹ ದಾಖಲೆಗಳನ್ನು ಮುಂದಿಟ್ಟಿದ್ದು ಇದು ತನಿಖೆಯಲ್ಲಿ ನಡೆದ ಗಂಭೀರ ಅಕ್ರಮಗಳನ್ನು ಎತ್ತಿ ತೋರಿಸುತ್ತದೆ."

ರಿಪಬ್ಲಿಕ್ ಟಿವಿ ಅಫಿಡವಿಟ್

ತನಿಖಾ ಪತ್ರಿಕೋದ್ಯಮದ ಮಹತ್ವವನ್ನು ಒತ್ತಿಹೇಳಲು ‘ರಿಪಬ್ಲಿಕ್’ ಯತ್ನಿಸಿದ್ದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಪ್ರಕಟಿಸಿದ ಮಾನದಂಡಗಳನ್ನು ಉಲ್ಲೇಖಿಸಿದೆ.

ಸುದ್ದಿ ಪ್ರಸಾರ ಮಾಡುವಾಗ ನೆಟ್‌ವರ್ಕ್‌ನ ವಾಹಿನಿಗಳು "ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಉನ್ನತ ಮಾನದಂಡಗಳನ್ನು" ಪಾಲಿಸುತ್ತವೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ತನ್ನ ವರದಿಗಳು ತನಿಖಾಧಿಕಾರಿಗಳಿಗೆ ಸಹಾಯ ಮಾಡಿದ್ದವು ಎಂಬುದನ್ನು ಪ್ರಸ್ತಾಪಿಸಿರುವ ‘ರಿಪಬ್ಲಿಕ್’ ಈ ಹಿಂದೆ ತಾನು ನಡೆಸಿದ್ದ ತನಿಖಾ ಪತ್ರಿಕೋದ್ಯಮವನ್ನು ಸಮರ್ಥಿಸಿಕೊಂಡಿದೆ. ಶೀನಾ ಬೋರಾ ಕೊಲೆ ಪ್ರಕರಣ ಮತ್ತು ಸುನಂದಾ ಪುಷ್ಕರ್ ಸಾವಿನ ಪ್ರಕರಣ ಪ್ರಸಾರ ಮಾಡಿದ ಬಗೆಯನ್ನು ಉದಾಹರಣೆಯಾಗಿ ನೀಡಲಾಗಿದೆ.

"‘ರಿಪಬ್ಲಿಕ್’ ಟಿವಿಯ ತನಿಖಾ ಪತ್ರಿಕೋದ್ಯಮ ಮತ್ತು ಸೂಕ್ತ ಪ್ರಶ್ನೆಗಳನ್ನು ಕೇಳುವಲ್ಲಿ ‘ರಿಪಬ್ಲಿಕ್’ ತಂಡದ ಪಟ್ಟುಬಿಡದ ಶೈಲಿ, ಕಾನೂನು ಸುವ್ಯವಸ್ಥೆಯ ಯಂತ್ರ ಜಾಗೃತವಾಗಿರಲು ಕಾರಣವಾಗಿದೆ ಮತ್ತು ತನ್ನ ತನಿಖಾ ಪತ್ರಿಕೋದ್ಯಮದ ವಿವರಗಳನ್ನು ಸಾರ್ವಜನಿಕ ವಲಯದ ಮುಂದಿಟ್ಟಿದೆ ಎಂಬುದಕ್ಕೆ ಇರುವ ಪುರಾವೆಗಳನ್ನು ಗಮನಿಸಬೇಕು."

ರಿಪಬ್ಲಿಕ್ ಟಿವಿ ಅಫಿಡವಿಟ್

ತನ್ನದೇ ಆದ "ಪತ್ರಿಕೋದ್ಯಮದ ದೋಷರಹಿತ ಮಾನದಂಡಗಳ" ಬಗ್ಗೆ ‘ರಿಪಬ್ಲಿಕ್’ ಭರವಸೆ ನೀಡಿದೆ. ತನ್ನ ತಂಡ ಇದಕ್ಕೆ ಪೂರಕವಾಗಿ ನಿರ್ವಹಿಸಿದ ಹಲವು ಪ್ರಕರಣಗಳನ್ನು ಉಲ್ಲೇಖಿಸಿದೆ. ಸಂವಿಧಾನದ ವಿಧಿ 19 (1) (ಎ) ಅಡಿಯಲ್ಲಿ ಬರುವ ಪತ್ರಿಕಾ ಸ್ವಾತಂತ್ರ್ಯದ ಹಕ್ಕನ್ನು ಸಹ ಅಫಿಡವಿಟ್ ಪ್ರಸ್ತಾಪಿಸಿದೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ವಿಳಂಬ ಪ್ರಸಾರಕ್ಕಾಗಿ ನಿರ್ದೇಶಿಸಿದುದರ ವಿರುದ್ಧ ಅಫಿಡವಿಟ್ಟಿನಲ್ಲಿ ಧ್ವನಿ ಎತ್ತಲಾಗಿದ್ದು ಅಂತಹ ನಿರ್ದೇಶನ ಮಾಧ್ಯಮಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜೊತೆಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದಿದೆ.

ಸಾರ್ವಜನಿಕರಿಗೆ ನೈಜ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳುವ ಹಕ್ಕು ಸುದ್ದಿವಾಹಿನಿಗೆ ಇದೆ. ಇದು ಸಾರ್ವಜನಿಕರಿಗೆ ಮಾಹಿತಿ ನೀಡುವ ಹಕ್ಕಿಗೆ ಪೂರಕವಾಗಿ ಇದೆ ಎಂಬ ಅಂಶ ಅಫಿಡವಿಟ್ಟಿನಲ್ಲಿ ಇದೆ.

ಬಾಂಬೆ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಸೆಪ್ಟೆಂಬರ್ 10 ರಂದು ಪ್ರಕರಣದ ವಿಚಾರಣೆ ನಡೆಸಲಿದೆ.

Related Stories

No stories found.