ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದತಿಗೆ ಸುಶಾಂತ್ ಸಹೋದರಿಯರ ಮನವಿ; ವಿಚಾರಣೆ ಮುಂದೂಡಿದ ಬಾಂಬೆ ಹೈಕೋರ್ಟ್

ಒಂದು ತಿಂಗಳ ಹಿಂದೆಯಷ್ಟೇ ಎಫ್‌ಐಆರ್ ದಾಖಲಿಸಲಾಗಿದ್ದು, ಅದನ್ನು ರದ್ದುಪಡಿಸುವ ತುರ್ತೇನೂ ಇಲ್ಲ ಎಂದು ಬಾಂಬೆ ಹೈಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ಮುಂದೂಡಿದೆ.
Sushant singh rajput, Bombay HC
Sushant singh rajput, Bombay HC

ನಟಿ ರಿಯಾ ಚಕ್ರವರ್ತಿ ದೂರಿನ ಮೇರೆಗೆ ಮುಂಬೈ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಪ್ರಥಮ ಮಾಹಿತಿ (ಎಫ್‌ಐಆರ್‌) ವರದಿ ರದ್ದುಗೊಳಿಸುವಂತೆ ಕೋರಿ ಸುಶಾಂತ್ ಸಹೋದರಿಯರಾದ ಪ್ರಿಯಾಂಕಾ ಮತ್ತು ಮೀತು ಸಿಂಗ್ ಬಾಂಬೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎಂ ಎಸ್ ಕಾರ್ನಿಕ್ ಅವರಿದ್ದ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿದ್ದು, ಪ್ರಕರಣವನ್ನು ಅಕ್ಟೋಬರ್ 13ಕ್ಕೆ ಮುಂದೂಡಿದೆ. ಸುಶಾಂತ್ ಸಹೋದರಿಯರ ಪರವಾಗಿ ವಕೀಲ ಮಾಧವ್ ಥೋರಟ್ ಹಾಗೂ ರಿಯಾ ಪರವಾಗಿ ವಕೀಲ ದೀಪಲ್ ಠಕ್ಕರ್ ವಾದಿಸಿದರು.

ಮತ್ತೊಂದು ಪ್ರಕರಣದ ವಿಚಾರಣೆಯಲ್ಲಿ ವಕೀಲ ಸತೀಶ್ ಮಾನೆಶಿಂಧೆ ಅವರು ಪಾಲ್ಗೊಂಡಿದ್ದರಿಂದ ಠಕ್ಕರ್ ಅವರು ರಿಯಾ ಅವರನ್ನು ಪ್ರತಿನಿಧಿಸಿದ್ದರು. ನಿನ್ನೆಯಷ್ಟೇ ನೋಟಿಸ್ ನೀಡಿರುವುದರಿಂದ ಅರ್ಜಿಗೆ ಸಂಬಂಧಿಸಿದಂತೆ ಕಾಲಾವಕಾಶ ನೀಡುವಂತೆ ಅವರು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು “ಒಂದು ತಿಂಗಳ ಹಿಂದಷ್ಟೇ ಎಫ್‌ಐಆರ್ ದಾಖಲಿಸಲಾಗಿದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತುರ್ತಿಲ್ಲ” ಎಂದಿತು. ವಿಚಾರಣೆಯನ್ನು ಒಂದು ವಾರ ಮುಂದೂಡಿದ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ರಿಯಾ ಚಕ್ರವರ್ತಿ ಅವರಿಗೆ ಅರ್ಜಿಯ ಕಾಪಿಗಳನ್ನು ರವಾನಿಸುವಂತೆ ಥೋರಟ್ ಅವರಿಗೆ ಸೂಚಿಸಿತು.

ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ರಿಯಾ ದೂರು ದಾಖಲಿಸಿದ್ದು, ಅದನ್ನು ರದ್ದುಗೊಳಿಸುವಂತೆ ಪ್ರಿಯಾಂಕಾ ಮತ್ತು ಮೀತು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸುಶಾಂತ್ ಸಹೋದರಿಯರು ಮತ್ತು ರಾಮಮನೋಹರ ಲೋಹಿಯಾ ಆಸ್ಪತ್ರೆಯ ವೈದ್ಯ ಡಾ. ತರುಣ್ ಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ಕಾಯಿದೆಯ ವಿವಿಧ ಸೆಕ್ಷನ್‌ಗಳ ದೂರು ದಾಖಲಾಗಿದೆ.

Also Read
ಸುಶಾಂತ್‌ ಪ್ರಕರಣ; ರಿಯಾ ವಿರುದ್ಧದ ಸಿಬಿಐ ದಾಖಲಿಸಿರುವ ಎಫ್‌ಐಆರ್ ಕಾನೂನು ಬದ್ಧ ಎಂದ ಸುಪ್ರೀಂ ಕೋರ್ಟ್‌

ರಿಯಾ ಅವರು ಸುಪ್ರೀಂ ಕೋರ್ಟ್ ಮತ್ತು ಕೆಲವು ಮಾಧ್ಯಮ ಸಂಸ್ಥೆಗಳ ಮುಂದೆ ನೀಡಿದ ಹೇಳಿಕೆಗೆ ವಿರುದ್ಧವಾಗಿ ಹೊಸ ಕತೆ ಸೃಷ್ಟಿಸಲು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪ್ರಿಯಾಂಕಾ ಮತ್ತು ಮೀತು ವಿವರಿಸಿದ್ದಾರೆ.

“ಇಂಥ ವಿರೋಧಾಭಾಸದ ವರದಿಗಳನ್ನು ಪರಿಗಣಿಸುವ ಅಗತ್ಯವಿಲ್ಲ ಮತ್ತು ವಿರೋಧಾಭಾಸ ಮತ್ತು ಕಟ್ಟುಕತೆಗಳ ಆಧಾರದಲ್ಲಿ ದೂರು ದಾಖಲಿಸಲಾಗಿದ್ದು, ಅದನ್ನು ವಜಾಗೊಳಿಸಬೇಕು.”
ಪ್ರಿಯಾಂಕಾ ಮತ್ತು ಮೀತು ಅರ್ಜಿಯಲ್ಲಿ ಉಲ್ಲೇಖ

ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಎಫ್‌ಐಆರ್ ದಾಖಲಿಸಲಾಗಿದ್ದು, ಅದನ್ನು ವಜಾಗೊಳಿಸಬೇಕು. ಆಗಸ್ಟ್ 19ರಂದು ಸುಪ್ರೀಂ ಕೋರ್ಟ್ “ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಹೊಸ ಪ್ರಕರಣ ದಾಖಲಿಸಿದರೆ ವಿಚಾರಗಳನ್ನು ಆಧರಿಸಿ ಆ ಪ್ರಕರಣಗಳನ್ನೂ ತನಿಖಾ ಸಂಸ್ಥೆಯೇ ನಡೆಸುವುದು ಸಮಂಜಸ” ಎಂದು ಹೇಳಿದೆ ಎಂದು ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com