ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯಾ ಪ್ರಕರಣಕ್ಕೆ ಸಂಬಂಧಿಸಿದ ಪ್ರಚಾರದ ಬಗ್ಗೆ ಎದ್ದಿರುವ ಆತಂಕಗಳ ಬೆನ್ನಲ್ಲೇ ಭಾರತೀಯ ಪತ್ರಿಕಾ ಮಂಡಳಿಯು (ಪಿಸಿಐ) ಪತ್ರಿಕಾ ನಡಾವಳಿಯ ನಿಯಮಗಳನ್ನು ಅನುಸರಿಸುವಂತೆ ಮಾಧ್ಯಮಗಳಿಗೆ ಸಲಹೆ ನೀಡಿದೆ.
ಪ್ರಕರಣದ ತನಿಖೆ ಮತ್ತು ವಿಚಾರಣೆಯನ್ನು ತನಿಖಾ ಸಂಸ್ಥೆಗಳು ನಡೆಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಪರ್ಯಾಯ ವಿಚಾರಣೆಗಳನ್ನು ನಡೆಸುವುದು ಮತ್ತು ತನಿಖಾ ಸಂಸ್ಥೆಗಳು ಹೇಳುವುದಕ್ಕೂ ಮುನ್ನವೇ ತೀರ್ಪು ನೀಡುವುದರಿಂದ ಅಂತರ ಕಾಯ್ದುಕೊಳ್ಳುವಂತೆ ಮಾಧ್ಯಮಗಳಿಗೆ ಪಿಸಿಐ ಸಲಹೆ ನೀಡಿದೆ.
ಪಿಸಿಐ ಸಲಹಾ ಪ್ರತಿಯಲ್ಲಿ ಹೀಗೆ ಹೇಳಲಾಗಿದೆ:
ಮೇಲಿನ ವಿಚಾರದ ಜೊತೆಗೆ ಪಿಸಿಐ ಈ ಕೆಳಗಿನ ಸಲಹೆಗಳನ್ನು ನೀಡಿದೆ:
ಆರೋಪಿಯು ಪ್ರಕರಣದಲ್ಲಿ ಭಾಗಿಯಾಗಿರುವುದು ನಿಜ ಎಂಬ ಅಭಿಪ್ರಾಯ ಸಾಮಾನ್ಯ ಜನರಲ್ಲಿ ಮೂಡುವಂತೆ ಕಾರ್ಯಕ್ರಮವನ್ನು ಮಾಧ್ಯಮಗಳು ನಿರೂಪಿಸಬಾರದು.
ಪ್ರಕರಣ ನಡೆದಿರುವ ಬಗ್ಗೆ ಅಧಿಕೃತ ತನಿಖಾ ಸಂಸ್ಥೆಗಳ ಹಾದಿ ಕುರಿತ ಪುಕಾರುಗಳನ್ನು ಪ್ರಕಟಿಸಬಾರದು.
ದಿನಂಪ್ರತಿ ವ್ಯಾಪಕವಾಗಿ ಅಪರಾಧ ಸುದ್ದಿಗಳನ್ನು ವರದಿ ಮಾಡುವುದು ಮತ್ತು ಸತ್ಯಾಸತ್ಯೆ ಪರಿಶೀಲಿಸದೆ ಸಾಕ್ಷಿಯ ಕುರಿತು ಪ್ರತಿಕ್ರಿಯಿಸುವುದು ಸರಿಯಲ್ಲ. ಇದು ನೈಜ ತನಿಖೆ ಮತ್ತು ವಿಚಾರಣೆಯ ಮೇಲೆ ಪ್ರಭಾವ ಬೀರುತ್ತದೆ.
ಸಂತ್ರಸ್ತರು, ಸಾಕ್ಷಿಗಳು, ಶಂಕಿತರು ಮತ್ತು ಆರೋಪಿತರಿಗೆ ಅವಶ್ಯಕತೆಗಿಂತ ಹೆಚ್ಚಿನ ಪ್ರಚಾರ ನೀಡುವುದರಿಂದ ಅಂತರ ಕಾಯ್ದುಕೊಳ್ಳುವಂತೆ ಮಾಧ್ಯಮಗಳಿಗೆ ಸೂಚಿಸಲಾಗಿದೆ. ಇದರಿಂದ ಅವರ ಖಾಸಗಿ ಹಕ್ಕಿನ ಉಲ್ಲಂಘನೆಯಾಗುತ್ತದೆ.
ಸಾಕ್ಷಿಗಳ ಗುರುತಿಸುವಿಕೆಯನ್ನು ಮಾಧ್ಯಮಗಳು ತಡೆಹಿಡಿಯಬೇಕು. ಇದರಿಂದ ಆರೋಪಿತರು ಅಥವಾ ಅವರ ಸಮೀಪವರ್ತಿಗಳು ಹಾಗೂ ತನಿಖಾ ಸಂಸ್ಥೆಗಳಿಂದ ಸಾಕ್ಷಿದಾರರು ಒತ್ತಡ ಎದುರಿಸುವಂತಾಗುತ್ತದೆ.
ಪಿಸಿಐ ಸಲಹಾ ಸೂಚಿಯನ್ನು ಇಲ್ಲಿ ಓದಿ