ಸ್ವಾತಿ ಮಾಲೀವಾಲ್‌ ಹಲ್ಲೆ ಪ್ರಕರಣ: ಬಿಭವ್‌ ಕುಮಾರ್‌ ಮನವಿ ಆಲಿಸಲಿರುವ ಜನಪ್ರತಿನಿಧಿಗಳ ಪ್ರಕರಣದ ರೋಸ್ಟರ್ ಪೀಠ

ನ್ಯಾಯಮೂರ್ತಿ ಸ್ವರ್ಣಾ ಕಾಂತ ಶರ್ಮಾ ಅವರು ಹಾಲಿ/ಮಾಜಿ ಸಂಸದರು/ಶಾಸಕರಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ರೋಸ್ಟರ್ ನ್ಯಾಯಮೂರ್ತಿಯಾಗಿದ್ದಾರೆ. ಪ್ರಕರಣದ ವರ್ಗಾವಣೆಯು ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟಿರಲಿದೆ.
Justice Swarana Kanta Sharma, Delhi High Court
Justice Swarana Kanta Sharma, Delhi High Court

ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲೀವಾಲ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಂಸದರು ಹಾಗೂ ಶಾಸಕರ ಪ್ರಕರಣಗಳ ವಿಚಾರಣೆ ನಡೆಸುವ ರೋಸ್ಟರ್‌ ಪೀಠಕ್ಕೆ ದೆಹಲಿ ಹೈಕೋರ್ಟ್‌ ಶುಕ್ರವಾರ ವರ್ಗಾಯಿಸಿದೆ.

ಪ್ರಕರಣ ಇಂದು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರ ಮುಂದೆ ಪಟ್ಟಿ ಮಾಡಲಾಗಿದ್ದು, ದೂರುದಾರರು ರಾಜ್ಯಸಭಾ ಸದಸ್ಯರಾಗಿರುವುದರಿಂದ ಸಂಸದರು, ಶಾಸಕರ ಪ್ರಕರಣ ಆಲಿಸುವ ನ್ಯಾಯಮೂರ್ತಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.

ನ್ಯಾಯಮೂರ್ತಿ ಸ್ವರ್ಣಾ ಕಾಂತ ಶರ್ಮಾ ಅವರು ಹಾಲಿ/ಮಾಜಿ ಸಂಸದರು/ಶಾಸಕರಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳಿಗೆ ರೋಸ್ಟರ್ ನ್ಯಾಯಮೂರ್ತಿಯಾಗಿದ್ದಾರೆ. ಪ್ರಕರಣದ ವರ್ಗಾವಣೆಯು ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟಿರುತ್ತದೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಶರ್ಮಾ ಅವರು ಇಂದು ನಡೆಸುವ ಸಾಧ್ಯತೆಯಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಆಪ್‌ನ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲೀವಾಲ್‌ ಮೇಲೆ ಹಲ್ಲೆ ನಡೆಸಿದ ಆರೋಪ ಬಿಭವ್‌ ಕುಮಾರ್ ಮೇಲಿದೆ. ಅವರು ತನ್ನ ಬಂಧನ ಕಾನೂನುಬಾಹಿರವಾಗಿದ್ದು ಬಿಡುಗಡೆಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಪರಿಹಾರವನ್ನು ಸಹ ಕೋರಿದ್ದಾರೆ. ಅರ್ನೇಶ್ ಕುಮಾರ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತನ್ನ ಬಂಧನವಾಗಿದೆ ಎಂದು ಅವರು ಹೈಕೋರ್ಟ್‌ ಮುಂದೆ ಪ್ರತಿಪಾದಿಸಿದ್ದಾರೆ.

ಮೇ 27 ರಂದು ದೆಹಲಿಯ ತೀಸ್ ಹಜಾರಿ ಕೋರ್ಟ್ ಕುಮಾರ್ ಅವರಿಗೆ ಜಾಮೀನು ನಿರಾಕರಿಸಿತ್ತು. ದೆಹಲಿ ಪೊಲೀಸರು ಮೇ 18 ರಂದು ಕುಮಾರ್ ಅವರನ್ನು ಬಂಧಿಸಿದರು. ನಂತರ ಅವರನ್ನು ಐದು ದಿನಗಳ ಕಾಲ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಮೇ 24 ರಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.

Kannada Bar & Bench
kannada.barandbench.com