ಎಎಪಿಯ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲೀವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಅವರಿಗೆ ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ನಿರಾಕರಿಸಿದೆ.
ತೀಸ್ ಹಜಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸುಶೀಲ್ ಅನುಜ್ ತ್ಯಾಗಿ ಈ ಆದೇಶ ನೀಡಿದ್ದಾರೆ.
ದೆಹಲಿ ಪೊಲೀಸರು ಮೇ 18ರಂದು ಕುಮಾರ್ ಅವರನ್ನು ಬಂಧಿಸಿದ್ದರು. ನಂತರ ಅವರನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿತ್ತು. ಮೇ 24ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.
ಕೇಜ್ರಿವಾಲ್ ಅವರ ನಿವಾಸದಲ್ಲಿ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಈ ಹಿಂದೆ ಮಾಲೀವಾಲ್ ಆರೋಪಿಸಿದ್ದರು. ಮಾಲೀವಾಲ್ ಅವರ ಎದೆ, ಹೊಟ್ಟೆ ಮತ್ತು ಸೊಂಟದ ಭಾಗಕ್ಕೆ ಕುಮಾರ್ ಕಾಲಿನಿಂದ ಒದ್ದಿದ್ದಾರೆ ಎಂದು ಎಫ್ಐಆರ್ ದಾಖಲಾಗಿತ್ತು.
ಮತ್ತೊಂದೆಡೆ ಮಾಲೀವಾಲ್ ಅವರ ವಿರುದ್ಧ ಎಎಪಿ ಆರೋಪ ಮಾಡಿತ್ತು. ಮಾಲಿವಾಲ್ ಅವರು ಮುಖ್ಯಮಂತ್ರಿ ನಿವಾಸದಿಂದ ಹೊರನಡೆಯುತ್ತಿರುವಾಗ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ತೋರಿಸುವ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು.
ಆಹ್ವಾನವಿಲ್ಲದೆ ಸಿಎಂ ನಿವಾಸಕ್ಕೆ ಮಾಲೀವಾಲ್ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಅದೇ ದಿನ ಮಾಲೀವಾಲ್ ಪೊಲೀಸ್ ದೂರು ಏಕೆ ನೀಡಲಿಲ್ಲ? ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಗಾಗದೆ ಏಮ್ಸ್‌ಗೆ ತೆರಳಿದ್ದೇಕೆ? ಕತೆಗೆ ತಕ್ಕಂತೆ ಎಲ್ಲವೂ ಪೂರ್ವಯೋಜಿತವಾಗಿ ನಡೆಯಿತು ಎಂದು ಕುಮಾರ್ ಪರ ವಕೀಲರು ಇಂದು ನ್ಯಾಯಾಲಯಕ್ಕೆ ತಿಳಿಸಿದರು.
ಇತ್ತ ಖುದ್ದು ವಾದ ಮಂಡಿಸಿದ ಮಾಲೀವಾಲ್ ಅವರು ಕುಮಾರ್ ಅವರನ್ನು ಬಿಡುಗಡೆ ಮಾಡಿದರೆ, ನನ್ನ ಮತ್ತು ನನ್ನ ಕುಟುಂಬ ಸದಸ್ಯರ ಜೀವಕ್ಕೆ ಗಂಭೀರ ಅಪಾಯವಿದೆ ಎಂದರು.