ಅರ್ಕಾವತಿ ಡಿನೋಟಿಫಿಕೇಶನ್‌: ನ್ಯಾ.ಕೆಂಪಣ್ಣ ಆಯೋಗದ ವರದಿ ವಿಧಾನ ಮಂಡಲದಲ್ಲಿ ಮಂಡನೆಗೆ ಕೋರಿಕೆ; ಸರ್ಕಾರಕ್ಕೆ ನೋಟಿಸ್‌

ಹೈಕೋರ್ಟ್‌ ಮತ್ತು ಸುಪ್ರೀಂ ಆದೇಶ ಉಲ್ಲಂಘಿಸಿ 2015ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ 541 ಎಕರೆ ಜಮೀನನ್ನು ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫೈ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾ. ಕೆಂಪಣ್ಣ ಆಯೋಗ ನೇಮಿಸಲಾಗಿತ್ತು.
Former CM Siddaramaiah and Karnataka HC
Former CM Siddaramaiah and Karnataka HC

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಭಾರಿ ಸದ್ದು ಮಾಡಿದ್ದ ಅರ್ಕಾವತಿ ಭೂ ಅವ್ಯವಹಾರ ಹಗರಣ ಮುನ್ನೆಲೆಗೆ ಬಂದಿದ್ದು, ಹಗರಣದ ತನಿಖೆಗೆ ಸಂಬಂಧಿಸಿದಂತೆ ನೇಮಿಸಲಾಗಿದ್ದ ನಿವೃತ್ತ ನ್ಯಾ. ಎಚ್‌ ಎಸ್‌ ಕೆಂಪಣ್ಣ ನೇತೃತ್ವದ ಏಕಸದಸ್ಯ ಆಯೋಗವು ಸಲ್ಲಿಸಿರುವ ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ಸಾರ್ವಜನಿಕ ಹೊಣೆಗಾರಿಕೆ ಸಮಿತಿ (ಸಿಪಿಸಿ) ಸಲ್ಲಿಸಿದ್ದ ಪಿಐಎಲ್‌ ಅನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು. ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿರುವ ಪೀಠವು ಹೆಚ್ಚಿನ ಪರಿಗಣೆನೆಗಾಗಿ ಪ್ರಕರಣವನ್ನು ನವೆಂಬರ್‌ 15ಕ್ಕೆ ವಿಚಾರಣೆಗೆ ನಿಗದಿಪಡಿಸಿದೆ.

ಅರ್ಕಾವತಿ ಬಡಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರ ಆಗಸ್ಟ್‌ 23ರಂದು ನಿವೃತ್ತ ನ್ಯಾ. ಕೆಂಪಣ್ಣ ಅವರ ಆಯೋಗವು ವರದಿ ಸಲ್ಲಿಸಿದೆ. ತನಿಖಾ ಆಯೋಗದ ಕಾಯಿದೆ 1952ರ ಸೆಕ್ಷನ್‌ 3 (4) ಪ್ರಕಾರ ವರದಿ ಸಲ್ಲಿಸಿದ ಆರು ತಿಂಗಳ ಒಳಗೆ ರಾಜ್ಯ ಸರ್ಕಾರವು ವರದಿ ಮತ್ತು ಆ ಸಂಬಂಧ ಕೈಗೊಂಡಿರುವ ಕ್ರಮದ ಕುರಿತ ಮಾಹಿತಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಬೇಕು. ಆದರೆ, ಈ ಪ್ರಕರಣದಲ್ಲಿ ಆಯೋಗವು ವರದಿ ಸಲ್ಲಿಸಿ ನಾಲ್ಕು ವರ್ಷಗಳಾದರೂ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

“ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸುವ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡಲಾಗದು ಎಂಬ ನಿರ್ಧಾರಕ್ಕೆ ನ್ಯಾಯಾಲಯ ಬಂದರೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ತನಿಖೆಗೆ ಆದೇಶಿಸಬೇಕು” ಎಂದು ಸಿಪಿಸಿಯು ನ್ಯಾಯಾಲಯಕ್ಕೆ ಮನವಿ ಮಾಡಿದೆ.

Also Read
ಭ್ರಷ್ಟಾಚಾರ ಪ್ರಕರಣ: ಬಿಎಸ್‌ವೈ, ಪುತ್ರ ವಿಜಯೇಂದ್ರ ಒಳಗೊಂಡು ಒಂಭತ್ತು ಮಂದಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಕರ್ನಾಟಕ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಆದೇಶಗಳನ್ನು ಉಲ್ಲಂಘಿಸಿ 2015ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 541 ಎಕರೆ ಜಮೀನನ್ನು ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫೈ ಮಾಡಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾ. ಎಚ್‌ ಎಸ್‌ ಕೆಂಪಣ್ಣ ಅವರ ಆಯೋಗವನ್ನು ತನಿಖೆಗಾಗಿ ನೇಮಿಸಲಾಗಿತ್ತು. ಅಂದಿನ ಸರ್ಕಾರವು ತಾನು ನ್ಯಾಯಾಲಯಗಳ ತೀರ್ಪುಗಳಿಗೆ ಒಳಪಟ್ಟಂತೆ ರೀಡು (Re-do) ಮಾತ್ರವೇ ಮಾಡಿರುವುದಾಗಿ ಸಮಜಾಯಿಷಿ ನೀಡಿತ್ತು. 2004ರ ಅಂತಿಮ ಅಧಿಸೂಚನೆಯಿಂದ ಇಲ್ಲಿಯವರೆಗೆ ಡಿನೋಟಿಫಿಕೇಶನ್‌ ಮಾಡಲಾಗಿರುವ ಆದೇಶಗಳನ್ನು ಒಳಗೊಂಡು ತನಿಖೆ ನಡೆಸಬೇಕು ಎಂದು ಆಯೋಗಕ್ಕೆ ವಿಚಾರಣಾ ವ್ಯಾಪ್ತಿ ನಿಗದಿಗೊಳಿಸಲಾಗಿತ್ತು.

ಅಂತಿಮ ಅಧಿಸೂಚನೆಯಿಂದ ಹೊರಗಿಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 2006, 2007, 2011 ಮತ್ತು 2013 ರಲ್ಲಿ ಅಂಗೀಕರಿಸಲಾದ ವಿವಿಧ ನಿರ್ಣಯಗಳು ಕಾನೂನುಬದ್ಧವಾಗಿದೆಯೇ, ಜೂನ್ 18, 2014 ರಂದು ಗೆಜೆಟ್‌ ಹೊರಡಿಸಲಾದ ಅರ್ಕಾವತಿ ಬಡಾವಣೆಯ ಮರು-ಮಾರ್ಪಡಿಸಿದ ಯೋಜನೆಯು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿದೆಯೇ ಎಂಬುದರ ತನಿಖೆಯನ್ನು ಆಯೋಗವು ಮಾಡಬೇಕಿತ್ತು.

Related Stories

No stories found.
Kannada Bar & Bench
kannada.barandbench.com