ಬಿಜೆಪಿ ನಾಯಕ ತಜಿಂದರ್ ಬಗ್ಗಾ ಅವರನ್ನು ಬಂಧಿಸಿದ್ದ ಪಂಜಾಬ್‌ನ 12 ಪೊಲೀಸರನ್ನು ಹರಿಯಾಣ ಪೊಲೀಸರು ಕುರುಕ್ಷೇತ್ರದಲ್ಲಿ ಸೆರೆ ಹಿಡಿದಿದ್ದಾರೆ ಎಂದು ಆರೋಪಿಸಿ ಹರಿಯಾಣ ಸರ್ಕಾರದ ವಿರುದ್ಧ ಪಂಜಾಬ್ ಸರ್ಕಾರವು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ಸಲ್ಲಿಸಿದೆ.
ಪ್ರಕರಣವನ್ನು ನ್ಯಾ. ಲಲಿತ್ ಬಾತ್ರಾ ಅವರೆದುರು ಪಟ್ಟಿ ಮಾಡಲಾಗಿದ್ದು ಅವರು ಹರಿಯಾಣ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದರು.
ದೆಹಲಿ ಬಿಜೆಪಿ ಮುಖಂಡ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದರು. ಬಗ್ಗಾ ಅವರನ್ನು ಮೊಹಾಲಿಯತ್ತ ಕರೆದೊಯ್ಯುತ್ತಿದ್ದ ವೇಳೆ ಹರಿಯಾಣ ಪೊಲೀಸರು ಪಂಜಾಬ್ ಪೊಲೀಸರನ್ನು ಸೆರೆ ಹಿಡಿದಿದ್ದರು.
ʼದಿ ಕಾಶ್ಮೀರ್ ಫೈಲ್ಸ್ʼ ಚಲನಚಿತ್ರವನ್ನು ಫೇಕ್ ಸಿನಿಮಾ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಣ್ಣಿಸಿದ್ದರು. ಇದನ್ನು ವಿರೋಧಿಸಿದ್ದಕ್ಕೆ ಬಗ್ಗಾ ಅವರನ್ನು ಬಂಧಿಸಲಾಗಿದೆ ಎಂದು ಬಗ್ಗಾ ಕುಟುಂಬ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದರು.
ಮಗನ ಅಪಹರಣವಾಗಿದೆ ಎಂದು ಬಗ್ಗಾ ಅವರ ತಂದೆ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಹರಿಯಾಣ ಪೊಲೀಸರು ಕ್ರಮ ಕೈಗೊಂಡಿದ್ದರು. ಪಂಜಾಬ್ ಪೊಲೀಸ್ ತಂಡವನ್ನು ಕುರುಕ್ಷೇತ್ರದ ಹೆದ್ದಾರಿಯಲ್ಲಿ ತಡೆದ ಹರಿಯಾಣ ಪೊಲೀಸರು ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಬಳಿಕ ಬಗ್ಗಾ ಅವರನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.
ಹನ್ನೆರಡು ಮಂದಿ ಪಂಜಾಬ್ ಪೊಲೀಸ್ ಅಧಿಕಾರಿಗಳನ್ನು ಅಕ್ರಮವಾಗಿ ಬಂಧಿಸಲಾಗಿದ್ದು ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಅಡ್ವೊಕೇಟ್ ಜನರಲ್ ಅನ್‌ಮೋಲ್ ರತ್ತನ್ ಸಿಧು ನ್ಯಾಯಾಲಯವನ್ನು ಕೋರಿದರು. ಪ್ರಕರಣದ ವಿಚಾರಣೆ ಇಂದು ನಡೆಯಲಿದೆ.