ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಇರಲಿ; ಕುಟುಂಬದ ಜೊತೆ ಕಾಲ ಕಳೆಯಿರಿ: ನ್ಯಾಯಾಧೀಶರಿಗೆ ಸಿಜೆಐ ಕಿವಿಮಾತು

ಹೈದರಾಬಾದ್‌ನ ಗಛ್ಛಿಬೌಲಿಯಲ್ಲಿ ಶುಕ್ರವಾರ ನಡೆದ ತೆಲಂಗಾಣ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಉದ್ಘಾಟನಾ ಸಮಾವೇಶದಲ್ಲಿ ಸಿಜೆಐ ಎನ್‌ ವಿ ರಮಣ ಮಾತನಾಡಿದರು.
CJI NV Ramana
CJI NV Ramana

“ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಿ. ಕುಟುಂಬದ ಬಗ್ಗೆ ನಿಗಾ ಇರಲಿ. ಪತ್ನಿ ಮತ್ತು ಮಕ್ಕಳ ಜೊತೆ ಕಾಲ ಕಳೆಯಿರಿ. ನೀವು ಸಮತೋಲದಿಂದ ಇರಲು ಪ್ರತಿದಿನ ಸಮಯ ಮೀಸಲಿಟ್ಟುಕೊಳ್ಳಬೇಕು” ಎಂದು ನ್ಯಾಯಿಕ ಅಧಿಕಾರಿಗಳು ಹಾಗೂ ನ್ಯಾಯಾಧೀಶರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಸಲಹೆ ನೀಡಿದ್ದಾರೆ.

ಹೈದರಾಬಾದ್‌ನ ಗಛ್ಛಿಬೌಲಿಯಲ್ಲಿ ಶುಕ್ರವಾರ ನಡೆದ ತೆಲಂಗಾಣ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

“ನಿಮ್ಮ ಆರ್ಥಿಕ ಸಂಕಷ್ಟದ ಬಗ್ಗೆ ನನಗೆ ತಿಳಿದಿದೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತವಾದಾಗ ನೀವು ಅತ್ಯುತ್ತಮವಾಗಿ ಕೆಲಸ ಮಾಡುತ್ತೀರಿ. ವೇತನಕ್ಕೆ ಸಂಬಂಧಿಸಿದ ವಿಚಾರವನ್ನು ನಾನು ವೇತನ ಆಯೋಗದ ಜೊತೆ ಚರ್ಚಿಸುತ್ತೇನೆ ಎಂಬ ಭರವಸೆ ನೀಡುತ್ತಿದ್ದು, ಈ ವಿಚಾರದಲ್ಲಿ ನಾವು ಶೀಘ್ರದಲ್ಲೇ ಶುಭ ಸುದ್ದಿ ಕೇಳಲಿದ್ದೇವೆ” ಎಂದರು.

“ಯಾವುದೇ ಅಳುಕಿಲ್ಲದೇ ನಿಮ್ಮ ನ್ಯಾಯಾಂಗ ಕರ್ತವ್ಯ ಮಾಡಿ. ನ್ಯಾಯಾಧೀಶರ ಮೇಲಿನ ದೈಹಿಕ ಹಲ್ಲೆಗಳ ಬಗ್ಗೆ ನನಗೆ ತಿಳಿದಿದ್ದು, ಇದನ್ನು ಸುಧಾರಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇನೆ. ನ್ಯಾಯಾಲಯದ ಕೊಠಡಿಯ ಹೊರಗೆ ಮತ್ತು ಒಳಗೆ ನ್ಯಾಯಮೂರ್ತಿಗಳಿಗೆ ಭದ್ರತೆ ಹೆಚ್ಚಿಸುವುದರ ಕುರಿತು ಈಗಾಗಲೇ ನಿರ್ದೇಶನಗಳನ್ನು ನೀಡಲಾಗಿದೆ” ಎಂದರು.

“ದಾವೆದಾರರು ಭಾರಿ ಒತ್ತಡಕ್ಕೆ ಸಿಲುಕುತ್ತಿದ್ದು, ಅವರಲ್ಲಿ ನಿರಾಳ ಭಾವ ಮೂಡಿಸಲು ಯತ್ನಿಸಬೇಕು. ಯಾವುದೇ ವಿವಾದಗಳಲ್ಲಿನ ಮಾನವೀಯ ಅಂಶವನ್ನು ಗಮನದಲ್ಲಿರಿಸಿಕೊಳ್ಳಿ. ಕಾನೂನು ಎನ್ನುವುದು ಸಮತೆಯಿಂದ ದೂರ ಇರುವುದಿಲ್ಲ. ನಿಮ್ಮ ಮಿತಿಯಲ್ಲಿ ವಿವೇಚನೆಯಿಂದ ನ್ಯಾಯಾಂಗದ ಮಾನವೀಯ ಮುಖವನ್ನು ತೋರುವುದು ಅತ್ಯಂತ ಮುಖ್ಯ. ಅಸಹಾಯಕ ಪಕ್ಷಕಾರರು, ಅಪ್ತಾಪ್ತ ಮಕ್ಕಳು ಇತ್ಯಾದಿ ಮಂದಿಯಲ್ಲಿ ನೀವು ಅರಿವು ಮೂಡಿಸಬೇಕು” ಎಂದು ನ್ಯಾಯಾಂಗದ ಅಧಿಕಾರಿಗಳಿಗೆ ಸಲಹೆ ನೀಡಿದರು.

Related Stories

No stories found.
Kannada Bar & Bench
kannada.barandbench.com