ಸರ್ಕಾರ ಪ್ರಕಟಿಸಿರುವ ಅಂಬೇಡ್ಕರ್, ಪುಲೆ ಕೃತಿಗಳು ಜನರಿಗೆ ತಲುಪುವಂತೆ ನೋಡಿಕೊಳ್ಳಿ: ಬಾಂಬೆ ಹೈಕೋರ್ಟ್

ಡಾ.ಬಿ.ಆರ್. ಅಂಬೇಡ್ಕರ್ ಮತ್ತಿತರ ಸಾಮಾಜಿಕ ಹೋರಾಟಗಾರರ ಕುರಿತು ಪ್ರಕಟವಾದ ಪುಸ್ತಕಗಳನ್ನು ಪ್ರಚಾರ ಮಾಡಲು ಮಹಾರಾಷ್ಟ್ರ ಸರ್ಕಾರ ಮಾಡಿದ ಕೆಲಸ ಕಡಿಮೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.
ಸರ್ಕಾರ ಪ್ರಕಟಿಸಿರುವ ಅಂಬೇಡ್ಕರ್, ಪುಲೆ ಕೃತಿಗಳು ಜನರಿಗೆ ತಲುಪುವಂತೆ ನೋಡಿಕೊಳ್ಳಿ: ಬಾಂಬೆ ಹೈಕೋರ್ಟ್
A1

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಸಮಾಜ ಸುಧಾರಕರಾದ ಶಾಹು ಮಹಾರಾಜ್, ಮಹಾತ್ಮ ಜ್ಯೋತಿಬಾ ಫುಲೆ ಅವರ ಬಗ್ಗೆ ರಾಜ್ಯ ಸರ್ಕಾರ ಪ್ರಕಟಿಸಿದ ಕೃತಿಗಳನ್ನು ಜನರಿಗೆ ತಲುಪಿಸಲು ಮಹಾರಾಷ್ಟ್ರ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.

ಈ ರೀತಿಯ ಸಾಹಿತ್ಯ ಪ್ರಕಟಿಸಲು ಮತ್ತು ಈಗಾಗಲೇ ಪ್ರಕಟಿಸಿದ ಪುಸ್ತಕಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಸರ್ಕಾರ ಮಾಡಿದ ಕೆಲಸ ಅಲ್ಪಮಟ್ಟದ್ದು ಎಂದು ನ್ಯಾಯಮೂರ್ತಿಗಳಾದ ಪ್ರಸನ್ನ ವರಾಳೆ ಮತ್ತು ಕಿಶೋರ್ ಸಂತ ಅವರಿದ್ದ ವಿಭಾಗೀಯ ಪೀಠ ಬೇಸರ ವ್ಯಕ್ತಪಡಿಸಿತು.

Also Read
[ಅಂಬೇಡ್ಕರ್‌ ವಿವಾದ] ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ವರ್ಗಾವಣೆ

ಪುಸ್ತಕಗಳ ಸೂಕ್ತ ಪ್ರದರ್ಶನಕ್ಕೆ ಕಾಳಜಿ ವಹಿಸುತ್ತಿಲ್ಲ. ಮುಂಬೈನಲ್ಲಿ ಸರ್ಕಾರಿ ಪ್ರಕಾಶನಾಲಯಗಳು ಎಲ್ಲಿವೆ? ಹಿಂದಿನ ದಿನಗಳಲ್ಲಿ, ಓದುಗರು ಪುಸ್ತಕ ಖರೀದಿಸಲು ಬರುತ್ತಿದ್ದರು, ಈಗ ಪ್ರಕಾಶಕರು ಓದುಗರ ಬಳಿ ಬರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಸೆಳೆಯಲು ಸರ್ಕಾರ ಹೆಚ್ಚು ಸಕಾರಾತ್ಮಕ ಪ್ರಯತ್ನಗಳನ್ನು ಮಾಡಬೇಕು, ಆ ನಿಟ್ಟಿನಲ್ಲಿ ದೃಢ ಹೆಜ್ಜೆ ಇರಿಸಬೇಕು ಎಂದು ನ್ಯಾಯಾಲಯ ತಿಳಿಸಿತು.

ಸರ್ಕಾರ ಪ್ರಕಟಿಸುತ್ತಿರುವ ಇಂತಹ ಹಲವು ಸಂಪುಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವಿಲ್ಲ ಎಂದ ನ್ಯಾಯಾಲಯ "ಸಮಾಜ ಸುಧಾರಕರ ಎಲ್ಲಾ ಕೃತಿಗಳನ್ನು ಪ್ರಕಟಿಸಲಾಗಿದೆಯೇ ಪ್ರಕಟಿತ ಪುಸ್ತಕಗಳ ಪ್ರತಿ ಹಾಳಾಗದಂತೆ ರಕ್ಷಿಸಿಡಲಾಗಿದೆಯೇ ಎಂಬುದನ್ನು ತಿಳಿಯಬೇಕಿದೆ. ಪುಸ್ತಕಗಳ ನಿರೀಕ್ಷೆಯಲ್ಲಿರುವವರಿಗೆ ಅವುಗಳನ್ನು ತಲುಪಿಸಬೇಕಿದೆ" ಎಂದಿತು. ಅಲ್ಲದೆ ಪುಸ್ತಕ ಪ್ರಕಟಣಾ ಸಮಿತಿಯ ಸದಸ್ಯರ ವಿವರಗಳನ್ನು ಸಲ್ಲಿಸದೇ ಇರುವುದನ್ನು ಗಮನಿಸಿದ ಪೀಠ ಇನ್ನೆರಡು ವಾರಗಳಲ್ಲಿ ಹೊಸ ಅಫಿಡವಿಟ್‌ ಸಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಿತು.

Related Stories

No stories found.
Kannada Bar & Bench
kannada.barandbench.com