ಗೋಶಾಲೆ ನಿರ್ಮಿಸಲು ಕ್ರಮ ಕೈಗೊಳ್ಳಿ: ರಾಜ್ಯಕ್ಕೆ ಹೈಕೋರ್ಟ್‌ ಸೂಚನೆ; ಸ್ಥಿತಿಗತಿ ವರದಿ ಸಲ್ಲಿಕೆಗೆ ನಿರ್ದೇಶನ

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆಯ ಸೆಕ್ಷನ್‌ 19ರ ಅನ್ವಯ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಎಂದು ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಕೋರಿದೆ.
ಗೋಶಾಲೆ ನಿರ್ಮಿಸಲು ಕ್ರಮ ಕೈಗೊಳ್ಳಿ: ರಾಜ್ಯಕ್ಕೆ ಹೈಕೋರ್ಟ್‌ ಸೂಚನೆ; ಸ್ಥಿತಿಗತಿ ವರದಿ ಸಲ್ಲಿಕೆಗೆ ನಿರ್ದೇಶನ

“ಗೋಶಾಲೆ ನಿರ್ಮಿಸಲು ಸ್ಥಳ ಪತ್ತೆ ಮಾಡಿ, ಅನುದಾನ ಹಂಚಿಕೆ ಮಾಡಿದ್ದೀರಿ ಅಷ್ಟೆ. ಆದರೆ, ವಾಸ್ತವದಲ್ಲಿ ಬಿಡಾಡಿ ದನಗಳಿಗಾಗಿ ಯಾವುದೇ ಗೋಶಾಲೆ ನಿರ್ಮಿಸಲಾಗಿಲ್ಲ ಅಥವಾ ಅದನ್ನು ನಿರ್ಮಾಣ ಮಾಡುವ ಯಾವುದೇ ಪ್ರಯತ್ನವಾಗಿಲ್ಲ. ಗೊತ್ತು ಮಾಡಲಾದ ಈ ಸ್ಥಳಗಳಲ್ಲಿ ಎಷ್ಟು ಗೋಶಾಲೆಗಳನ್ನು ನಿರ್ಮಿಸಲಾಗಿದೆ” ಎಂಬ ಮಾಹಿತಿ ಒಳಗೊಂಡ ಸ್ಥಿತಿಗತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆಯ ಸೆಕ್ಷನ್‌ 19ರ ಅನ್ವಯ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಹಾಗೂ ಈಗಾಗಲೇ ಇರುವ ಗೋಶಾಲೆಗಳಿಗೆ ಸೂಕ್ತ ಪ್ರಮಾಣದಲ್ಲಿ ಮೇವು, ನೀರು ಮತ್ತು ಜಾಗ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

Also Read
ಗೋಹತ್ಯೆ ನಿಷೇಧ ಕಾಯಿದೆ ಜಾರಿಗೊಳಿಸಬೇಕಾದರೆ ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಬೇಕು: ಕರ್ನಾಟಕ ಹೈಕೋರ್ಟ್‌

“ಗೋಶಾಲೆ ನಿರ್ಮಿಸಿರುವುದಕ್ಕೆ ಸಂಬಂಧಿಸಿದಂತೆ ಅನುಪಾಲನಾ ಅಫಿಡವಿಟ್‌ ಅಥವಾ ನಮಗೆ ನೀಡಲಾಗಿರುವ ದಾಖಲೆಗಳ ಬಗ್ಗೆ ನಮಗೆ ಸಮಾಧಾನವಿಲ್ಲ. ಮಾರ್ಚ್‌ 25ರಂದು ಸಲ್ಲಿಸಲಾಗಿರುವ ಅನುಪಾಲನಾ ವರದಿಗೆ ಅನುಗುಣವಾಗಿ ಗೋಶಾಲೆ ನಿರ್ಮಿಸಲು ಸೂಕ್ತ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ. ಮುಂದಿನ ವಿಚಾರಣೆಯ ವೇಳೆಗೆ ರಾಜ್ಯ ಸರ್ಕಾರವು ಸ್ಥಿತಿಗತಿ ವರದಿ ಸಲ್ಲಿಸಬೇಕು” ಎಂದು ಪೀಠ ಆದೇಶದಲ್ಲಿ ಹೇಳಿದೆ.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ನಿರ್ಮಿಸಲು ಸ್ಥಳ ಪತ್ತೆ ಮಾಡಲಾಗಿದ್ದು, ಇದಕ್ಕಾಗಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಸರ್ಕಾರದ ವಕೀಲರು ಹೇಳಿದ್ದಾರೆ. ಆದರೆ, ಯಾವುದಾದರೂ ಜಿಲ್ಲೆಯಲ್ಲಿ ಗೋಶಾಲೆ ತೆರೆಯಲಾಗಿದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ದಾಖಲೆಯನ್ನು ಪ್ರಸ್ತುತಪಡಿಸಿಲ್ಲ ಎಂದಿರುವ ಪೀಠವು ಜೂನ್‌ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿದೆ.

Kannada Bar & Bench
kannada.barandbench.com