ತಾಯಿಗೆ ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸ; ಪತ್ನಿಯ ಜೀವನಾಂಶ ಹೆಚ್ಚಿಸಿ ಆದೇಶ ನೀಡಿದ ಹೈಕೋರ್ಟ್‌

ಪ್ರತಿವಾದಿಯಾಗಿರುವ ಪತಿಯು ಮಕ್ಕಳನ್ನು ನೋಡಿಕೊಳ್ಳಲು ಪತ್ನಿ ದುಡಿಯಬಹುದು. ಆದರೆ ಸುಮ್ಮನೆ ಸೋಮಾರಿಯಂತೆ ಓಡಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಒಪ್ಪಲಾಗದು, ಕಾನೂನಿನ ಪ್ರಕಾರ ಅವರು ಜೀವನಾಂಶ ನೀಡಲೇಬೇಕು ಎಂದು ಹೇಳಿದ ನ್ಯಾಯಾಲಯ.
Justice M Nagaprasanna
Justice M Nagaprasanna

ತಾಯಿಗೆ ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸ ಎಂದಿರುವ ಕರ್ನಾಟಕ ಹೈಕೋರ್ಟ್‌, ಪತ್ನಿ ಅರ್ಹತೆ ಹೊಂದಿದ್ದರೂ ದುಡಿದು ಬದುಕುತ್ತಿಲ್ಲ. ಬದಲಾಗಿ ಜೀವನಾಂಶದ ಹಣದಲ್ಲಿ ಜೀವನ ಸಾಗಿಸಲು ಬಯಸುತ್ತಿದ್ದಾರೆ ಎಂಬ ಪತಿಯ ವಾದವನ್ನು ತಳ್ಳಿಹಾಕಿದೆ.

ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ ₹18 ಸಾವಿರ ಜೀವನಾಂಶವನ್ನು ₹36 ಸಾವಿರಕ್ಕೆ ಹೆಚ್ಚಳ ಮಾಡಬೇಕು ಎಂದು ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸ. ಪತಿ ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದು, ಪತ್ನಿಗೆ ಮಾಸಿಕ ₹36 ಸಾವಿರ ಜೀವನಾಂಶ ಪಾವತಿಸಬೇಕು ಎಂದಿದೆ.

ಪತಿಯಾದವರು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದು ಖಾಸಗಿ ಉದ್ಯೋಗದಂತೆ ಯಾವಾಗ ಬೇಕಾದರೂ ತೆಗೆದು ಹಾಕುವಂಥ ಉದ್ಯೋಗವಲ್ಲ. ನಿಗದಿತ ವಯಸ್ಸಿನವರೆಗೆ ಭದ್ರತೆ ಇರುವ ಉದ್ಯೋಗ. ಪತಿಯು ಸದ್ಯ ಸುಮಾರು ₹90 ಸಾವಿರ ವೇತನ ಪಡೆಯುತ್ತಿದ್ದಾರೆ. ಹೀಗಾಗಿ, ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಪತ್ನಿಗೆ ₹36 ಸಾವಿರ ಜೀವನಾಂಶ ನೀಡಬೇಕು ಎಂದು ಪೀಠ ತಿಳಿಸಿದೆ.

ಪತ್ನಿ ಜೀವನಾಂಶ ಕೇಳಿದ್ದಕ್ಕೆ ಪ್ರತಿಯಾಗಿ ಪತಿಯಾದವರು, ಪತ್ನಿ ಉದ್ಯೋಗ ಮಾಡಲು ಎಲ್ಲಾ ಅರ್ಹತೆ ಹೊಂದಿದ್ದಾರೆ. ದುಡಿದು ಜೀವನ ಮಾಡಬಹುದು. ಅದರ ಬದಲು ಪತಿಯ ಜೀವನಾಂಶದಲ್ಲೇ ಜೀವನ ನಡೆಸಲು ಬಯಸುತ್ತಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸವಲ್ಲ ಎಂದು ಹೇಳಿದ್ದಾರೆ. ಆ ವಾದವನ್ನು ಒಪ್ಪಲಾಗದು, ಅಂತಹ ಹೇಳಿಕೆಗಳ ಮೂಲಕ ನ್ಯಾಯಾಲಯದ ಹಾದಿ ತಪ್ಪಿಸಬಾರದು ಎಂದು ಪೀಠ ತಿಳಿಸಿದೆ.

ಪ್ರತಿವಾದಿಯಾಗಿರುವ ಪತಿಯು ಮಕ್ಕಳನ್ನು ನೋಡಿಕೊಳ್ಳಲು ಪತ್ನಿ ದುಡಿಯಬಹುದು. ಆದರೆ ಸುಮ್ಮನೆ ಸೋಮಾರಿಯಂತೆ ಓಡಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಒಪ್ಪಲಾಗದು, ಕಾನೂನಿನ ಪ್ರಕಾರ ಅವರು ಜೀವನಾಂಶ ನೀಡಲೇಬೇಕು. ಅದರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: 2012ರಲ್ಲಿ ದಂಪತಿ ಮದುವೆಯಾಗಿದ್ದು, 11 ವರ್ಷ ಹಾಗೂ 6 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿ ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದಾರೆ. ಆಕೆ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೊದಲ ಮಗುವಾದ ನಂತರ ಉದ್ಯೋಗ ತ್ಯಜಿಸಿದ್ದರು. ಆ ನಂತರ ಮತ್ತೊಂದು ಮಗುವಾಯಿತು. ಹೀಗಾಗಿ ಅವರು ಕೆಲಸಕ್ಕೆ ಹೋಗುತ್ತಿರಲಿಲ್ಲ. ಎರಡು ಮಕ್ಕಳಾದ ನಂತರ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿ ದೂರವಾಗಿ, ವಿಚ್ಚೇದನ ಕೋರಿದ್ದರು. ಆ ಅರ್ಜಿ ಬಾಕಿ ಇರುವಾಗಲೇ ಪತ್ನಿ ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರಡಿ ಪ್ರತಿ ತಿಂಗಳು ₹36 ಸಾವಿರ ಮಧ್ಯಂತರ ಜೀವನಾಂಶ ಕೊಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವು ₹18 ಸಾವಿರ ಜೀವನಾಂಶ ನಿಗದಿ ಪಡಿಸಿ ಆ ಮೊತ್ತವನ್ನು ಪಾವತಿಸುವಂತೆ ಆದೇಶ ನೀಡಿತ್ತು. ಜೀವನಾಂಶ ಹೆಚ್ಚಳ ಮಾಡುವಂತೆ ಕೋರಿ ಪತ್ನಿ ಹೈಕೋರ್ಟ್ ಮೊರೆ ಹೋಗಿದ್ದರು.

Related Stories

No stories found.
Kannada Bar & Bench
kannada.barandbench.com