ಪೊಲೀಸರಿಂದ ಎಲ್‌ಜಿಬಿಟಿ ಸಮುದಾಯಕ್ಕೆ ಕಿರುಕುಳ ತಪ್ಪಿಸಲು ತಮಿಳುನಾಡು ಸರ್ಕಾರದಿಂದ ನೂತನ ನಿಯಮ

ಯಾವುದೇ ಪೊಲೀಸ್‌ ಅಧಿಕಾರಿಯು ಎಲ್‌ಜಿಬಿಟಿಕ್ಯುಐಎ+ ಸಮುದಾಯದ ಹಾಗೂ ಈ ಸಮುದಾಯದ ಏಳಿಗೆಗಾಗಿ ಕೆಲಸ ಮಾಡುತ್ತಿರುವ ಯಾವುದೇ ವ್ಯಕ್ತಿಗೆ ಕಿರುಕುಳ ನೀಡುವಂತಹ ಯಾವುದೇ ಕ್ರಿಯೆಯಲ್ಲಿ ತೊಡಗಬಾರದು ಎನ್ನುತ್ತದೆ ನೂತನ ನಿಯಮ.
ಪೊಲೀಸರಿಂದ ಎಲ್‌ಜಿಬಿಟಿ ಸಮುದಾಯಕ್ಕೆ ಕಿರುಕುಳ ತಪ್ಪಿಸಲು ತಮಿಳುನಾಡು ಸರ್ಕಾರದಿಂದ ನೂತನ ನಿಯಮ

LGBTQIA+

ಪೊಲೀಸ್‌ ಅಧಿಕಾರಿಗಳು ಎಲ್‌ಜಿಬಿಟಿಕ್ಯುಐಎ+ ಸಮುದಾಯಕ್ಕೆ ಕಿರುಕುಳ ನೀಡುವುದನ್ನು ನಿಷೇಧಿಸಿ ಪೊಲೀಸ್‌ ಅಧಿಕಾರಿಗಳ ನಡತೆ ನಿಯಮಾವಳಿಗೆ ತಮಿಳುನಾಡು ಸರ್ಕಾರವು ಇತ್ತೀಚೆಗೆ ತಿದ್ದುಪಡಿ ತಂದಿದೆ. ಕಳೆದ ವರ್ಷ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಆದೇಶವೊಂದರ ಅನ್ವಯ ಸರ್ಕಾರವು ಈ ಹೆಜ್ಜೆ ಇರಿಸಿದೆ.

ಎಲ್‌ಜಿಬಿಟಿಕ್ಯುಐಎ+ ಸಮುದಾಯದೆಡೆಗೆ (ಸಲಿಂಗಿ, ದ್ವಿಲಿಂಗಿ, ತೃತೀಯ ಲಿಂಗಿ ಮುಂತಾದ ವಿಭಿನ್ನ ಲೈಂಗಿಕತೆಯ ಸಮುದಾಯ) ಸಮಾಜವು ಹೆಚ್ಚು ಸಂವೇದನಾಶೀಲವಾಗಬೇಕಾದ ಅಗತ್ಯವನ್ನು ಮದ್ರಾಸ್‌ ಹೈಕೋರ್ಟ್‌ ತನ್ನ ಈ ಹಿಂದಿನ ಆದೇಶದಲ್ಲಿ ಹೇಳಿತ್ತು. ಪೊಲೀಸ್‌ ಅಧಿಕಾರಿಗಳಿಂದ ಈ ಸಮುದಾಯಕ್ಕೆ ಅನಗತ್ಯ ಕಿರುಕುಳವಾಗದಂತೆ ಜಾಗೃತಿ ಮೂಡಿಸುವ ಅಗತ್ಯತೆಯ ಬಗ್ಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ 'ತಮಿಳುನಾಡು ಅಧೀನ ಪೊಲೀಸ್‌ ಅಧಿಕಾರಿಗಳ ನಡತೆ ನಿಯಮ'ಗಳಿಗೆ ತಿದ್ದುಪಡಿಯನ್ನು ತಮಿಳುನಾಡು ಸರ್ಕಾರ ತಂದಿದೆ.

ಈ ತಿದ್ದುಪಡಿಯಡಿ ಸೇರಿಸಲಾಗಿರುವ ಹೊಸ ನಿಯಮವು ಹೀಗಿದೆ:

"24-C. ಯಾವುದೇ ಪೊಲೀಸ್‌ ಅಧಿಕಾರಿಯು ಎಲ್‌ಜಿಬಿಟಿಕ್ಯುಐಎ+ (ಸಲಿಂಗಿ, ದ್ವಿಲಿಂಗಿ, ತೃತೀಯಲಿಂಗಿ, ಇತರೆ ವಿಭಿನ್ನ ಲಿಂಗಿಗಳು) ಸಮುದಾಯದ ಹಾಗೂ ಈ ಸಮುದಾಯದ ಏಳಿಗೆಗಾಗಿ ಕೆಲಸ ಮಾಡುತ್ತಿರುವ ಯಾವುದೇ ವ್ಯಕ್ತಿಗೆ ಕಿರುಕುಳ ನೀಡುವಂತಹ ಯಾವುದೇ ಕ್ರಿಯೆಯಲ್ಲಿ ತೊಡಗಬಾರದು."

ಕಳೆದ ವರ್ಷ ಮದ್ರಾಸ್‌ ಹೈಕೋರ್ಟ್‌ನ ನ್ಯಾ. ಎನ್‌ ಆನಂದ್‌ ವೆಂಕಟೇಶ್‌ ಅವರು ಎಲ್‌ಜಿಬಿಟಿಕ್ಯುಐಎ ವ್ಯಕ್ತಿಗಳೆಡೆಗೆ ಸಮಾಜದಲ್ಲಿ ಆಳವಾಗಿ ಬೇರೂರಿರುವ ಪೂರ್ವಗ್ರಹ ಹೋಗಲಾಡಿಸಲು ಸತತ ಪ್ರಯತ್ನಗಳು ನಡೆಯಬೇಕಿದೆ ಎಂದು ತಮ್ಮ ಆದೇಶದಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳನ್ನು ಶ್ಲಾಘಿಸಿರುವ ಅವರು ಇದು ಇನ್ನೂ ಹೆಚ್ಚು ಮುಂದುವರಿಯಬೇಕು ಎಂದು ಒತ್ತಾಯಿಸಿದರು.

Related Stories

No stories found.
Kannada Bar & Bench
kannada.barandbench.com