ಆನ್‌ಲೈನ್‌ ಜೂಜು ನಿಷೇಧ: ತಮಿಳುನಾಡು ರಾಜ್ಯಪಾಲರಿಂದ ಸುಗ್ರೀವಾಜ್ಞೆ

ಕಂಪ್ಯೂಟರ್‌ ಅಥವಾ ಇನ್ನಾವುದೇ ಸಂವಹನ ಸಾಧನ ಅಥವಾ ಸಂಪನ್ಮೂಲ ಬಳಸಿ ಬಾಜಿ ಕಟ್ಟುವುದು ಅಥವಾ ಜೂಜಾಡುವುದನ್ನು ನಿಷೇಧಿಸಲಾಗಿದ್ದು ತಪ್ಪಿದಲ್ಲಿ ರೂ 5000 ದಂಡ ಮತ್ತು 6 ತಿಂಗಳ ಕಾಲ ಸೆರೆವಾಸ ಅನುಭವಿಸಬೇಕಾಗುತ್ತದೆ.
Governor of Tamil Nadu, Banwarilal Purohit
Governor of Tamil Nadu, Banwarilal PurohitIANS
Published on

ಆನ್‌ಲೈನ್‌ ಜೂಜಿನಿಂದಾಗಿ ತಮಿಳುನಾಡಿನಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಅವರು ಶುಕ್ರವಾರ ʼಆನ್‌ಲೈನ್‌ ಗೇಮಿಂಗ್‌ʼ ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

ರಾಜ ಭವನ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಆನ್‌ಲೈನ್ ಜೂಜಿನ ದುಷ್ಕೃತ್ಯಗಳಿಂದ ಮುಗ್ಧ ಜನರನ್ನು ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ 1930ರ ತಮಿಳುನಾಡು ಗೇಮಿಂಗ್ ಕಾಯಿದೆ, 1888ರ ಚೆನ್ನೈ ಸಿಟಿ ಪೊಲೀಸ್ ಕಾಯಿದೆ, 1859ರ ತಮಿಳುನಾಡು ಜಿಲ್ಲಾ ಪೊಲೀಸ್ ಕಾಯಿದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡುವ ಪ್ರಸ್ತಾಪ ಸಲ್ಲಿಸಿರುವುದಾಗಿ ತಿಳಿಸಿದೆ.

ಅಪರಾಧ ಸಾಬೀತಾದಲ್ಲಿ ರೂ 5,000 ರೂ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಬಾಜಿ (ಬೆಟಿಂಗ್) ಕಟ್ಟುವುದಕ್ಕೆ ಅಥವಾ ಜೂಜಿಗಾಗಿ ಹಣವನ್ನು ಇಲೆಕ್ಟ್ರಾನಿಕ್ ವರ್ಗಾವಣೆ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಅಲ್ಲದೆ ಜೂಜುಗೃಹಗಳನ್ನು ತೆರೆಯುವವರಿಗೆ ಅಥವಾ ಇರಿಸಿಕೊಂಡವರಿಗೆ ರೂ.10,000 ದಂಡ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಬಾಜಿ ಅಥವಾ ಜೂಜಿನಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆನ್‌ಲೈನ್‌ ಜೂಜು ನಿಷೇಧಿಸಲು ಸರ್ಕಾರ ಕಾನೂನು ಜಾರಿಗೆ ತರಲಿದೆ ಎಂದು ಮದ್ರಾಸ್‌ ಹೈಕೋರ್ಟ್‌ಗೆ ತಿಳಿಸಿದ ಕೆಲವೇ ದಿನಗಳಲ್ಲಿ ತಮಿಳುನಾಡು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಹೈಕೋರ್ಟಿನ ಮಧುರೈ ನ್ಯಾಯಪೀಠದಲ್ಲಿ ಈ ಸಂಬಂಧ ಎರಡು ಮೊಕದ್ದಮೆಗಳನ್ನು ಹೂಡಲಾಗಿದೆ. ಅವುಗಳಲ್ಲಿ ಒಂದು ಆನ್‌ಲೈನ್‌ ಜೂಜು ನಿಷೇಧಕ್ಕೆ ಸಂಬಂಧಿಸಿದ್ದಾಗಿದ್ದರೆ ಮತ್ತೊಂದು ಆ ಜೂಜುಗಳ ಪರ ಜಾಹೀರಾತು ನೀಡುತ್ತಿರುವ ಖ್ಯಾತನಾಮರ ವಿರುದ್ಧ ಇದೆ. ಕನ್ನಡಿಗರಾದ ಪ್ರಕಾಶ್‌ ರಾಜ್‌ ಹಾಗೂ ಸುದೀಪ್‌ ಸೇರಿದಂತೆ ಅನೇಕ ನಟರು, ಕ್ರೀಡಾಪಟುಗಳ ಹೆಸರನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

Kannada Bar & Bench
kannada.barandbench.com