ತೃತೀಯ ಲಿಂಗಿ ವ್ಯಕ್ತಿಗಳ ಕುರಿತು ನೀತಿ: ತಮಿಳುನಾಡು ಸರ್ಕಾರದ ಬೆನ್ನುತಟ್ಟಿದ ಮದ್ರಾಸ್ ಹೈಕೋರ್ಟ್

ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ನೀತಿಗೆ ಅಂತಿಮ ರೂಪು ನೀಡಲು ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಮಾಡಿದ ಮನವಿಯನ್ನು ನ್ಯಾಯಮೂರ್ತಿ ಆನಂದ ವೆಂಕಟೇಶ್ ಅವರಿದ್ದ ಪೀಠ ಪುರಸ್ಕರಿಸಿತು.
LGBTQ, Madras High Court
LGBTQ, Madras High Court

ತನ್ನ ಲಿಂಗ ಮತ್ತು ಲೈಂಗಿಕ ಅಲ್ಪಸಂಖ್ಯಾತ ನೀತಿ ಮೂಲಕ ತೃತೀಯಲಿಂಗಿಗಳು ಮತ್ತು ಎಲ್‌ಜಿಬಿಟಿಕ್ಯೂಐಎ + ಸಮುದಾಯಕ್ಕೆ ಸುರಕ್ಷಿತ ನೆಲೆ ಕಲ್ಪಿಸಲು ತಮಿಳುನಾಡು ಸರ್ಕಾರ ಮಾಡುತ್ತಿರುವ ಯತ್ನಗಳನ್ನು ಮದ್ರಾಸ್ ಹೈಕೋರ್ಟ್ ಈಚೆಗೆ ಶ್ಲಾಘಿಸಿದೆ.

ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ನೀತಿಗೆ ಅಂತಿಮ ರೂಪು ನೀಡಲು ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಮಾಡಿದ ಮನವಿಯನ್ನು ನ್ಯಾಯಮೂರ್ತಿ ಆನಂದ ವೆಂಕಟೇಶ್ ಅವರಿದ್ದ ಪೀಠ ಪುರಸ್ಕರಿಸಿತು.

ದೇಶದ ಉಳಿದ ಭಾಗಗಳಿಗೆ ಹೋಲಿಸಿದರೆ ಸಂಪ್ರದಾಯವಾದಿ ರಾಜ್ಯವೆಂದು ಕರೆಸಿಕೊಳ್ಳುವ ತಮಿಳುನಾಡು ಈ ನೀತಿ ಮೂಲಕ ಹೊಸ ಮಾರ್ಗ ಹಾಕಿಕೊಟ್ಟಿರುವುದು ಶ್ಲಾಘನೀಯ ಎಂದು ನ್ಯಾಯಮೂರ್ತಿಗಳು ಹೇಳಿದರು.

"ಸರ್ಕಾರ ಮೂರು ತಿಂಗಳೊಳಗೆ ನೀತಿ ಅಂತಿಮಗೊಳಿಸುತ್ತದೆ ಎಂದು ನ್ಯಾಯಾಲಯಕ್ಕೆ ವಿಶ್ವಾಸವಿದೆ. ಇದು ಕಾರ್ಯರೂಪಕ್ಕೆ ಬಂದರೆ ಇಡೀ ದೇಶಕ್ಕೆ ಮಾದರಿಯಾದಂತಾಗುತ್ತದೆ. ಜೊತೆಗೆ ಈ ಕಾರ್ಯ ಎಲ್‌ಜಿಬಿಟಿಕ್ಯೂಐಎ + ಸಮುದಾಯಕ್ಕೆ ಆಶಾದಾಯಕವಾಗಲಿದ್ದು ದೇಶದ ಉಳಿದ ಭಾಗಗಳಿಗೆ ಹೋಲಿಸಿದರೆ ಸಂಪ್ರದಾಯವಾದಿ ರಾಜ್ಯವೆಂದು ಕರೆಸಿಕೊಳ್ಳುವ ತಮಿಳುನಾಡು ಈ ಕಾರ್ಯಕ್ಕೆ ಮುಂದಾಗಿರುವುದು ಅಚ್ಚರಿಯ ಸಂಗತಿ" ಎಂದು ನ್ಯಾಯಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ.

ಇದೇ ವೇಳೆ, ಭಾರತೀಯ ವೈದ್ಯಕೀಯ ಮಂಡಳಿ (ವೃತ್ತಿಪರ ನಡವಳಿಕೆ, ಶಿಷ್ಟಾಚಾರ ಮತ್ತು ನೈತಿಕತೆ) ನಿಯಮಾವಳಿಯಡಿ ಲಿಂಗ ಪರಿವರ್ತನೆ ಚಿಕಿತ್ಸೆ ವೃತ್ತಿಪರ ದುರ್ನಡತೆ ರೂಪಿಸುತ್ತದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಸೆಪ್ಟೆಂಬರ್ 2002ರಲ್ಲಿ ಸೂಚಿಸಿದ್ದರೂ, ಅಂತಹ ಬದಲಾವಣೆಯು ವಿಜ್ಞಾನ ಮತ್ತು ಮನೋ ವೈದ್ಯಶಾಸ್ತ್ರ ವಿಧಿ ವಿಜ್ಞಾನ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಪ್ರತಿಫಲಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದ್ದರಿಂದ, ಮೂರು ತಿಂಗಳೊಳಗೆ ಅಂತಹ ಬದಲಾವಣೆ ಆಗಿರುವಂತೆ ನೋಡಿಕೊಂಡು ಪಠ್ಯಕ್ರಮ ಪರಿಷ್ಕರಿಸಲು ಆಯೋಗಕ್ಕೆ ನಿರ್ದೇಶನ ನೀಡಿದೆ.

ಸಲಿಂಗ ಜೋಡಿಯೊಂದು ಪೊಲೀಸ್ ರಕ್ಷಣೆ ಕೋರಿ 2022ರಲ್ಲಿ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸಂಗತಿಗಳನ್ನು ತಿಳಿಸಿದೆ. ಈ ಮನವಿಯ ವ್ಯಾಪ್ತಿಯನ್ನು ಅದೇ ವರ್ಷ ವಿಸ್ತರಿಸಿದ್ದ ನ್ಯಾ. ವೆಂಕಟೇಶ್‌ ಅವರು ನೀತಿ ಬದಲಾವಣೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕೇಂದ್ರ ಸರ್ಕಾರಕ್ಕೆ ವಿವಿಧ ನಿರ್ದೇಶನಗಳನ್ನು ನೀಡಿದ್ದರು.

Kannada Bar & Bench
kannada.barandbench.com