ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷಮೆಯಾಚಿಸಿದರೆ ಪ್ರಕರಣ ಹಿಂಪಡೆಯಲಾಗುವುದು: ತಮಿಳುನಾಡು ಸರ್ಕಾರ

ಕರಂದ್ಲಾಜೆ ಅವರು ಪತ್ರಿಕಾಗೋಷ್ಠಿ ನಡೆಸಲು ಸಿದ್ಧರಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸೂಚನೆಗಳನ್ನು ಪಡೆಯಲು ಸಂಸದೆ ಪರ ವಕೀಲರಿಗೆ ಹೈಕೋರ್ಟ್ ಹತ್ತು ದಿನಗಳ ಕಾಲಾವಕಾಶ ನೀಡಿತು.
Shobha Karandlaje, Madras High CourtShobha Karandlaje
Shobha Karandlaje, Madras High CourtShobha Karandlaje image credit: Facebook
Published on

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇರಿಸಿದವರಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿತ್ತು ಎಂದು ಸಾರ್ವಜನಿಕವಾಗಿ  ಹೇಳಿಕೆ ನೀಡಿದ್ದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಪತ್ರಿಕಾಗೋಷ್ಠಿಯಲ್ಲಿ ಕ್ಷಮೆಯಾಚಿಸಿದರೆ ಅವರ ವಿರುದ್ಧದ ಪ್ರಕರಣ ಕೈಬಿಡಲಾಗುವುದು ಎಂದು ತಮಿಳುನಾಡು ಸರ್ಕಾರ ಬುಧವಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ

ಸರ್ಕಾರ ನಿರೀಕ್ಷಿಸುತ್ತಿರುವ ಕ್ಷಮಾಪಣೆಯ ಕರಡು ಸ್ವರೂಪವನ್ನು ಸಹ ತಮಿಳುನಾಡು ಅಡ್ವೊಕೇಟ್ ಜನರಲ್ ಪಿ ಎಸ್ ರಾಮನ್ ಅವರು ನ್ಯಾಯಾಲಯದ ಮುಂದಿರಿಸಿದರು.

Also Read
'ಕೆಫೆ ಸ್ಫೋಟಿಸಿದವರಿಗೆ ತಮಿಳುನಾಡಲ್ಲಿ ತರಬೇತಿ ದೊರತಿದೆ ಎಂದು ನಿಮಗೆ ಹೇಳಿದ್ದು ಯಾರು?' ಶೋಭಾಗೆ ಹೈಕೋರ್ಟ್ ಪ್ರಶ್ನೆ

ಮಧುರೈ ನಗರ ಸೈಬರ್ ಕ್ರೈಂ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಶೋಭಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರೆದುರು ರಾಮನ್‌ ಅವರು ಈ ವಿಚಾರ ತಿಳಿಸಿದರು.

ಈ ವೇಳೆ ವಾದ ಮಂಡಿಸಿದ ಶೋಭಾ ಪರ ವಕೀಲರು ಆಕೆ ಈಗಾಗಲೇ ಕ್ಷಮೆ ಕೋರಿದ್ದು ತಮ್ಮ ಎಕ್ಸ್‌ ಸಾಮಾಜಿಕ ಖಾತೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದರು. ಆದರೆ ಕ್ಷಮೆಯಾಚನೆ ಸಮರ್ಪಕವಾಗಿದೆ ಎಂದು ನ್ಯಾಯಾಲಯ ಒಪ್ಪಲಿಲ್ಲ.  

ಎಕ್ಸ್‌ ನಲ್ಲಿ ಹೆಚ್ಚಿನ ಜನ ಖಾತೆ ಹೊಂದಿಲ್ಲದ ಕಾರಣ ಅವರು ಅಲ್ಲಿ ಕ್ಷಮೆಯಾಚಿಸುವುದು ಸಾಕಾಗುವುದಿಲ್ಲ.‌ ಸ್ವತಃ ತಾವೂ ಸಹ ಎಕ್ಸ್‌ ಖಾತೆ ಹೊಂದಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಸಾರ್ವಜನಿಕ ವ್ಯಕ್ತಿಗಳು ಹೇಳಿಕೆಗಳನ್ನು ನೀಡುವಾಗ ಹೆಚ್ಚು ಜಾಗೃತರಾಗಿರಬೇಕು ಎಂದು ಇದೇ ವೇಳೆ ಅವರು ಕಿವಿಮಾತು ಹೇಳಿದರು.

Also Read
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

“ಏನಾಗುತ್ತಿದೆ ಎಂಬುದನ್ನು ಅಧಿಕಾರದಲ್ಲಿರುವ ವ್ಯಕ್ತಿಗಳು ತಿಳಿದಿರಬೇಕು. ಕೆಳಹಂತದಲ್ಲಿರುವವರು ಆಕೆಯ ಹೇಳಿಕೆಗಳನ್ನು ವಿಭಿನ್ನವಾಗಿ ನೋಡಿ  ವ್ಯಾಖ್ಯಾನಿಸಿದರೆ ಏನಾಗಬಹುದು ಎಂದು ಊಹಿಸಿ” ಎಂಬುದಾಗಿ ನ್ಯಾಯಮೂರ್ತಿ ಜಯಚಂದ್ರ ಹೇಳಿದರು.

ಸಚಿವೆ ಕರಂದ್ಲಾಜೆ ಅವರು ಪತ್ರಿಕಾಗೋಷ್ಠಿ ನಡೆಸಲು ಸಿದ್ಧರಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸೂಚನೆಗಳನ್ನು ಪಡೆಯಲು ಅವರ ಪರ ವಕೀಲರಿಗೆ ಹೈಕೋರ್ಟ್ ಹತ್ತು ದಿನಗಳ ಕಾಲಾವಕಾಶ ನೀಡಿತು.

Kannada Bar & Bench
kannada.barandbench.com