ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಕೇಂದ್ರ ಸರ್ಕಾರ ಪರಿಹಾರ ಧನ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಇತ್ತೀಚಿನ ಪ್ರವಾಹ ಮತ್ತು ಮೈಚುಂಗ್ ಚಂಡಮಾರುತದಿಂದ ಉಂಟಾದ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡುವುದಕ್ಕಾಗಿ ₹ 37,000 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೂಲ ದಾವೆಯಾಗಿ ಸಲ್ಲಿಸಿದ ತನ್ನ ಮನವಿಯಲ್ಲಿ ತಿಳಿಸಿದೆ.
ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡಲು ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋದ ಎರಡನೇ ರಾಜ್ಯ ತಮಿಳುನಾಡು. ಬರ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಆರ್ಥಿಕ ನೆರವು ನೀಡುತ್ತಿಲ್ಲ ಎಂದು ಆರೋಪಿಸಿ ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿತ್ತು.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) ₹18,171.44 ಕೋಟಿ ಪರಿಹಾರ ನೀಡಲು ನಿರ್ದೇಶಿಸಬೇಕು ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರ ಕೋರಿತ್ತು.
ಅರ್ಜಿಯ ಪ್ರಮುಖಾಂಶಗಳು
ಹಣ ಬಿಡುಗಡೆ ವಿಳಂಬ ಮಾಡುತ್ತಿರುವುದಕ್ಕೆ ಕೇಂದ್ರ ಸರ್ಕಾರದ ಬಳಿ ಯಾವುದೇ ಸಮರ್ಥನೆ ಇಲ್ಲ.
ಉಳಿದ ರಾಜ್ಯಗಳಿಗೆ ಹೋಲಿಸಿದರೆ ತನಗೆ ಮಾಡಲಾಗುತ್ತಿರುವ ತಾರತಮ್ಯವು ವರ್ಗ ತಾರತಮ್ಯಕ್ಕೆ ಸಮ.
ಇದು ವಿಪತ್ತುಗಳಿಂದ ಬಳಲಿರುವವರನ್ನು ಹಾಗೂ ಸರಿಪಡಿಸಲಾಗದಷ್ಟು ಸಂಕಷ್ಟ ಅನುಭವಿಸಿರುವವರನ್ನು ಮತ್ತೂ ಹೆಚ್ಚಿನ ಸಂಕಷ್ಟಗಳಿಗೆ ದೂಡುವುದಲ್ಲದೆ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ.
ಆರ್ಥಿಕ ಸಂಬಂಧಗಳು ಮತ್ತು ತೆರಿಗೆ ವಿಂಗಡಣೆಯ ಒಕ್ಕೂಟ ಸ್ವರೂಪವನ್ನೂ ಒಳಗೊಂಡಂತೆ ಈ ಮಲತಾಯಿ ಧೋರಣೆಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ನೀತಿಯನ್ನು ಉಲ್ಲಂಘಿಸುತ್ತದೆ.
ಹಲವು ಬಾರಿ ಮನವಿ ಮಾಡಿದರೂ ಕೇಂದ್ರ ಸರಕಾರ ರಾಜ್ಯದ ಬೇಡಿಕೆ ಮನ್ನಿಸಿಲ್ಲ.
2023ರ ಡಿಸೆಂಬರ್‌ನಲ್ಲಿ ಮೈಚಾಂಗ್ ಚಂಡಮಾರುತದಿಂದ ಉಂಟಾದ ಹಾನಿಗೆ ಸಂಬಂಧಿಸಿದಂತೆ ₹ 19,692.69 ಕೋಟಿ ಧನ ಸಹಾಯ ಮಾಡುವಂತೆ ತಾನು ಬರೆದಿದ್ದ ಪತ್ರವನ್ನು ಗಣನೆಗೆ ತೆಗೆದುಕೊಳ್ಳಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು.
ಆ ಹಣವನ್ನು ಅದು ನಿಗದಿತ ಗಡುವಿನೊಳಗೆ ಬಿಡುಗಡೆ ಮಾಡಬೇಕು.
ಇದಲ್ಲದೆ, ಕಳೆದ ಡಿಸೆಂಬರ್‌ನಲ್ಲಿ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಹಾನಿಗೆ ₹18,214.52 ಕೋಟಿ ನೆರವು ಕೋರಲಾಗಿದೆ.
ಪ್ರಕೃತಿ ವಿಕೋಪದಿಂದ ಉಂಟಾದ ಹಾನಿ ಕುರಿತು ಅಂತರ ಸಚಿವಾಲಯದ ತಂಡ ಸಲ್ಲಿಸಿದ್ದ ವರದಿ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ.
ಈ ಬಗೆಯ ನಿಷ್ಕ್ರಿಯತೆಯು ಮೇಲ್ನೋಟಕ್ಕೆ ಅಕ್ರಮವಾಗಿದ್ದು, ಸ್ವೇಚ್ಛೆಯಿಂದ ಕೂಡಿದೆ. ರಾಜ್ಯದ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ.
ಈ ನಿಷ್ಕ್ರಿಯತೆಯು ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿರುವುದಲ್ಲದೆ, ಜನರಿಗೆ ಮಾನಸಿಕ ಯಾತನೆ ಮತ್ತು ಸಂಕಷ್ಟ ಉಂಟುಮಾಡುತ್ತಿದೆ.
ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ಪಿ ವಿಲ್ಸನ್ ಮತ್ತು ವಕೀಲ ಡಿ ಕುಮನನ್ ಅರ್ಜಿ ಸಲ್ಲಿಸಿದ್ದಾರೆ.