ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಗ್ರಾಮೀಣ ವಿದ್ಯಾರ್ಥಿಗಳ ಮೇಲೆ ಪರಿಣಾಮ: ನೀಟ್ ವಿರುದ್ಧ ಸುಪ್ರೀಂ ಮೊರೆ ಹೋದ ತಮಿಳುನಾಡು

ಕೇಂದ್ರ ಸರ್ಕಾರ ಮತ್ತು ಒಂದಕ್ಕಿಂತ ಅಧಿಕ ರಾಜ್ಯಗಳ ನಡುವಿನ ವ್ಯಾಜ್ಯಗಳನ್ನು ಆಲಿಸಲು ಸುಪ್ರೀಂ ಕೋರ್ಟ್ಗೆ ಅಧಿಕಾರ ನೀಡುವ ಸಂವಿಧಾನದ 131ನೇ ವಿಧಿಯಡಿ ಅರ್ಜಿಯನ್ನು ಮೂಲ ದಾವೆಯಾಗಿ ಸಲ್ಲಿಸಲಾಗಿದೆ.
Supreme Court, Exams
Supreme Court, Exams
Published on

ದೇಶದ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಸಿಂಧುತ್ವ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

ಕೇಂದ್ರ ಸರ್ಕಾರ ಮತ್ತು ಒಂದಕ್ಕಿಂತ ಅಧಿಕ ರಾಜ್ಯಗಳ ನಡುವಿನ ವ್ಯಾಜ್ಯಗಳನ್ನು ಆಲಿಸಲು ಸುಪ್ರೀಂ ಕೋರ್ಟ್‌ಗೆ ಅಧಿಕಾರ ನೀಡುವ ಸಂವಿಧಾನದ 131ನೇ ವಿಧಿಯಡಿ ಅರ್ಜಿಯನ್ನು ಮೂಲ ದಾವೆಯಾಗಿ ಸಲ್ಲಿಸಲಾಗಿದೆ.

ವೈದ್ಯಕೀಯ ಕಾಲೇಜುಗಳಲ್ಲಿನ ಸರ್ಕಾರಿ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ರಾಜ್ಯಗಳ ಅಧಿಕಾರ ಕಸಿದುಕೊಳ್ಳುವುದರಿಂದ ನೀಟ್‌ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ಸರ್ಕಾರ ವಾದಿಸಿದೆ.

ಅರ್ಜಿಯ ಪ್ರಮುಖಾಂಶಗಳು

  • ಶಿಕ್ಷಣ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು ರಾಜ್ಯದ ವಿಶ್ವವಿದ್ಯಾಲಯಗಳಿಗೆ ಸಂಬಂಧಪಟ್ಟ ಶಿಕ್ಷಣವನ್ನು ನಿಯಂತ್ರಿಸುವ ಹಕ್ಕು ರಾಜ್ಯಗಳಿಗೆ ಇರಬೇಕು.

  • ಸಂವಿಧಾನದ 14 ನೇ ವಿಧಿಯಡಿ ಒದಗಿಸಲಾದ ಸಮಾನತೆಯ ಹಕ್ಕಿಗೆ ಪರೀಕ್ಷೆ ಧಕ್ಕೆ ತರುತ್ತಿದೆ.

  • ತಮಿಳುನಾಡಿನ ವಿದ್ಯಾರ್ಥಿಗಳು ಅದರಲ್ಲಿಯೂ ಗ್ರಾಮೀಣ ಪ್ರದೇಶಕ್ಕೆ ಸೇರಿದ ವಿದ್ಯಾರ್ಥಿಗಳು ಮತ್ತು ತಮಿಳುನಾಡು ರಾಜ್ಯ ಶಿಕ್ಷಣ ಮಂಡಳಿಯ ಮಾನ್ಯತೆ ಪಡೆದ ಶಾಲೆಗಳ ವಿದ್ಯಾರ್ಥಿಗಳ ಮೇಲೆ ಪರೀಕ್ಷೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

  • ನೀಟ್‌ ಅಸಮಾನತೆಯನ್ನು ಹೆಚ್ಚಿಸುತ್ತದೆ., ಹೆಚ್ಚು ಸಂಪನ್ಮೂಲ ಇರುವ ನಗರ ಮತ್ತ ಅರೆ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ರಾಜ್ಯ ಶಿಕ್ಷಣ ಮಂಡಳಿಯಲ್ಲಿ ಶಿಕ್ಷಣ ಪಡೆದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನನುಕೂಲಕರವಾಗಿದೆ.

  • ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಸೂಪರ್-ಸ್ಪೆಷಾಲಿಟಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ನೀಟ್‌ ಪರೀಕ್ಷೆ ಉತ್ತೀರ್ಣವಾಗಿರಬೇಕೆಂದು ಕಡ್ಡಾಯಗೊಳಿಸುವ ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯಿದೆಯ ಸೆಕ್ಷನ್ 14,  ಭಾರತೀಯ ವೈದ್ಯಕೀಯ ವ್ಯವಸ್ಥೆಗಾಗಿನ ರಾಷ್ಟ್ರೀಯ ಆಯೋಗ ಕಾಯಿದೆ- 2020 ಹಾಗೂ ರಾಷ್ಟ್ರೀಯ ಹೋಮಿಯೊಪಥಿ ಆಯೋಗ ಕಾಯಿದೆ- 2020 ಸರಿ ಇಲ್ಲ.

ಸಾಮಾಜಿಕ ಸಮಾನತೆಗೆ ತುತ್ತಾದ ವಿದ್ಯಾರ್ಥಿಗಳ ಮೇಲೆ ನೀಟ್‌ ಉಂಟು ಮಾಡುವ ಪ್ರಭಾವ ಪರಿಶೀಲಿಸಲು ತಮಿಳುನಾಡು ಸರ್ಕಾರ ಈ ಹಿಂದೆ ಒಂಬತ್ತು ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಕರು ನಾಗರಾಜನ್ ಅವರು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 13 ಜುಲೈ 2021ರಂದು ಹೈಕೋರ್ಟ್ ಮನವಿ ವಜಾಗೊಳಿಸಿತ್ತು. ಅಸಾಂವಿಧಾನಿಕ ಎಂದು ಘೋಷಿಸಿ ನೀಟ್‌ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತ್ತು. ಆದರೆ, 2013ರ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 2016ರಲ್ಲಿ ತೀರ್ಪನ್ನು ಹಿಂಪಡೆದಿತ್ತು.

Kannada Bar & Bench
kannada.barandbench.com