ಕಿರಿಯ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ತೆಹಲ್ಕಾ ನಿಯತಕಾಲಿಕದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅವರನ್ನು ಶುಕ್ರವಾರ ಗೋವಾದ ನ್ಯಾಯಾಲಯ ಖುಲಾಸೆಗೊಳಿಸಿದೆ.
ತೇಜ್‌ಪಾಲ್ ನಿರ್ದೋಷಿ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕ್ಷಮಾ ಜೋಶಿ ತೀರ್ಪು ಪ್ರಕಟಿಸಿದರು. ನ್ಯಾಯಾಲಯ ತನ್ನನ್ನು ಖುಲಾಸೆಗೊಳಿಸಿದ ಬೆನ್ನಿಗೇ ಹೇಳಿಕೆ ಬಿಡುಗಡೆ ಮಾಡಿರುವ ತೇಜ್‌ಪಾಲ್ ತನ್ನನ್ನು ಪ್ರಕರಣದಲ್ಲಿ ಪ್ರತಿನಿಧಿಸಿದ್ದ ವಕೀಲರಾದ ಪ್ರಮೋದ್ ದುಬೆ, ಅಮೀರ್ ಖಾನ್, ಅಂಕುರ್ ಚಾವ್ಲಾ, ಅಮಿತ್ ದೇಸಾಯಿ, ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್, ಅಮನ್ ಲೇಖಿ, ಸಂದೀಪ್ ಕಪೂರ್, ರಯಾನ್ ಕಾರಂಜವಾಲಾ ಮತ್ತು ಶ್ರೀಕಾಂತ್ ಶಿವಡೆ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಕೋವಿಡ್‌ನಿಂದ ಕಳೆದ ವಾರವಷ್ಟೇ ವಿಧಿವಶರಾದ ವಕೀಲ ರಾಜೀಬ್ ಗೋಮ್ಸ್ ಅವರಿಗೂ ತೇಜ್‌ಪಾಲ್ ಧನ್ಯವಾದ ಸಲ್ಲಿಸಿದ್ದಾರೆ. 2013ರಲ್ಲಿ ಗೋವಾದ ಪಂಚಾತಾರಾ ಹೋಟೆಲ್‌ನ ಎಲಿವೇಟರ್‌ನಲ್ಲಿ ಕಿರಿಯ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ತೇಜ್‌ಪಾಲ್ ಮೇಲೆ ಹೊರಿಸಲಾಗಿತ್ತು.
ಅತ್ಯಾಚಾರ ಸೇರಿದಂತೆ ವಿವಿಧ ಅಪರಾಧಗಳ ಅಡಿ ತೇಜ್‌ಪಾಲ್ ವಿರುದ್ಧ ಗೋವಾ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡಿದ್ದರು. 2013ರ ನವೆಂಬರ್‌ನಲ್ಲಿ ಬಂಧಿತರಾಗಿದ್ದ ತೇಜ್‌ಪಾಲ್ ಅವರು 2014ರ ಜುಲೈನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ತೇಜ್‌ಪಾಲ್ ವಿರುದ್ಧ 2017ರಲ್ಲಿ ವಿಚಾರಣೆ ಆರಂಭವಾಗಿತ್ತು. ಇದರ ಬೆನ್ನಿಗೇ ತೇಜ್‌ಪಾಲ್ ಅವರು ತಮ್ಮ ವಿರುದ್ಧದ ಆರೋಪಗಳು ಕಲ್ಪಿತವಾಗಿರುವುದರಿಂದ ಮೊಕದ್ದಮೆ ವಜಾಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ 2019ರ ಆಗಸ್ಟ್ 19ರಂದು ಮನವಿಯನ್ನು ವಜಾಗೊಳಿಸಿತ್ತು.